ಚಾಮರಾಜನಗರ: ತಾಲ್ಲೂಕಿನ ಮಂಗಲ ಗ್ರಾಮದ ಸರಕಾರಿ ಪ್ರೌಡಶಾಲೆಯಲ್ಲಿ ಭಾರತ್ ಸೇವಾದಳ ಜಿಲ್ಲಾ ಸಮಿತಿ, ಶಾಲಾಶಿಕ್ಷಣ ಸಾಕ್ಷರಥಾ ಇಲಾಖೆ ವತಿಯಿಂದ ಸೇವಾದಳ ಸಂಸ್ಥಾಪಕರಾದ ನಾ.ಸು.ಹರ್ಡಿಕರ್ ಅವರ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಯಿತು.
ಸೇವಾದಳ ಜಿಲ್ಲಾಧ್ಯಕ್ಷ ಬಿ.ವಿ.ವೆಂಕಟನಾಗಪ್ಪಶೆಟ್ಟಿ ಬಾಬು ಮಾತನಾಡಿ, ನಾ.ಸು.ಹರ್ಡಿಕರ್ ಅವರು ದೇಶದ ಭದ್ರತೆಗೆ ದುಡಿಯುವ ಸೈನಿಕರನ್ನು ತಯಾರುಮಾಡುವ ಕೆಲಸ ಮಾಡಿದರು. ಇದಲ್ಲದೇ ಪ್ರತಿಯೊಬ್ಬರಲ್ಲೂ ದೇಶಪ್ರೇಮಬಿತ್ತುವ ಕಾರ್ಯ ಮಾಡಿದರು.
ಜಿಲ್ಲೆಯ ವಿವಿಧ ಶಾಲೆಗಳಲ್ಲಿ ನಾ.ಸು.ಹರ್ಡಿಕರ್ ಅವರ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಸೇವಾದಳ ತಾಲೂಕು ಅಧ್ಯಕ್ಷ ಸಿ.ಎಂ.ನರಸಿಂಹಮೂರ್ತಿ ಮಾತನಾಡಿ, ದೇಶವನ್ನು ಹಗಲಿರುಳು ಕಾಯುವ ಸೈನಿಕ, ಹಸಿದವರಿಗೆ ಅನ್ನ ನೀಡುವ ರೈತರನ್ನು ಸದಾಸ್ಮರಣೆ ಮಾಡಬೇಕಿದೆ. ಸೇವಾದಳದಿಂದ ರಾಷ್ಟ್ರಪ್ರೇಮ, ರಾಷ್ಟ್ರಧ್ವಜ ಹಾರಿಸುವ ಪರಿಕಲ್ಪನೆ ಮೂಡಿಸಲಾಗುತ್ತಿದೆ ಎಂದರು.
ಇದೇವೇಳೆ ಶಾಲಾವರಣದಲ್ಲಿ ೭೫ ನೇ ಸ್ವಾತಂತ್ರ್ಯ ಅಮೃತಮಹೋತ್ಸವದ ಅಂಗವಾಗಿ ೭೫ ಗಿಡಗಳನ್ನು ನೆಟ್ಟು ನೀರೆರೆಯಲಾಯಿತು. ಮಕ್ಕಳಿಗೂ ಗಿಡವಿತರಣೆಯೂ ನಡೆಯಿತು.
ಭಾರತ್ ಸೇವಾದಳ ಜಿಲ್ಲಾ ಉಪಾಧ್ಯಕ್ಷ ಮಹೇಶ್.ಜಿ.ಬಳಿಗಾರ್, ಕಾರ್ಯದರ್ಶಿ ವಿ.ಮಹದೇವಯ್ಯ,
ಕೋಶಾಧ್ಯಕ್ಷ ವಿ.ಶ್ರೀನಿವಾಸಪ್ರಸಾದ್, ರಾಜ್ಯಸಮಿತಿ ಸದಸ್ಯ ಎಂ.ಬಿ.ಲಿಂಗರಾಜು, ಸಂಘಟನಾ ಕಾರ್ಯದರ್ಶಿ ಎನ್.ಜೋಸೆಫ್, ವಲಯಸಂಘಟಕ ಈರಯ್ಯ, ಸದಸ್ಯ ಷಡಕ್ಷರಸ್ವಾಮಿ, ಕೋಶಾಧ್ಯಕ್ಷ ಸಿ.ಪ್ರಸಾದ್, ಎಸ್‌ಡಿಎಂಸಿ ಉಪಾಧ್ಯಕ್ಷೆ ಶೀಲಾ, ಸದಸ್ಯರಾದ
ಮಲ್ಲಿಕಾರ್ಜುನ್, ಶಿಕ್ಷಕರಾದ ಮಲ್ಲಶೆಟ್ಟಿ, ದೈಹಿಕ ಶಿಕ್ಷಣನಿರ್ದೇಶಕ ತಗಡೂರಯ್ಯ, ವಿದ್ಯಾರ್ಥಿಗಳು ಹಾಜರಿದ್ದರು.