ಚಾಮರಾಜನಗರ: ಗ್ರಾಹಕರ ಹಕ್ಕುಗಳ ಬಗ್ಗೆ ಪ್ರತಿಯೊಬ್ಬರು ಜಾಗೃತಿ ಹೊಂದಿ ಇತರರಿಗೂ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಎ. ಕೆ. ನವೀನ್‌ಕುಮಾರಿ ಅವರು ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದಲ್ಲಿರುವ ಜೆ.ಎಚ್. ಪಟೇಲ್ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ, ಅಳತೆ ಮತ್ತು ತೂಕ ಮಾಪನ ಇಲಾಖೆ ಹಾಗೂ ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರ ಇವರ ಸಂಯುಕ್ತಾಶ್ರಯದಲ್ಲಿ ‘ಗ್ರಾಹಕ ಆಯೋಗದಲ್ಲಿ ಪ್ರಕರಣಗಳ ಪರಿಣಾಮಕಾರಿ ವಿಲೇವಾರಿ’ ಎಂಬ ಘೋಷವಾಕ್ಯದೊಂದಿಗೆ ಆಯೋಜಿಸಲಾಗಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೈನಂದಿನ ಜೀವನ ನಿರ್ವಹಣೆಗಾಗಿ ಪ್ರತಿಯೊಬ್ಬರು ಯಾವುದೇ ವಸ್ತುಗಳನ್ನು ಖರೀದಿಸುವ ವೇಳೆ ವಸ್ತುವಿನ ತಯಾರಿಕೆ, ಗುಣಮಟ್ಟ, ನಿಗದಿತ ಬೆಲೆಯನ್ನು ಪರೀಕ್ಷಿಸದೇ ಮೋಸ ಹೋಗುವ ಸಂದರ್ಭಗಳೇ ಹೆಚ್ಚು. ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಇತ್ತೀಚೆಗೆ ಆನ್‌ಲೈನ್ ಮೂಲಕ ವಸ್ತುಗಳ ಖರೀದಿಸುವುದರಿಂದ ಗ್ರಾಹಕರು ಮೋಸ ಹೋಗುವ ಸಾಧ್ಯತೆಗಳಿರುತ್ತವೆ. ಇದನ್ನು ಮನಗಂಡಿರುವ ಸರ್ಕಾರ ೧೯೮೬ರಲ್ಲಿ ಗ್ರಾಹಕರ ಹಕ್ಕುಗಳ ರಕ್ಷಣಾ ಕಾಯ್ದೆಯನ್ನು ಜಾರಿಗೊಳಿಸಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಗ್ರಾಹಕರ ಹಕ್ಕುಗಳ ಬಗ್ಗೆ ಅರಿವು ಹೊಂದಬೇಕು ಎಂದರು.
ಗ್ರಾಹಕರು ಮಾರಾಟಗಾರರಿಂದ ಮೋಸ ಹೋಗುವುದನ್ನು ತಡೆಯಲು ಖರೀದಿಸಿದ ವಸ್ತುವಿನ ರಶೀದಿ ಮೂಲಕ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದಾವೆ ಹೂಡಬಹುದು. ೫ ಲಕ್ಷದೊಳಗಿನ ವ್ಯಾಜ್ಯ ಹೂಡಲು ಯಾವುದೇ ಶುಲ್ಕವಿರುವುದಿಲ್ಲ. ವಕೀಲರನ್ನು ನೇಮಿಸಿಕೊಳ್ಳುವ ಅಗತ್ಯವಿರುವುದಿಲ್ಲ. ಕೇವಲ ಮೂರು ತಿಂಗಳಲ್ಲಿ ಪರಿಹಾರ ಪಡೆಯಬಹುದಾಗಿದೆ. ಹಾಗೇಯೇ ವಂಚನೆಗೊಳಗಾದ ಗ್ರಾಹಕರು ೫ ಲಕ್ಷದಿಂದ ೨ ಕೋಟಿವರೆಗಿನ ಪರಿಹಾರ ಪಡೆಯಲು ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದಾವೆ ದಾಖಲಿಸಬಹುದಾಗಿದೆ ಎಂದು ನವೀನ್‌ಕುಮಾರಿ ತಿಳಿಸಿದರು.
ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ವ್ಯವಸ್ಥೆಯಲ್ಲಿ ಎಲ್ಲರೂ ಗ್ರಾಹಕರೇ ಆಗಿದ್ದಾರೆ. ಗ್ರಾಹಕರಲ್ಲದವರು ಈ ಸಮಾಜದಲ್ಲಿ ಇಲ್ಲವೇ ಇಲ್ಲ. ವಸ್ತುಗಳ ಖರೀದಿಯಲ್ಲಿ ವಂಚನೆಗೊಳಗಾಗುವ ಬಹುತೇಕ ಗ್ರಾಹಕರು ತಮ್ಮ ಹಕ್ಕುಗಳ ಅರಿವಿಲ್ಲದೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡದೇ ರಾಜೀ ಮಾಡಿಕೊಳ್ಳುವ ಸ್ವಭಾವಕ್ಕೆ ಹೊಂದಿಕೊಂಡಿದ್ದೇವೆ. ಈ ಬಗ್ಗೆ ಗಂಭೀರ ಚಿಂತನೆಯ ಅವಶ್ಯವಿದೆ. ಪ್ರಜ್ಞಾವಂತ ನಾಗರಿಕರಾದ ನಾವೆಲ್ಲರೂ ಗ್ರಾಹಕರ ಹಕ್ಕುಗಳ ಬಗ್ಗೆ ಸಮಗ್ರವಾಗಿ ಅರಿಯಬೇಕು ಎಂದು ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ. ಶ್ರೀಧರ ಅವರು ಮಾತನಾಡಿ ಇಂದು ಕೊಂಡುಕೊಳ್ಳುವ ಪ್ರತಿಯೊಂದು ವ್ಯವಸ್ಥೆಯು ತಾಂತ್ರಿಕಮಯವಾಗಿದೆ. ಈ ವ್ಯವಹಾರಿಕ ಪ್ರಪಂಚದಲ್ಲಿ ನಾಗರಿಕರು ಗ್ರಾಹಕರ ಹಿತರಕ್ಷಣಾ ಕಾಯ್ದೆಯ ಬಗ್ಗೆ ಜಾಗೃತರಾಗಬೇಕಾದ ಅಗತ್ಯವಿದೆ ಎಂದರು.
ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯರಾದ ಶ್ರೀನಿಧಿ ಹಾಗೂ ಭಾರತಿ ಅವರುಗಳು ರಾಷ್ಟ್ರೀಯ ಗ್ರಾಹಕರ ಹಕ್ಕುಗಳ ಬಗ್ಗೆ ಮಾತನಾಡಿದರು.
ತೂಕ ಮತ್ತು ಅಳತೆ ಇಲಾಖೆಯ ಕೊಳ್ಳೇಗಾಲ ವಿಭಾಗದ ನಾಗೇಂದ್ರ ಅವರು ಗ್ರಾಹಕರು ತೂಕ ಮತ್ತು ಅಳತೆಯಲ್ಲಿ ಮೋಸ ಹೋಗುವ ಬಗೆಯನ್ನು ಪ್ರಾತ್ಯೇಕ್ಷಿಕೆ ಮೂಲಕ ವಿವರಿಸಿದರು.
ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರಾದ ಯೋಗಾನಂದ, ತೂಕ ಮತ್ತು ಅಳತೆ ಮಾಪನ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಜೀವ್, ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ಶಿವಚರಾಜಮ್ಮ ಕಾರ್ಯಕ್ರಮದಲ್ಲಿ ಇದ್ದರು.
