ಚಾಮರಾಜನಗರ: ಮಲೆಮಹದೇಶ್ವರ ಬೆಟ್ಟದಲ್ಲಿ ನಡೆಯಲಿರುವ ಮಹಾಶಿವರಾತ್ರಿ ಮತ್ತು ಯುಗಾದಿ ಜಾತ್ರಾ ಮಹೋತ್ಸವ ಅಚ್ಚುಕಟ್ಟಾಗಿ ನೆರವೇರಲು ಅಗತ್ಯವಿರುವ ಎಲ್ಲ ಸಿದ್ದತೆಗಳನ್ನು ಸಮರ್ಪಕವಾಗಿ ಕೈಗೊಳ್ಳುವಂತೆ ವಸತಿ, ಮೂಲಸೌಲಭ್ಯ ಅಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶ್ರೀ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ದಿ ಪ್ರಾಧಿಕಾರದ ಉಪಾಧ್ಯಕ್ಷರಾದ ವಿ. ಸೋಮಣ್ಣ ಅವರು ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಮಲೆಮಹದೇಶ್ವರ ಬೆಟ್ಟದಲ್ಲಿ ನಡೆಯುವ ಮಹಾಶಿವರಾತ್ರಿ ಮತ್ತು ಯುಗಾದಿ ಜಾತ್ರಾ ಮಹೋತ್ಸವ ಕಾರ್ಯಕ್ರಮಗಳ ಪೂರ್ವ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಲೆಮಹದೇಶ್ವರ ಬೆಟ್ಟಕ್ಕೆ ಜಾತ್ರಾ ಸಮಯದಲ್ಲಿ ಲಕ್ಷಾಂತರ ಭಕ್ತರು ಆಗಮಿಸಲಿದ್ದಾರೆ. ಬರುವ ಭಕ್ತಾಧಿಗಳಿಗೆ ಕುಡಿಯುವ ನೀರು, ವಾಸ್ತವ್ಯ, ದಾಸೋಹ, ಬಸ್, ಶೌಚಾಲಯ, ಸ್ನಾನ ಗೃಹಗಳು ಸೇರಿದಂತೆ ಅಗತ್ಯವಿರುವ ಎಲ್ಲಾ ಮೂಲ ಸೌಕರ್ಯಗಳಿಗೆ ಸರಿಯಾದ ವ್ಯವಸ್ಥೆ ಇರಬೇಕು. ಎಲ್ಲಿಯೂ ಕೊರತೆ ಬಾರದಂತೆ ನೋಡಿಕೊಳ್ಳಬೇಕೆಂದು ಉಸ್ತುವಾರಿ ಸಚಿವರು ತಿಳಿಸಿದರು.
ಮಲೆಮಹದೇಶ್ವರ ಬೆಟ್ಟ ಮುಖ್ಯ ರಸ್ತೆಯಲ್ಲಿ ಕೆಶಿಪ್ ವತಿಯಿಂದ ಈಗಾಗಲೇ ರಸ್ತೆ ಅಭಿವೃದ್ದಿ ಕೈಗೊಳ್ಳಲಾಗಿದೆ. ಜಾತ್ರಾ ಸಮಯದಲ್ಲಿ ತಾಳಬೆಟ್ಟದಿಂದ ಮಹದೇಶ್ವರ ಬೆಟ್ಟಕ್ಕೆ ಹೋಗಿ ಬರಲು ಯಾವುದೇ ತೊಂದರೆಯಾಗದಂತೆ ತುರ್ತಾಗಿ ರಸ್ತೆ ಸರಿಪಡಿಸಬೇಕು. ವಾಹನಗಳ ಸಂಚಾರಕ್ಕೆ ಯಾವುದೇ ಅಡಚಣೆಯಾಗಬಾರದು ಎಂದರು.
ಪ್ರಸ್ತುತ ಬಿಸಿಲನ ಬೇಗೆ ಇರುವುದರಿಂದ ಭಕ್ತಾಧಿಗಳಿಗೆ ಸೂಕ್ತ ನೆರಳಿನ ವ್ಯವಸ್ಥೆ ಕೈಗೊಳ್ಳಬೇಕಿದೆ. ಗುಣಮಟ್ಟದ ಶಾಮಿಯಾನ ಹಾಕಬೇಕು. ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಪೂರೈಕೆಯಾಗಬೇಕು. ಶೌಚಾಲಯಗಳು, ಸ್ನಾನ ಗೃಹಗಳು ಶುಚಿತ್ವದಿಂದ ಇರಬೇಕು. ಮುಡಿಸೇವೆ ಸ್ಥಳದಲ್ಲಿಯೂ ನೈರ್ಮಲ್ಯ ಕಾಪಾಡಿಕೊಳ್ಳಬೇಕು. ವಿಶೇಷವಾಗಿ ಕ್ಷೇತ್ರದಾದ್ಯಂತ ಸ್ವಚ್ಚತೆಗೆ ವಿಶೇಷ ಗಮನ ಕೊಡಬೇಕು ಎಂದು ಸಚಿವರು ತಿಳಿಸಿದರು.
ಭಕ್ತಾಧಿಗಳಿಗೆ ೨೪*೭ ದಾಸೋಹ ಸೌಲಭ್ಯ ಲಭ್ಯವಾಗಬೇಕು. ಹೊರ ಜಿಲ್ಲೆಯ ನಾನಾ ಭಾಗದಿಂದ ಹೆಚ್ಚು ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸುವುದರಿಂದ ಅಗತ್ಯಕ್ಕೆ ತಕ್ಕಂತೆ ಬಸ್ಸುಗಳನ್ನು ನಿಯೋಜಿಸಬೇಕು. ತಮಿಳುನಾಡು ರಾಜ್ಯದಿಂದಲೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ ಅಲ್ಲಿಂದಲೂ ಸಹ ಸಾಕಷ್ಟು ಬಸ್ಸುಗಳ ವ್ಯವಸ್ಥೆಯಾಗಬೇಕು. ಸಂಚಾರ ಸುಗಮಗೊಳಿಸುವ ನಿಟ್ಟಿನಲ್ಲಿ ಅವಶ್ಯ ಸೂಚನಾ ಫಲಕಗಳು ಇತರೆ ಪರಿಕರಗಳನ್ನು ಅಳವಡಿಸಬೇಕು ಎಂದರು.
ವಿದ್ಯುತ್ ದೀಪಾಲಂಕಾರ, ಉತ್ತಮ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ, ನಿರಂತರ ವಿದ್ಯುತ್ ಸರಬರಾಜು, ಭದ್ರತಾ ವ್ಯವಸ್ಥೆ, ಮಾಹಿತಿ ಕೇಂದ್ರ, ಆರೋಗ್ಯ ಅಧಿಕಾರಿ ಸಿಬ್ಬಂದಿ ನಿಯೋಜನೆ, ದರ್ಶನ ವ್ಯವಸ್ಥೆ, ಸೇವಾ ಕೌಂಟರ್‌ಗಳ ನಿರ್ವಹಣೆ ಸೇರಿದಂತೆ ಎಲ್ಲವೂ ಅಚ್ಚುಕಟ್ಟಾಗಿ ನಡೆಯಬೇಕು. ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಜಾತ್ರಾ ಮಹೋತ್ಸವದ ಕಾರ್ಯಕ್ಕಾಗಿ ತೊಡಗಿಸಿಕೊಳ್ಳಬೇಕು. ಜಿಲ್ಲಾಧಿಕಾರಿಗಳು ಅಧಿಕಾರಿಗಳ ಸಭೆ ಕರೆದು ಅಗತ್ಯ ಸೂಚನೆ ನೀಡಿ ಎಲ್ಲಾ ಏರ್ಪಾಡುಗಳನ್ನು ಮಾಡಬೇಕು. ಹಿರಿಯ ಅಧಿಕಾರಿಗಳು ಜಾತ್ರಾ ಮಹೋತ್ಸವ ನಿರ್ವಹಣೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ತಿಳಿಸಿದರು.
ಶಾಸಕರಾದ ಆರ್. ನರೇಂದ್ರ ಅವರು ಮಾತನಾಡಿ ಭಕ್ತಾಧಿಗಳಿಗೆ ಸಕಲ ಸೌಲಭ್ಯಗಳನ್ನು ಕಲ್ಪಿಸಬೇಕು. ಅತ್ಯಂತ ವ್ಯವಸ್ಥಿತವಾಗಿ ಕ್ಷೇತ್ರದಲ್ಲಿ ಜಾತ್ರಾ ಸಿದ್ದತೆಗಳನ್ನು ಕೈಗೊಳ್ಳಬೇಕೆಂದು ತಿಳಿಸಿದರು.
ಸಾಲೂರು ಮಠದ ಶ್ರೀಗಳಾದ ಶಾಂತಮಲ್ಲಿಕಾರ್ಜುನಸ್ವಾಮಿ, ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಎನ್. ಮಹೇಶ್, ಸಿ.ಎಸ್. ನಿರಂಜನ್ ಕುಮಾರ್, ಜಿಲ್ಲಾಧಿಕಾರಿ ಡಿ.ಎಸ್. ರಮೇಶ್, ಮಲೆಮಹದೇಶ್ವರ ಕ್ಷೇತ್ರಾಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪೂವಿತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹೂ, ಉಪವಿಭಾಗಾಧಿಕಾರಿ ಗೀತಾ ಹುಡೇದ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ವಿನಯ್ ಕುಮಾರ್, ಕೆ.ಎಸ್.ಆರ್.ಟಿಸಿ ವಿಭಾಗೀಯ ನಿಯಂತ್ರಾಣಾಧಿಕಾರಿ ಶ್ರೀನಿವಾಸ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಸುಧಾಮಣಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಂ. ವಿಶ್ವೇಶ್ವರಯ್ಯ, ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
