ಕೆ.ಆರ್.ಪೇಟೆ: ತಾಲ್ಲೂಕಿನಲ್ಲಿ ಕೊರೋನಾ ಸೋಂಕನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ತಾಲ್ಲೂಕು ಆಡಳಿತದ ಕಟ್ಟುನಿಟ್ಟಿನ ಬಿಗಿ ಕ್ರಮಗಳನ್ನು ಕೈಗೊಂಡಿದೆ. ತಾಲ್ಲೂಕಿನಾದ್ಯಂತ ನಾಲ್ಕು ಕಡೆ ನಡೆಯುತ್ತಿದ್ದ ಮದುವೆ ಮನೆಗಳ ಮೇಲೆ ದಿಢೀರ್ ದಾಳಿ ನಡೆಸಿ 30 ಮಂದಿ ವಿರುದ್ದ ಎಫ್.ಐ.ಆರ್. ದಾಖಲಿಸಲಾಗಿದೆ ಎಂದು ತಹಸೀಲ್ದಾರ್ ಎಂ.ಶಿವಮೂರ್ತಿ ಅವರು ತಿಳಿಸಿದರು.
ಪಟ್ಟಣದ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತಹಸೀಲ್ದಾರ್ ರವರು ಪೂರ್ವಾನುಮತಿ ಪಡೆಯದೆ ಮದುವೆ ಸಂಭ್ರಮದಲ್ಲಿದ್ದ ತಾಲ್ಲೂಕಿನ ಮುರುಕನಹಳ್ಳಿ, ಹರಿರಾಯನಹಳ್ಳಿ, ನಂದಿಪುರ, ಕ್ಯಾತನಹಳ್ಳಿ ಗ್ರಾಮಗಳ ವಿವಾಹ ಸಮಾರಂಭಗಳ ಮೇಲೆ ದಾಳಿ ನಡೆಸಿ ವಧು, ವರ, ಪುರೋಹಿತ, ಕ್ಯಾಮರಾಮನ್, ವಧು-ವರರ ಪೋಷಕರು ಸೇರಿದಂತೆ ಭಾಗವಹಿಸಿದ್ದ ಸುಮಾರು 30 ಮಂದಿಯ ವಿರುದ್ದ ಕೋವಿಡ್ ನಿಯಮ ಉಲ್ಲಂಘನೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಠಾಣೆಗೆ ಕರೆತಂದು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಆದರೆ ನ್ಯಾಯಾಲಯದಲ್ಲಿ ಪ್ರಕರಣ ಮುಂದುವರೆಯಲಿದೆ. ನ್ಯಾಯಾಲಯವು ನೀಡುವ ವಿಚಾರಣೆ ನಡೆಸಿ ದಂಡ ವಿಧಿಸಬಹುದು ಅಥವಾ ಶಿಕ್ಷೆಯನ್ನು ವಿಧಿಸಬಹುದು. ಹಾಗಾಗಿ ಯಾರೂ ಸಹ ಲಾಕ್ ಡೌನ್ ಅವಧಿಯಲ್ಲಿ ಮದುವೆ ಮುಂಜಿ ಕಾರ್ಯಕ್ರಮಗಳನ್ನು ಮಾಡದೆ ಮುಂದೂಡುವಂತೆ ಸಲಹೆ ನೀಡಿದರು. ತಾಲ್ಲೂಕಿನಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ಮದುವೆ, ಬೀಗರ ಔತಣ, ತಿಥಿ, ನಾಮಕರಣ, ಹುಟ್ಟುಹಬ್ಬ ಮುಂತಾದ ಕಾರ್ಯಕ್ರಮಗಳ ಬಗ್ಗೆ ಹದ್ದಿನ ಕಣ್ಣಿಡಲಾಗಿದೆ. ಪ್ರತಿ ಗ್ರಾಮಗಳಲ್ಲಿಯೂ ಗುಪ್ತ ಮಾಹಿತಿದಾರರು ಇದ್ದು ಅವರ ಖಚಿತ ಮಾಹಿತಿಯ ಆಧಾರದ ಮೇಲೆ ದಾಳಿ ನಡೆಸಲಾಗುತ್ತದೆ ಎಂದು ತಿಳಿಸಿದರು.
ಮಹಾಮಾರಿಗೆ ಸಿಲುಕಿ ಪ್ರಾಣ ಕಳೆದುಕೊಂಡ ಕುಟುಂಬದವರು ನೂರಾರು ಜನರನ್ನು ಸೇರಿಸಿಕೊಂಡು ತಿಥಿ ಮಾಡುತ್ತಿದ್ದು ಜಿಲ್ಲೆಯಾದ್ಯಂತ ಸೆಕ್ಷನ್ 144 ಜಾರಿಯಲ್ಲಿದೆ. ಆದ್ದರಿಂದ ಕುಟುಂಬದ ಸದಸ್ಯರು ಮಾತ್ರ ಸರಳವಾಗಿ ತಿಥಿ ಮಾಡಿಕೊಳ್ಳಬೇಕು. ಸದ್ಯದ ಪರಿಸ್ಥಿತಿಯಲ್ಲಿ ಕಾನೂನಿನಲ್ಲಿ ತಿಥಿ ಮಾಡಲು ಅವಕಾಶವಿಲ್ಲ. ವಾಟ್ಸಪ್, ಫೇಸ್ ಬುಕ್ ಸ್ಟೇಟಸ್ ಹಾಗೂ ಪೋಸ್ಟಿಂಗ್ ಆಧಾರದ ಮೇಲೆ ಮೊಕದ್ದಮೆ. ದಾಖಲಿಸಲಾಗುವುದು
ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಯುವಕರು, ಹಣವುಳ್ಳವರು ನಿಷೇಧಾಜ್ಞೆ ಉಲ್ಲಂಘಿಸಿ ಹುಟ್ಟುಹಬ್ಬದ ಆಚರಣೆ, ವಿವಾಹ ವಾರ್ಷಿಕೋತ್ಸವ ಮಾಡಿಕೊಂಡು ಅದನ್ನು ತಮ್ಮ ಸ್ಟೇಟಸ್ ಗೆ ಹಾಕಿಕೊಳ್ಳುತ್ತಿರುವುದು ಕಂಡು ಬಂದಿದ್ದು ಸ್ಟೇಟಸ್ ಆಧರಿಸಿ ಅಂಥಹವರ ವಿರುದ್ದ ಎಫ್ ಐ ಆರ್ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.