ಮೈಸೂರು, ನ. ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಗಳ ವಿಶೇಷ ಪರಿಷ್ಕರಣೆಯ ವೇಳಾಪಟ್ಟಿ ಪ್ರಕಟಿಸಲಾಗಿದ್ದು, 2020ರ ನವೆಂಬರ್ 18 ರಿಂದ ಡಿಸೆಂಬರ್ 17ರ ವರೆಗೆ ವಿಶೇಷ ಪರಿಷ್ಕರಣೆ ನಡೆಯಲಿದೆ. ಅನರ್ಹ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡಲು ಬಿಎಲ್‍ಒಗಳು ಅಗತ್ಯಕ್ರಮ ವಹಿಸಲಿದ್ದಾರೆ. ರಾಜಕೀಯ ಪಕ್ಷಗಳು ಅಗತ್ಯ ಮಾಹಿತಿ ನೀಡಿ ಸಹಕರಿಸುವಂತೆ ಅಪರ ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಅಪರ ಜಿಲ್ಲಾಧಿಕಾರಿ ಬಿ.ಎಸ್.ಮಂಜುನಾಥ್ ಅವರು ಮನವಿ ಮಾಡಿದರು.
ಮತದಾರರ ಪಟ್ಟಿಯ ಪರಿಷ್ಕರಣೆಯ ಹಿನ್ನೆಲೆಯಲ್ಲಿ ಜಿಲ್ಲೆಯ ಗುರುವಾರ ಎಲ್ಲಾ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ ನಡೆಸಿ ಮಾತನಾಡಿದ ಅವರು, ಮೃತಪಟ್ಟವರು, ಬಾಡಿಗೆ ಮನೆಯಿಂದ ಬಿಟ್ಟು ಹೋದವರು, ಎರಡು ಕಡೆ ಮತದಾರರ ಪಟ್ಟಿಯಲ್ಲಿ ಇರುವವರು, ಮುಂತಾದವರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಬೇಕಾಗಿದೆ ಎಂದು ಹೇಳಿದರು.
2021ರ ಜನವರಿ 1ನೇ ತಾರೀಕಿಗೆ 18 ವರ್ಷ ಆಗುವವರು ಈಗ ಹೆಸರು ನೊಂದಾಯಿಸಿಕೊಳ್ಳಲು ಅವಕಾಶವಿದೆ. ಬೂತ್ ಮಟ್ಟದ ಅಧಿಕಾರಿಗಳಿಂದ ಅಥವಾ ಮತದಾರರ ಹೆಸರು ನೊಂದಣಾಧಿಕಾರಿಗಳ ಕಚೇರಿಯಲ್ಲಿ ಅರ್ಜಿ ಪಡೆದು ಹೆಸರು ಸೇರ್ಪಡೆ ಮಾಡಿಕೊಳ್ಳಬಹುದು ಎಂದರು.
2020ರ ಫೆಬ್ರವರಿಯಲ್ಲಿ ಪ್ರಕಟಿಸಿದ ಮತದಾರರ ಪಟ್ಟಿಯಲ್ಲಿ 25,43,489 ಮತದಾರರಿದ್ದರು. ಆ ನಂತರ 2020ರ ನವೆಂಬರ್ 18 ರವರೆಗೆ 20226 ಮತದಾರರು ಸೇರ್ಪಡೆಯಾಗಿದ್ದಾರೆ. ಈಗ 25,63,715 ಮತದಾರರಿದ್ದಾರೆ ಎಂದರು.
ವಿಶೇಷ ಆಂದೋಲನ: ಮತದಾರರ ಪಟ್ಟಿ ಪರಿಷ್ಕರಣೆಗೆ ನಾಲ್ಕು ಭಾನುವಾರಗಳಂದು ವಿಶೇಷ ಆಂದೋಲನವನ್ನು ಆಯೋಜಿಸಲಾಗಿದೆ. ನವೆಂಬರ್ 22, 29, ಡಿಸೆಂಬರ್ 6, 13ರಂದು ವಿಶೇಷ ಆಂದೋಲನ ನಡೆಯಲಿದೆ. ಅಂದು ಬೂತ್ ಮಟ್ಟದಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ತಿದ್ದುಪಡಿ, ವರ್ಗಾವಣೆ ಹಾಗೂ ತೆಗೆದು ಹಾಕಲು ಅರ್ಜಿ ಸಲ್ಲಿಸಬಹುದು. ಸಾರ್ವಜನಿಕರು ಈ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ಅವರು ಹೇಳಿದರು.
ಹೆಚ್ಚಿನ ಮಾಹಿತಿಗಾಗಿ ವಿವಿಧ ವಿಧಾನಸಭಾ ಕ್ಷೇತ್ರದ ಕಂಟ್ರೋಲ್ ರೂಂ ವಿವರ ಇಂತಿದೆ: ಪಿರಿಯಾಪಟ್ಟಣ ತಾಲ್ಲೂಕು ಕಚೇರಿ ದೂರವಾಣಿ ಸಂಖ್ಯೆ: 08223-274175, ಕೆ.ಆರ್.ನಗರ ತಾಲ್ಲೂಕು ಕಚೇರಿ ದೂರವಾಣಿ ಸಂಖ್ಯೆ: 08223-262371, 262234, ಹುಣಸೂರು ತಾಲ್ಲೂಕು ಕಚೇರಿ 08222-252040, ಹೆಚ್.ಡಿ.ಕೋಟೆ ತಾಲ್ಲೂಕು ಕಚೇರಿ 08228-255325, ನಂಜನಗೂಡು ತಾಲ್ಲೂಕು ಕಚೇರಿ 08221-223108, ಚಾಮುಂಡೇಶ್ವರಿ ಕ್ಷೇತ್ರಕ್ಕೆ ಸಂಬಂದಿಸಿದಂತೆ ಮೈಸೂರು ತಾಲ್ಲೂಕು ಕಚೇರಿ 0821-2414811, 2414812, ಕೃಷ್ಣರಾಜ ಕ್ಷೇತ್ರ, ಚಾಮರಾಜ ಕ್ಷೇತ್ರ ಹಾಗೂ ನರಸಿಂಹರಾಜ ಕ್ಷೇತ್ರಕ್ಕೆ ಸಂಬಂದಿಸಿದಂತೆ ಮೈಸೂರು ಮಹಾನಗರ ಪಾಲಿಕೆ ಕಚೇರಿ ದೂರವಾಣಿ ಸಂಖ್ಯೆ 0821-2418800, ವರುಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಂಜನಗೂಡು ತಾಲ್ಲೂಕು ಕಚೇರಿ 08221-223108, ಟಿ.ನರಸೀಪುರ ಕ್ಷೇತ್ರಕ್ಕೆ ಟಿ.ನರಸೀಪುರ ತಾಲ್ಲೂಕು ಕಚೇರಿ ದೂರವಾಣಿ ಸಂಖ್ಯೆ: 08227-260210ಗೆ ಸಂಪರ್ಕಿಸಬಹುದು.
ಸಭೆಯಲ್ಲಿ ಭಾರತೀಯ ಜನತಾ ಪಕ್ಷದ ಪರವಾಗಿ ಉಮೇಶ್ ಕುಮಾರ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಪರವಾಗಿ ಡೊನಾಲ್ಡ್, ಜನತಾದಳ(ಜಾತ್ಯಾತೀತ) ಪಕ್ಷದ ಪರವಾಗಿ ಫಾಲ್ಕನ್ ಬೋರೇಗೌಡ ಅವರು ಭಾಗವಹಿಸಿದ್ದರು.

By admin