ಮೈಸೂರು: ಜಿಲ್ಲಾಧಿಕಾರಿ ಮತ್ತು ನಗರಪಾಲಿಕೆ ಆಯುಕ್ತರ ನಂತರ ಪೊಲೀಸ್ ವರಿಷ್ಠಾಧಿಕಾರಿ ಮತ್ತು ನಗರ ಉಪ ಪೊಲೀಸ್ ಆಯುಕ್ತ ರನ್ನು ವರ್ಗಾವಣೆ ಮಾಡಲಾಗಿದ್ದು, ನೂತನವಾಗಿ ನೇಮಕಗೊಂಡ ಪೊಲೀಸ್ ಅಧಿಕಾರಿಗಳು ಇದೀಗ ಅಧಿಕಾರ ಸ್ವೀಕರಿಸಿದ್ದಾರೆ.
ಮೈಸೂರಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದು ಆ ಸಂಕಷ್ಟದ ನಡುವೆಯೇ ಆಯಕಟ್ಟಿನ ಅಧಿಕಾರಿಗಳು ವರ್ಗಾವಣೆಗೊಂಡಿದ್ದು, ಈಗಾಗಲೇ ಜಿಲ್ಲಾಧಿಕಾರಿ ಮತ್ತು ನಗರಪಾಲಿಕೆ ಆಯುಕ್ತರು ಅಧಿಕಾರ ಸ್ವೀಕರಿಸಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಗುರುವಾರ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕಗೊಂಡಿರುವ ಆರ್. ಚೇತನ್ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಅವರಿಗೆ ನಿರ್ಗಮಿತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಹೂಗುಚ್ಛ ನೀಡಿ ಸ್ವಾಗತಿಸಿ ಬಳಿಕ ಅಧಿಕಾರ ಹಸ್ತಾಂತರಿಸಿದರು.
ಮೈಸೂರು ಎಸ್ಪಿ ಆಗಿ ನೇಮಕಗೊಂಡಿರುವ ಆರ್.ಚೇತನ್ ಅವರು ಈ ಹಿಂದೆ ಕರಾವಳಿ ಸೆಕ್ಯೂರಿಟಿ ಪೊಲೀಸ್ (ಸಿಎಫ್ ಸಿ) ಪೊಲೀಸ್ ವರಿಷ್ಠಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ನಿರ್ಗಮಿತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಅವರು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕವಾಗಿದ್ದಾರೆ. ಅಧಿಕಾರ ಸ್ವೀಕರಿಸಿ ಮಾತನಾಡಿದ ಎಸ್ಪಿ ಆರ್.ಚೇತನ್ ಅವರು ಜಿಲ್ಲೆಯಲ್ಲಿ ಅಪರಾಧ ಕೃತ್ಯವನ್ನು ತಡೆಯುವಲ್ಲಿ ಶ್ರಮಿಸುವುದಾಗಿ ಹೇಳಿದರು. ಇನ್ನೊಂದೆಡೆ ಮೈಸೂರು ನಗರ ಉಪ ಪೊಲೀಸ್ ಆಯುಕ್ತರಾಗಿ ಪ್ರದೀಪ್ ಗುಂಟಿ ಅವರು ಕೂಡ ಅಧಿಕಾರ ಸ್ವೀಕರಿಸಿದ್ದಾರೆ.