ಬೆಂಗಳೂರು: ಮುಖ್ಯಪೇದೆ ಮೇಲೆ ಹಲ್ಲೆಗೆ ಮುಂದಾದ ರೌಡಿಶೀಟರ್ ಕಾಲಿಗೆ ಸಿಸಿಬಿ ಪೊಲೀಸರು ಗುಂಡು ಹಾರಿಸಿರುವ ಘಟನೆ ನಗರದ ಹೆಚ್‌ಆರ್.ಬಿ.ಆರ್ ಲೇಔಟ್‌ನಲ್ಲಿ ನಡೆದಿದೆ.
ಗಾಯಾಳು ರೌಡಿಶೀಟರ್ ಸೂರ್ಯ ಎಂಬಾತನನ್ನು ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರೌಡಿಶೀಟರ್ ಸೂರ್ಯ ಎರಡು ಕೊಲೆ ಕೇಸ್ ಸೇರಿದಂತೆ ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದನು. ಭಾರತೀಯ ಸೇವಾ ಚಾರಿಟಬಲ್ ಟ್ರಸ್ಟ್ ಮುಖ್ಯಸ್ಥನಾಗಿದ್ದ ರಘುರಾಮ್ ಎಂಬುವವರ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಎಸಿಪಿ ಪರಮೇಶ್ವರ್ ನೇತೃತ್ವದ ತಂಡ ಸೂರ್ಯನಿಗಾಗಿ ಹುಡುಕಾಟ ನಡೆಸುತ್ತಿತ್ತು. ಆತ . ಆರ್.ಎಸ್ ಪಾಳ್ಯದ ಮನೆಯೊಂದರಲ್ಲಿ ತನ್ನ ಸಹಚರರೊಂದಿಗೆ ಇರುವ ಮಾಹಿತಿ ದೊರೆತಿತ್ತು. ಹೀಗಾಗಿ ಆ ಮನೆಯ ಮೇಲೆ ದಾಳಿ ಮಾಡಲಾಗಿತ್ತು. ಈ ಸಂದರ್ಭ ರೌಡಿ ಸೂರ್ಯ ಸಿಸಿಬಿ ಹೆಡ್ ಕಾನ್ಸ್‌ಟೇಬಲ್ ಹನುಮೇಶ್ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದಾನೆ. ಈ ವೇಳೆ ಆತ್ಮರಕ್ಷಣೆಗಾಗಿ ಸಿಸಿಬಿ ಎಸಿಪಿ ಪರಮೇಶ್ವರ್ ರೌಡಿಶೀಟರ್ ಸೂರ್ಯ ಕಾಲಿಗೆ ಗುಂಡು ಹಾರಿಸಿದ್ದಾರೆ. ಬಳಿಕ ಗಾಯಾಳುವನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಲಾಗಿದೆ.