ಮೈಸೂರು:ಪ್ರಾಣಿ ಪಕ್ಷಿಗಳ ಕಾಳಜಿ ಹೊಂದಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಶಯದಂತೆ ಅವರ ಅಭಿಮಾನಿಗಳು ಲಾಕ್ ಡೌನ್ ಹಿನ್ನಲೆಯಲ್ಲಿ ಆಹಾರವಿಲ್ಲದೆ ಕಂಗಾಲಾಗಿರುವ ಸುಮಾರು ಮುನ್ನೂರಕ್ಕೂ ಹೆಚ್ಚು ಬೀದಿ ನಾಯಿಗಳಿಗೆ ಆಹಾರ ನೀಡುವ ಮೂಲಕ ಅವುಗಳ ಹಸಿವು ತಣಿಸುವ ಕಾಯಕ ಮಾಡುತ್ತಿದ್ದಾರೆ.

ನಗರದ ಸಿದ್ಧಾರ್ಥ ಲೇಔಟ್, ರಾಜ್ ಕುಮಾರ್ ರಸ್ತೆ, ಮಹಾರಾಜ ಕಾಲೇಜ್, ಯರಗನಹಳ್ಳಿ, ಗಾಂಧಿನಗರ, ನಜರ್ ಬಾದ್ ಸೇರಿದಂತೆ ಸುತ್ತಮುತ್ತ ಪ್ರದೇಶಗಳಲ್ಲಿರುವ  ಬೀದಿನಾಯಿ, ಪಕ್ಷಿ, ಪ್ರಾಣಿಗಳಿಗೆ  ಪ್ರಿಯಾ ತೂಗುದೀಪ್ ದರ್ಶನ್ ಅಭಿಮಾನಿ ಬಳಗದ ವತಿಯಿಂದ ಹಾಲು ಅನ್ನ  ಮತ್ತು ಚಿಕನ್ ನಂತಹ  ವಿಶೇಷ ಆಹಾರ ನೀಡಿ ಹಸಿದ ಹೊಟ್ಟೆಯನ್ನು ತಣ್ಣಗಾಗಿಸುವ ಕೆಲಸವನ್ನು ಮಾಡಿದ್ದಾರೆ.

ಈ ಕುರಿತಂತೆ ಮಾತನಾಡಿದ ದರ್ಶನ್ ಅಭಿಮಾನಿ ಬಳಗದ ಮುಖ್ಯ ಸಂಚಾಲಕ ಹರೀಶ್ ನಾಯ್ಡು ಅವರು

ಲಾಕ್ ಡೌನ್ ನಿಂದಾಗಿ  ಮೃಗಾಲಯಕ್ಕೆ ಪ್ರವಾಸಿಗರು ಬರದ ಕಾರಣ ಪ್ರಾಣಿ ಪಕ್ಷಿಗಳ ಪೋಷಣೆ, ಆರ್ಥಿಕ ಪರಿಸ್ಥಿತಿ ಮೃಗಾಲಯದಲ್ಲಿ ಉಲ್ಭಣಗೊಂಡ ಸಂದರ್ಭದಲ್ಲಿ ನಟ ದರ್ಶನ್ ರವರ ಕರೆಯಂತೆ ಅವರ ಅಭಿಮಾನಿಗಳು 1ಕೋಟಿ 60ಲಕ್ಷ ರೂ.  ಮೊತ್ತದ ಪ್ರಾಣಿಪಕ್ಷಿಗಳ ದತ್ತು ಸ್ವೀಕಾರ ಕಾರ್ಯಕ್ಕೆ ಮುಂದಾಗಿದ್ದು ಮೈಸೂರು ಮೃಗಾಲಯ ಬನ್ನೇರುಘಟ್ಟ ಸೇರಿದಂತೆ  ಕರ್ನಾಟಕದ ವಿವಿಧ ಮೃಗಾಲಯಕ್ಕೆ ಹೆಚ್ಚು ದೇಣಿಗೆ  ಬರುತ್ತಿದ್ದು, ಸುಮಾರು 4ಕೋಟಿ ಹಣದ ನಿರೀಕ್ಷೆ ಮಾಡಲಾಗಿದೆ. ಇದಲ್ಲದೆ ಗಣಪತಿ ಸಚ್ಚಿದಾನಂದ ಆಶ್ರಮದ ಶುಕವನದಲ್ಲಿ ಪಕ್ಷಿಗಳ ದತ್ತು ಸ್ವೀಕಾರ  ಮಾಡಿರುವ ದರ್ಶನ್ ರವರು ಆ ಮೂಲಕ ಪ್ರಾಣಿಪಕ್ಷಿ ಸಂರಕ್ಷಣೆಯ  ಸಂದೇಶವನ್ನು ಸಮಾಜಕ್ಕೆ ಸಾರಿದ್ದಾರೆ. ಅಷ್ಟೇ ಅಲ್ಲದೇ ನಾಗರಹೊಳೆ ಕಾಡಿನಲ್ಲಿ ಸಾಮಾಜಿಕ ಸಂಘ ಸಂಸ್ಥೆಗಳು ಪ್ರಾಣಿಗಳಿಗಾಗಿ ಜಲಸಂರಕ್ಷಣೆ ಚೆಕ್ ಡ್ಯಾಂ ನಿರ್ಮಿಸಿದಾಗ ನಟ ದರ್ಶನ್ ರವರೇ ಸ್ವತಃ ತೆರಳಿ ಸಹಕಾರ ನೀಡಿದ್ದಾರೆ.

ಇದೀಗ ಅವರ ಮಾರ್ಗದರ್ಶನದಂತೆ ಮೈಸೂರು ನಗರ ಪ್ರದೇಶದಲ್ಲಿ  300ಕ್ಕೂ ಹೆಚ್ಚು ಬೀದಿ ನಾಯಿಗಳಿಗೆ  ಹಾಲು ಅನ್ನ, ಬನ್, ಬಿಸ್ಕೆಟ್ ಆಹಾರ ನೀಡುವ ಅಭಿಯಾನ ಪ್ರಾರಂಭಿಸಿದ್ದು, ಬೆಟ್ಟದ ಸುತ್ತಮುತ್ತಲಿನ ಕೋತಿಗಳಿಗೆ ಬಾಳೆಹಣ್ಣು ವಿತರಿಸಲು ನಟ ದರ್ಶನ್ ಅಭಿಮಾನಿಗಳಾದ ನಾವುಗಳೇ ಸ್ವಯಂಸೇವಕರ ತಂಡವನ್ನ ರಚಿಸಿದ್ದೇವೆ ಎಂದರು.

ಇದೇ ಸಂದರ್ಭದಲ್ಲಿ ದರ್ಶನ್ ಅಭಿಮಾನಿ ಬಳಗದ ಸದಸ್ಯರಾದ ಹರೀಶ್ ನಾಯ್ಡು ,ಚೇತನ್ ಕಾಂತರಾಜ್, ರೋಹಿತ್, ಮಂಜು, ವಿನೋದ ಮೊದಲಾದವರು ಇದ್ದರು.

By admin