ಮೈಸೂರು: ಕೇದಾರನಾಥ ಆವರಣದಲ್ಲಿ ನಿರ್ಮಿಸಲಾಗುತ್ತಿರುವ ಶ್ರೀ ಶಂಕರಾಚಾರ್ಯರ ಬೃಹತ್ ಪ್ರತಿಮೆಯನ್ನು ಮೈಸೂರಿನ ಶಿಲ್ಪಿಯೊಬ್ಬರು ನಿರ್ಮಾಣ ಮಾಡುತ್ತಿರುವುದು ಹೆಮ್ಮೆಯ ವಿಚಾರವಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ತೀರ್ಮಾನದಂತೆ ಕೇದಾರನಾಥದ ಐಕ್ಯ ಸ್ಥಳದಲ್ಲಿ ಶ್ರೀ ಶಂಕರಾಚಾರ್ಯರ ಅಧ್ಯಯನ ಪೀಠ ಮತ್ತು ಮ್ಯೂಸಿಯಂ ಸ್ಥಾಪನೆ ಮಾಡಲಾಗುತ್ತಿದ್ದು, ಅಲ್ಲಿ ಬೃಹತ್ ಗಾತ್ರದ ಪ್ರತಿಮೆ ನಿರ್ಮಾಣ ಮಾಡಲಾಗುತ್ತಿದೆ.

ಈ ಪ್ರತಿಮೆ ನಿರ್ಮಾಣಕ್ಕಾಗಿ ದೇಶದ ಹಲವು ಭಾಗದ ಶಿಲ್ಪ ಕಲಾವಿದರನ್ನು ಆಹ್ವಾನಿಸಲಾಗಿತ್ತು. ಅದರಲ್ಲಿ ಕರ್ನಾಟಕದ ನಾಲ್ವರು ಕಲಾವಿದರು ಭಾಗವಹಿಸಿದ್ದು, ಈ ಪೈಕಿ ಮೈಸೂರಿನ ಶಿಲ್ಪಿ  ಅರುಣ್ ಯೋಗಿರಾಜ್  ಅವರು ಅಂತಿಮವಾಗಿ ಪ್ರತಿಮೆ ನಿರ್ಮಾಣಕ್ಕೆ ಆಯ್ಕೆಯಾಗಿದ್ದು, ಆ ಮೂಲಕ ಅವರು ಮೈಸೂರಿನ ಹಿರಿಮೆಯನ್ನು ಹೆಚ್ಚಿಸಿದ್ದಾರೆ. ಹೀಗಾಗಿ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸರಸ್ವತಿಪುರಂನಲ್ಲಿರುವ ಶಿಲ್ಪ ಕಲಾ ಕಾಲೇಜು ಆವರಣದಲ್ಲಿ ಪ್ರತಿಮೆಯನ್ನು ಕೆತ್ತನೆ ಮಾಡಿರುವ ಸ್ಥಳದಲ್ಲೇ ಶಿಲ್ಪ ಕಲಾವಿದ ಅರುಣ್ ಯೋಗಿರಾಜ್    ಸನ್ಮಾನಿಸಿ ಅಭಿನಂದಿಸಲು ತೀರ್ಮಾನಿಸಿದೆ.

ಪ್ರತಿಮೆ ನಿರ್ಮಾಣ ಸ್ಥಳಕ್ಕೆ  ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ  ಭಾನುಪ್ರಕಾಶ್ ಶರ್ಮಾ ಹಾಗೂ ಎಂ ಆರ್ ಬಾಲಕೃಷ್ಣ ಮತ್ತು ಬ್ರಾಹ್ಮಣ ಸಮಾಜದ ಮುಖಂಡರಾದ ಹರೀಶ್ ಯುವ ಮುಖಂಡರಾದ ವಿಕ್ರಂ ಅಯ್ಯಂಗಾರ್  ಭೇಟಿ ನೀಡಿ ಪ್ರತಿಮೆಯನ್ನು ವೀಕ್ಷಿಸಿ ಶಿಲ್ಪಿಯ ಕಾರ್ಯವೈಖರಿಯನ್ನು ಶ್ಲಾಘಿಸಿದ್ದಾರೆ.

ಅಭಿನಂದನಾ ಕಾರ್ಯಕ್ರಮ ಮಂಗಳವಾರ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಸಚ್ಚಿದಾನಂದ ಮೂರ್ತಿ, ಶಾಸಕರಾದ ಎಸ್.ಎ.ರಾಮದಾಸ್, ಎಲ್. ನಾಗೇಂದ್ರ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ  ಹೆಚ್.ವಿ. ರಾಜೀವ್ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ.

 

By admin