ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಪ್ರಸಿದ್ದ ಯಾತ್ರಾ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ನಿರ್ಮಾಣ ಮಾಡಿರುವ ೧೦೮ ಅಡಿ ಎತ್ತರದ ಮಲೆ ಮಹದೇಶ್ವರ ಸ್ವಾಮಿ ಪ್ರತಿಮೆ, ಬೆಳ್ಳಿರಥವನ್ನು ಮುಖ್ಯಮಂತ್ರಿಯವರಾದ ಬಸವರಾಜ ಬೊಮ್ಮಾಯಿ ಅವರು ಇಂದು ಲೋಕಾರ್ಪಣೆ ಮಾಡಿದರು. ಜೊತೆಗೆ ಇತರೆ ವಿವಿಧ ಕಾಮಗಾರಿಗಳ ಉದ್ಘಾಟನೆ ನೆರವೇರಿಸಿದರು.
ಮಹದೇಶ್ವರಬೆಟ್ಟದ ದೀಪದ ಒಡ್ಡುವಿನಲ್ಲಿ ಸಮಾರಂಭ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿಯವರಾದ ಬಸವರಾಜ ಬೊಮ್ಮಾಯಿ ಅವರು ಮಹದೇಶ್ವರರ ಪ್ರತಿಮೆ ನಿರ್ಮಾಣದಿಂದ ಕ್ಷೇತ್ರದ ಹಿರಿಮೆ, ಗರಿಮೆ ಎತ್ತಿ ಹಿಡಿಯುವ ಕೆಲಸವಾಗಿದೆ. ಇಷ್ಟು ದೊಡ್ಡ ಮೂರ್ತಿ ಚೆನ್ನಾಗಿ ಮೂಡಿಬಂದಿದ್ದು, ಜೀವಕಳೆ ಇದೆ. ಮಹದೇಶ್ವರರ ಪ್ರತಿಮೆ ನಿರ್ಮಾಣಕ್ಕಾಗಿ ಶ್ರಮಿಸಿದ ಎಲ್ಲರೂ ತಮ್ಮ ಬದುಕಿನ ಸಾರ್ಥಕತೆಯನ್ನು ಕಂಡುಕೊಂಡಿದ್ದಾರೆ. ಮಹದೇಶ್ವರರ ಪ್ರತಿಮೆ ಅನಾವರಣಗೊಳಿಸುವ ಅವಕಾಶ ದೊರೆತಿದ್ದು ನನ್ನ ಯೋಗ ಎಂದರು.
ಮಲೆ ಮಹದೇಶ್ವರರ ಪವಾಡಗಳು ಜನರ ಮನಸ್ಸಿನಲ್ಲಿ ಉಳಿದಿದೆ. ಮಲೆ ಮಹದೇಶ್ವರರನ್ನು ಪೂಜಿಸಿ ನಂತರ ತಮ್ಮ ಕಾಯಕವನ್ನು ಪ್ರಾರಂಭಿಸುವ ಲಕ್ಷಾಂತರ ಜನರು ಈ ಭಗದಲ್ಲಿ ಇದ್ದಾರೆ. ಪ್ರತೀ ವರ್ಷ ಎರಡರಿಂದ ಮೂರು ಲಕ್ಷ ಜನ ಕಾಲ್ನಡಿಗೆಯಲ್ಲೇ ಬಂದು ಮಾದಪ್ಪನ ದರ್ಶನ ಪಡೆದು ತಮ್ಮ ಭಕ್ತಿಯನ್ನು ಮೆರೆಯುತ್ತಾರೆ ಎಂದು ಮುಖ್ಯಮಂತ್ರಿಯವರು ತಿಳಿಸಿದರು.
ಮಲೆ ಮಹದೇಶ್ವರ ಬೆಟ್ಟದಲ್ಲಿ ನೂರಾರು ಕೋಟಿ ಅಭಿವೃದ್ದಿ ಕಾರ್ಯಗಳನ್ನು ಹಮ್ಮಿಕೊಂಡಿದ್ದೇವೆ. ಕ್ಷೇತ್ರಕ್ಕೆ ಬರುವ ಭಕ್ತರಿಗೆ ವಾಸ್ತವ್ಯ, ದಾಸೋಹ, ದರ್ಶನ, ಸಾರಿಗೆ ವ್ಯವಸ್ಥೆ ಸೇರದಂತೆ ಹಲವು ಸೌಕರ್ಯಗಳನ್ನು ಒದಗಿಸುವ ಕಾರ್ಯವನ್ನು ಪ್ರಾಧಿಕಾರದಿಂದ ಮಾಡಲಾಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರ ಕಾಳಜಿಯಿಂದ ಅನೇಕ ಅಭಿವೃದ್ದಿ ಕೆಲಸಗಳು ನಡೆಯುತ್ತಿದೆ ಎಂದರು.
ಮಹದೇಶ್ವರನ ದರ್ಶನ ಪಡೆದು ಸಮಸ್ತ ಕನ್ನಡ ನಾಡಿನ ಜನರ ಬದುಕು ಸುಭೀಕ್ಷವಾಗಲಿ. ಎಲ್ಲರೂ ಸ್ವಾವಲಂಬಿಗಳಾಗಲಿ. ಸಮೃದ್ದ ಕರ್ನಾಟಕಕ್ಕೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿದ್ದೇನೆ. ನಾಡಿನ ದಾರ್ಶನಿಕರ ಪ್ರೇರಣೆ ಎಲ್ಲರೂ ಪಡೆಯುವಂತಾಗಲಿ. ಮಹದೇಶ್ವರರ ಚರಿತ್ರೆ ಪವಾಡಗಳನ್ನು ತಿಳಿಯುವಂತಾಗಲಿ ಎಂದು ಮುಖ್ಯಮಂತ್ರಿಯವರು ತಿಳಿಸಿದರು.
ಇತ್ತೀಚೆಗೆ ಇಲ್ಲಿಗೆ ಬಂದಾಗ ಈ ಭಾಗದ ಕಾಡಂಚಿನ ಜನರ ಸಮಸ್ಯೆಗಳಾದ ಶಾಲೆ, ಆಸ್ಪತ್ರೆ, ಬಸ್, ಸಂಪರ್ಕ ರಸ್ತೆ ಸೇರಿದಂತೆ ಇತರೆ ಸಮಸ್ಯೆಗಳ ಬಗ್ಗೆ ಗಮನಕ್ಕೆ ತರಲಾಗಿತ್ತು. ಈ ಬಗ್ಗೆ ಜಿಲ್ಲಾಧಿಕಾರಿಗಳು ವರದಿ ಕಳುಹಿಸಿದ್ದಾರೆ. ಎರಡು ದಿನದಲ್ಲಿ ಈ ಬಗ್ಗೆ ಸಮಗ್ರ ಅದೇಶ ಹೊರಡಿಸಲಿದ್ದೇವೆ. ಜಾಗೇರಿ ಸಮಸ್ಯೆಯನ್ನೂ ಸಹ ಅತೀ ಶೀಘ್ರದಲ್ಲಿ ಪರಿಹರಿಸಲಿದ್ದೇವೆ. ಸರ್ವೆ ಕಾರ್ಯ ಮುಗಿದಿದ್ದು, ಕೆಲ ತಾಂತ್ರಿಕ ಕೆಲಸವಿದೆ. ಮೂರು ನಾಲ್ಕು ದಿನದಲ್ಲಿ ಆದೇಶ ಮಾಡಲಿದ್ದೇವೆ ಎಂದು ಮುಖ್ಯ ಮಂತ್ರಿಯವರಾದ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ವಸತಿ, ಮೂಲಸೌಲಭ್ಯ ಅಭಿವೃದ್ದಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ಮಾತನಾಡಿ ಈ ದಿನ ನನ್ನ ಜೀವನದ ಅವಿಸ್ಮರಣೀಯವಾಗಿದೆ. ಮಹದೇಶ್ವರರ ಪ್ರತಿಮೆ ಉದ್ಘಾಟನೆಯು ಮನಸ್ಸಿಗೆ ಉಲ್ಲಾಸ ಭಕ್ತಿ ಉಂಟು ನೀಡುವ ಕಾರ್ಯವಾಗಿದೆ ಎಂದರು.
ಮಾದಪ್ಪನ ಪ್ರತಿಮೆ ನಿರ್ಮಾಣದಿಂದ ಮಹದೇಶ್ವರರ ವಿಚಾರ ಧಾರೆಗಳು ಜಗತ್ತಿಗೆ ಪರಿಚಯಿಸುವ ಕೆಲಸವಾಗಿದೆ. ಸರ್ಕಾರ ಹಾಗೂ ಪ್ರಾಧಿಕಾರ ಒಗ್ಗೂಡಿ ಕೆಲಸಮಾಡಿದರೆ ಹೆಚ್ಚಿನ ಅಭಿವೃದ್ದಿ ಕೆಲಸಗಳು ಆಗುತ್ತವೆ ಎಂಬುದಕ್ಕೆ ಈ ಕಾರ್ಯವೇ ನಿದರ್ಶನ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ತಿಳಿಸಿದರು.
ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದ ಸುತ್ತೂರು ಶ್ರೀಗಳು ಮಾತನಾಡಿ ಮಾದಪ್ಪನ ಕ್ಷೇತ್ರಕ್ಕೆ ಬಂದ ತಕ್ಷಣವೇ ಭಕ್ತಾಧಿಗಳಿಗೆ ಮಾದಪ್ಪನ ದರ್ಶನವಗುತ್ತಿದೆ. ಸಾಕ್ಷಾತ್ ಮಾದಪ್ಪನೆ ಹುಲಿಯನ್ನೇರಿ ಹೋಗುವಂತಹ ಪ್ರತಿಮೆ ನಿರ್ಮಾಣವಾಗಿದೆ. ಕತ್ತಲು ರಾಜ್ಯವನ್ನು ಬೆಳಕು ಮಾಡಿದ ಕೀರ್ತಿ ಮಹದೇಶ್ವರನಿಗೆ ಸಲ್ಲುತ್ತದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕರಾದ ಆರ್. ನರೇಂದ್ರ ಅವರು ಮಾತನಾಡಿ ಮಹದೇಶ್ವರರ ಪ್ರತಿಮೆ ಲೋಕಾರ್ಪಣೆಗೊಂಡ ಇಂದು ಐತಿಹಾಸಿಕ ದಿನವಾಗಿದೆ. ಮಹದೇಶ್ವರರ ಪ್ರತಿಮೆ ಸುಂದರವಾಗಿ ಮೂಡಿಬಂದಿದ್ದು, ಭಕ್ತಿ ಭಾವ ಉಂಟು ಮಾಡಿದೆ. ಉಳಿದ ಸಣ್ಣ ಪುಟ್ಟ ಕೆಲಸಗಳು ಮುಂದಿನ ದಿನಗಳಲ್ಲಿ ಆಗಲಿವೆ. ಕ್ಷೇತ್ರದಲ್ಲಿ ೧೮೭ ಕೋಟಿ ರೂ. ವೆಚ್ಚದ ಕಾಮಗಾರಿಗಳು ಎಲ್ಲರ ಸಹಕಾರದಿಂದ ಆಗಿವೆ ಎಂದರು.
ಇದೇ ವೇಳೆ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು.
ಸಾಲೂರು ಬೃಹನ್ಮಠದ ಹಿರಿಯ ಶ್ರೀಗಳಾದ ಗುರುಸ್ವಾಮಿಗಳು, ಪೀಠಾಧಿಪತಿಗಳಾದ ಶಾಂತಮಲ್ಲಿಕಾರ್ಜುನಸ್ವಾಮಿಗಳು, ಸಹಕಾರ ಸಚಿವರಾದ ಎಸ್.ಟಿ. ಸೋಮಶೇಖರ್, ಶಾಸಕರಾದ ಎನ್. ಮಹೇಶ್, ಕಾಡಾ ಅಧ್ಯಕ್ಷರದ ಜಿ. ನಿಜಗುಣರಾಜು, ವಿಧಾನಪರಿಷತ್ ನ ಮಾಜಿ ಸದಸ್ಯರಾದ ಪ್ರೊ. ಕೆ.ಆರ್. ಮಲ್ಲಿಕಾರ್ಜುನಪ್ಪ, ಜಿಲ್ಲಾ ಉಸ್ತುವಾರಿ ಸಚಿವರ ಪತ್ನಿ ಶೈಲಜ ಸೋಮಣ್ಣ, ಜಿಲ್ಲಾಧಿಕಾರಿ ಡಿ.ಎಸ್. ರಮೇಶ್, ಮಲೈ ಮಹದೇಶ್ವರ ಸ್ವಾಮಿ ಕ್ಷೇತ್ರಾಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಎಸ್. ಪೂವಿತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹೂ, ಪ್ರಾಧಿಕಾರದ ಉಪಕಾರ್ಯದರ್ಶಿ ಬಸವರಾಜು, ಉಪವಿಭಾಗಾಧಿಕಾರಿ ಗೀತಾ ಹುಡೇದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.