ಚಾಮರಾಜನಗರ: ಬ್ಯಾಂಕುಗಳಲ್ಲಿ ಸರ್ಕಾರದ ಸಬ್ಸಿಡಿ ಸೌಲಭ್ಯದ ಅಡಿಯಲ್ಲಿ ಉಳಿದಿರುವ ಬಾಕಿ ಸಾಲಗಳನ್ನು ಶೀಘ್ರವೇ ಮಂಜೂರು ಮಾಡುವಂತೆ ಜಿಲ್ಲಾಧಿಕಾರಿ ಚಾರುಲತ ಸೋಮಲ್ ಅವರು ಸೂಚಿಸಿದರು. 

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ(ಡಿ.೨೪) ದಂದು ನಡೆದ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವತಿಯಿಂದ ಜೂನ್ ಮತ್ತು ಸೆಪ್ಟೆಂಬರ್ ತ್ರೈಮಾಸಿಕ ಅವಧಿಯ ಜಿಲ್ಲಾ ಸಮಾಲೋಚನಾ ಸಭೆ ಹಾಗೂ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಜಿಲ್ಲೆಯ ಎಲ್ಲ ಬ್ಯಾಂಕುಗಳಿಂದ ಸರ್ಕಾರದ ವಿವಿಧ ಇಲಾಖೆಗಳ ಯೋಜನೆಗಳಡಿ ಸಾರ್ವಜನಿಕರಿಗೆ ನೀಡಿರುವ ಸಾಲ ಸೌಲಭ್ಯವನ್ನು ಪರಾಮರ್ಶೆ ನಡೆಸಿದ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಬುಡಕಟ್ಟು ಜನಾಂಗ ಮತ್ತು ಆದಿವಾಸಿಗಳಿಗೂ ಕೂಡ ಬ್ಯಾಂಕ್ ಸಾಲ ಸೌಲಭ್ಯ ಸುಲಭದಲ್ಲಿ ಸಿಗುವಂತೆ ಕ್ರಮ ವಹಿಸಬೇಕು. ಈ ಬಗ್ಗೆ ಸೂಕ್ತ ಅಂಕಿ ಅಂಶಗಳನ್ನು ನೀಡುವಂತೆ ಮಾರ್ಗದರ್ಶಿ ಬ್ಯಾಂಕ್ ಅಧಿಕಾರಿಗಳಿಗೆ ತಿಳಿಸಿದರು. 

ಪಿಎಂ ಸ್ವಾನಿಧಿ ಯೋಜನೆಯಡಿಯಲ್ಲಿ ರಸ್ತೆ ಬದಿಯ ಸಣ್ಣ ವ್ಯಾಪಾರಿಗಳಿಗೆ ಬ್ಯಾಂಕುಗಳು ವಿತರಿಸಿರುವ ಸಾಲಗಳು ಸುಸ್ತಿಯಾಗದಂತೆ ನಗರಸಭೆ ಹಾಗೂ ಪುರಸಭೆಗಳ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಬ್ಯಾಂಕಿನ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಸಾಲ ವಸೂಲಿ ಮಾಡಲು ಮುಂದಾಗಬೇಕು. ಸಾರ್ವಜನಿಕರಿಂದ ವಿವಿಧ ಇಲಾಖೆಗಳ ಯೋಜನೆಗಳಡಿ ಸಾಲಕ್ಕಾಗಿ ಸಲ್ಲಿಕೆಯಾಗುವ ಅರ್ಜಿಗಳನ್ನು ಕ್ರಮಬದ್ದವಾಗಿ ಪರಿಶೀಲಿಸಿ ಸಾಲ ವಿತರಣೆಯಲ್ಲಿ ಯಾವುದೇ ವಿಳಂಬ ಧೋರಣೆ ಅನುಸರಿಸದೆ ಶೀಘ್ರವಾಗಿ ಸಾಲ ಮಂಜೂರು ಮಾಡಬೇಕು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.  

ಮಾರ್ಗದರ್ಶಿ ಬ್ಯಾಂಕಿನ ವ್ಯವಸ್ಥಾಪಕರು ಹಾಗೂ ಸಂಯೋಜಕರಾದ ಶ್ರೀಕಾಂತ್ ಅವರು ಮಾತನಾಡಿ ಭಾರತ ಸರ್ಕಾರದ ಆದೇಶದಂತೆ ಪಶು  ಸಂಗೋಪನೆ ಹಾಗೂ ಮೀನುಗಾರಿಕೆಗೂ ಬ್ಯಾಂಕ್‌ಗಳಿಂದ ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ ಸೌಲಭ್ಯವನ್ನು ವಿಸ್ತರಿಸಲಾಗಿದ್ದು, ೨೦೨೨ರ ಫೆಬ್ರವರಿ ೧೫ ರವರೆಗೂ ವಿಶೇ? ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಹೆಚ್ಚಿನ ಆಸಕ್ತಿ ವಹಿಸಿ ಸೂಕ್ತ ಫಲಾನುಭವಿಗಳನ್ನು ಆಯ್ಕೆ ಮಾಡಿ ಅರ್ಜಿಗಳನ್ನು ಬ್ಯಾಂಕುಗಳಿಗೆ ಶೀಘ್ರವೇ ತಲುಪಿಸಬೇಕು ಎಂದು ಮನವಿ ಮಾಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ನಬಾರ್ಡ್ ಬ್ಯಾಂಕ್‌ನ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಹಿತ ಜಿ ಸುವರ್ಣ, ಎಸ್.ಬಿ.ಐನ ಪ್ರಾದೇಶಿಕ ಅಧಿಕಾರಿ ಶ್ರದ್ಧಾ ಶ್ರೀವಾಸ್ತವ,  ಎಸ್.ಬಿ.ಐ ಗ್ರಾಮೀಣ ಸ್ವ ಉದ್ಯೋಗ ಸಂಸ್ಥೆಯ ನಿರ್ದೇಶಕರಾದ ಅರುಣ್ ಕುಮಾರ್, ಇತರೆ ಬ್ಯಾಂಕ್ ಅಧಿಕಾರಿಗಳು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು    ಸಭೆಯಲ್ಲಿ ಭಾಗವಹಿಸಿದ್ದರು.