ಚಾಮರಾಜನಗರ: ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯ ಮಹತ್ವವನ್ನು ಎಲ್ಲಾ ಬ್ಯಾಂಕ್ ಅಧಿಕಾರಿಗಳು ಅರಿತು ಬೀದಿಬದಿ ವ್ಯಾಪಾರಿಗಳಿಗೆ ಸಾಲಸೌಲಭ್ಯ ನೀಡಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ತಿಳಿಸಿದರು.
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಹಾಗೂ ಜಿಲ್ಲಾ ಮಾರ್ಗದರ್ಶಿ (ಎಸ್.ಬಿ.ಐ) ಬ್ಯಾಂಕ್ ಸಹಯೋಗದಲ್ಲಿ ಡೇ-ನಲ್ಮ್ ಅಭಿಯಾನದ ಸ್ವಯಂ ಉದ್ಯೋಗ ಕಾರ್ಯಕ್ರಮ ಉಪಘಟಕದಡಿ ಜಿಲ್ಲಾಮಟ್ಟದ ಬ್ಯಾಂಕ್ ಅಧಿಕಾರಿಗಳು ಹಾಗೂ ಜಿಲ್ಲೆಯ ನಗರ, ಸ್ಥಳೀಯ ಸಂಸ್ಥೆ ಅಧಿಕಾರಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಒಂದು ದಿನ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪಿ.ಎಂ. ಸ್ವನಿಧಿ ಯೋಜನೆಯ ದೀನ್‌ದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿ ರಸ್ತೆಬದಿ ವ್ಯಾಪಾರಿಗಳ ಜೀವನಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ವೈಯಕ್ತಿಯ ಸಾಲವನ್ನು ಶೇ. ೭ರಷ್ಟು ಬಡ್ಡಿದರದಲ್ಲಿ ಹಾಗೂ ಸ್ವಸಹಾಯ ಸಂಘಗಳಿಗೆ ಶೇ. ೪ರ ಬಡ್ಡಿದರದಲ್ಲಿ ಗುಂಪುಸಾಲ ಸೌಲಭ್ಯ ನೀಡಲಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಯೋಜನೆಯನ್ನು ಪೂರ್ಣಪ್ರಮಾಣದಲ್ಲಿ ಸದ್ವಿನಿಯೋಗ ಮಾಡಬೇಕು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಬೀದಿಬದಿ ವ್ಯಾಪಾರಿಗಳು ಬಡತನರೇಖೆಗಿಂತ ಕೆಳಗಿರುವವರು. ಸಂಕಷ್ಟದಲ್ಲಿರುವ ವ್ಯಾಪಾರಿಗಳನ್ನು ಸಾಲಸೌಲಭ್ಯಕ್ಕಾಗಿ ಕಚೇರಿಗೆ ಅಲೆದಾಡಿಸಬಾರದು. ಅವಶ್ಯ ದಾಖಲೆಗಳನ್ನು ಪಡೆದು ಸಾಲಸೌಲಭ್ಯ ನೀಡಲು ಮುಂದಾಗಬೇಕು. ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯ ಸದುದ್ದೇಶವನ್ನು ಅರಿತು ಬೀದಿಬದಿ ವ್ಯಾಪಾರಿಗಳಿಗೆ ಸೌಲಭ್ಯ ನೀಡಲು ಅಧಿಕಾರಿಗಳು ಮುಕ್ತ ಮನಸ್ಸು ಹೊಂದಿರಬೇಕು. ಈ ನಿಟ್ಟಿನಲ್ಲಿ ಕಾರ್ಯಾಗಾರ ಎಲ್ಲರಿಗೂ ಪ್ರವೇಶದ್ವಾರವಾಗಲಿ ಎಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಹಾರೈಸಿದರು.
ಜಿಲ್ಲಾ ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಅಧಿಕಾರಿ ಮಹಮ್ಮದ್ ಎ ಅಕ್ಬರ್ ಅವರು ಕಾರ್ಯಾಗಾರದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದೇ ವೇಳೆ ಜಿಲ್ಲೆಯ ವಿವಿಧ ನಗರ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯಡಿ ರಸ್ತೆಬದಿ ವ್ಯಾಪಾರಿಗಳಿಗೆ ಸಾಲಸೌಲಭ್ಯ ನೀಡಿ ಉತ್ತಮ ಸಾಧನೆಗೈದ ಭಾರತೀಯ ಸ್ಟೇಟ್ ಬ್ಯಾಂಕ್‌ನ ವಲಯ ವ್ಯವಸ್ಥಾಪಕರಾದ ವಾಸುದೇವ್, ಕೆನರಾ ಬ್ಯಾಂಕ್‌ನ ನಂಜುಂಡಸ್ವಾಮಿ ಹಾಗೂ ಯೂನಿಯನ್ ಬ್ಯಾಂಕ್‌ನ ಗಿರೀಶ್ ಅವರುಗಳನ್ನು ಸನ್ಮಾನಿಸಲಾಯಿತು.
ನಗರಸಭೆ ಪೌರಾಯುಕ್ತರಾದ ರಾಮದಾಸ್, ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವ್ಯವಸ್ಥಾಪಕರಾದ ಸುರೇಖಾ, ನಗರಸಭೆ ಸಮುದಾಯ ಸಂಘಟನಾಧಿಕಾರಿ ವೆಂಕಟ್‌ನಾಯಕ್, ಕೌಶಲ್ಯಾಭಿವೃದ್ದಿ ಇಲಾಖೆಯ ವ್ಯವಸ್ಥಾಪಕರಾದ ಪುಟ್ಟಸ್ವಾಮಿ, ಪಾಷಾ, ಎಂ.ಟಿ.ಒ ಅನ್ಸರ್‌ಖಾನ್, ಇತರರು ಕಾರ್ಯಾಗಾರದಲ್ಲಿ ಹಾಜರಿದ್ದರು.
