ಮೈಸೂರು: ಮೈಸೂರಿನಲ್ಲಿ ಅಧಿಕಾರಿಗಳ ವರ್ಗಾವಣೆ ಪರ್ವ ಮುಂದುವರೆದಿದ್ದು, ಐಎಎಸ್ ಮತ್ತು ಐಪಿಎಸ್ ನಂತರ ಇದೀಗ ಜಿಲ್ಲಾ ಆರೋಗ್ಯಾಧಿಕಾರಿಯನ್ನು ವರ್ಗಾವಣೆ ಮಾಡಲಾಗಿದೆ.
ಇದುವರೆಗೆ ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಡಾ.ಟಿ. ಅಮರನಾಥ್ ಅವರನ್ನು ವರ್ಗಾವಣೆ ಮಾಡಲಾಗಿದ್ದು ಅವರ ಸ್ಥಾನಕ್ಕೆ ಆರೋಗ್ಯ ಇಲಾಖೆ ವಿಭಾಗಿಯ ಉಪನಿರ್ದೇಶಕ ಡಾ. ಕೆ.ಎಚ್.ಪ್ರಸಾದ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.
ಕೋವಿಡ್ ನಿರ್ವಹಣೆ ಸಮರ್ಪಕವಾಗಿ ಮಾಡದ ಕಾರಣ ಡಾ.ಅಮರ್ ನಾಥ್ ಅವರಿಗೆ ಸರ್ಕಾರ ವರ್ಗಾವಣೆ ಶಿಕ್ಷೆ ನೀಡಿದೆ ಎಂದು ಹೇಳಲಾಗುತ್ತಿದೆ. ಕೋವಿಡ್ ಸೋಂಕು ಹೆಚ್ಚಾದ ವೇಳೆ ಅದನ್ನು ನಿರ್ವಹಣೆ ಮಾಡುವಲ್ಲಿ ವಿಫಲರಾಗಿದ್ದಾರೆ ಎಂಬ ಆರೋಪವೂ ಕೇಳಿ ಬಂದಿತ್ತು. ಹೀಗಾಗಿ ವರ್ಗಾವಣೆ ಮಾಡಲಾಗಿದೆ. ಇದೀಗ ಜಿಲ್ಲಾ ಆರೋಗ್ಯಾಧಿಕಾರಿಯಾಗಿ ನೇಮಕಗೊಂಡಿರುವ ಡಾ. ಕೆ.ಎಚ್.ಪ್ರಸಾದ್ ಅವರಿಗೆ ಒಳ್ಳೆಯ ಹೆಸರಿದೆ., 2016 ರಿಂದ 2019ರವರೆಗೆ ಚಾಮರಾಜನಗರ ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.
ಮೈಸೂರು ಆರೋಗ್ಯಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿರುವ ಅವರು ಕೋವಿಡ್ ಸೋಂಕು ನಿಯಂತ್ರಣಕ್ಕೆ ನನ್ನ ಮೊದಲ ಆದ್ಯತೆ ನೀಡುವುದೇ ಮುಖ್ಯ ಗುರಿಯಾಗಿದ್ದು, ಸಂಪರ್ಕಿತರ ಪತ್ತೆ ಮಾಡುವುದು, ಮನೆ ಮನೆ ಸಮೀಕ್ಷೆಗೆ ಹೆಚ್ಚಿನ ಒತ್ತು ನೀಡುವುದರೊಂದಿಗೆ. ಜಿಲ್ಲೆಯಲ್ಲಿ 18ವರ್ಷದ ಮೇಲಿನ ಎಲ್ಲರಿಗೂ ಲಸಿಕೆ ನೀಡಲು ಒತ್ತು ನೀಡಲಾಗುವುದು ಎಂದು ಹೇಳಿದ್ದಾರೆ.