ಚಾಮರಾಜನಗರ: ಗ್ರಂಥಾಲಯಗಳಿಗೆ ಬರುವ ಮಕ್ಕಳಿಗೆ ವಿಶೇಷವಾದ ಸಮಯವನ್ನು ನಿಗದಿಪಡಿಸಿ ಅವರ ಆಸಕ್ತಿ ಅಭಿರುಚಿಗೆ ತಕ್ಕಂತೆ ಪುಸ್ತಕಗಳನ್ನು ಇಡಲು ಗ್ರಂಥಪಾಲಕರು ಸಿದ್ದತೆ ಮಾಡಿಕೊಳ್ಳಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯಿತ್ರಿ ಅವರು ತಿಳಿಸಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಲ್ಲಾ ಪಂಚಾಯತ್ ಹಾಗೂ ಅಜೀಂ ಪ್ರೇಮ್‌ಜಿ ಪೌಂಡೇಶನ್ ಸಂಯುಕ್ತಾಶ್ರಯದಲ್ಲಿ ನಡೆದ ಮಕ್ಕಳ ಸ್ನೇಹಿ ಗ್ರಂಥಾಲಯ ಹಾಗೂ ಗಟ್ಟಿ ಓದು ಅಭಿಯಾನ ಕುರಿತು ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಎಳೆಯ ವಯಸ್ಸಿನಿಂದಲೇ ಉನ್ನತ ಗುಣಮಟ್ಟದ ಸಾಹಿತ್ಯವನ್ನು ಪರಿಚಯಿಸಲು, ಪರಸ್ಪರರು ಓದಿದ ವಿಷಯಗಳನ್ನು ಹಂಚಿಕೊಳ್ಳಲು ಶಾಲೆ ಮತ್ತು ಗ್ರಂಥಾಲಯಗಳು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿಗಳಲ್ಲಿ `ಮಕ್ಕಳ ಸ್ನೇಹಿ’ ಗ್ರಂಥಾಲಯಗಳನ್ನು ತೆರೆಯಲಾಗಿದೆ. ಗ್ರಂಥಾಲಯಗಳಿಗೆ ಬರುವ ಮಕ್ಕಳಿಗೆ ವಿಶೇಷವಾದ ಸಮಯವನ್ನು ನಿಗದಿಪಡಿಸಿ ಅವರ ಆಸಕ್ತಿ-ಅಭಿರುಚಿಗೆ ತಕ್ಕಂತೆ ಪುಸ್ತಕಗಳನ್ನು ಗ್ರಂಥಪಾಲಕರು ಹಾಗೂ ಶಿಕ್ಷಕರು ನೀಡಬೇಕಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಗ್ರಂಥಾಲಯಗಳಿಗೆ ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿ ಅನುದಾನದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಬಾಕಿ ಇರುವ ಗ್ರಂಥಾಲಯಗಳಿಗೂ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗುವುದು. ಗ್ರಂಥಪಾಲಕರು ಉತ್ತಮವಾಗಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯಿತ್ರಿ ಅವರು ತಿಳಿಸಿದರು.
ಕಾರ್ಯಗಾರದಲ್ಲಿ ಅಜೀಂ ಪ್ರೇಮ್‌ಜಿ ಪೌಂಡೇಶನ್ ಸಂಸ್ಥೆಯ ತಜ್ಞರು ಗಟ್ಟಿಯಾಗಿ ಓದು ವಿಷಯದ ಕುರಿತು ಉಪನ್ಯಾಸ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ, ಮುಖ್ಯ ಲೆಕ್ಕಾಧಿಕಾರಿ ಹೆಚ್.ಎಸ್. ಗಂಗಾಧರ್, ಜಿಲ್ಲಾ ಗ್ರಂಥಾಲಯ ಅಧಿಕಾರಿ ಶಿವಸ್ವಾಮಿ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.