ಮಂಡ್ಯ: ರಾಜ್ಯ ಹೆದ್ದಾರಿ ನಿರ್ಮಾಣಕ್ಕೆ ಸ್ವಾಧೀನ ಪಡಿಸಿಕೊಳ್ಳಲಾದ ಜಮೀನಿಗೆ ಪರಿಹಾರ ನೀಡದಿರುವುದನ್ನು ಖಂಡಿಸಿ ಹಾಗೂ ಪರಿಹಾರ ನೀಡುವಂತೆ ಆಗ್ರಹಿಸಿ ವೃದ್ಧ ರೈತ ದಂಪತಿ ಆಹೋರಾತ್ರಿ ಸತ್ಯಾಗ್ರಹ ನಡೆಸಲು ಮುಂದಾಗಿರುವ ಘಟನೆ ಕೆ.ಆರ್.ಪೇಟೆ ತಾಲೂಕಿನ ಮಾಚಹೊಳಲು ಗ್ರಾಮದಲ್ಲಿ ನಡೆದಿದೆ.
ಕೆ.ಆರ್.ಪೇಟೆ ತಾಲೂಕು ಮೂಲಕ ಹಾದು ಹೋಗಿರುವ ಜಲಸೂರು ಬೆಂಗಳೂರು ರಾಜ್ಯ ಹೆದ್ದಾರಿಯ ನಿರ್ಮಾಣಕ್ಕೆ ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದ ಮಾಚಹೊಳಲು ಗ್ರಾಮದ ರೈತರಾದ ಪುಟ್ಟರಾಜು ಅವರಿಂದ 14.5 ಗುಂಟೆ ಜಮೀನಿನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದ್ದು ಪರಿಹಾರ ನೀಡದೇ ಕಾಮಗಾರಿಯನ್ನು ಆರಂಭಿಸಿರುವುದನ್ನು ವಿರೋಧಿಸಿ ಪುಟ್ಟರಾಜು ದಂಪತಿ ಇದೀಗ ಆಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ.
ರಾಜ್ಯದ ರಾಜಧಾನಿಯಾದ ಬೆಂಗಳೂರು ಮಹಾನಗರಿಯಿಂದ ನೆರೆಯ ಕೇರಳ ರಾಜ್ಯದ ಜಲಸೂರಿಗೆ ನೇರವಾಗಿ ಸಂಪರ್ಕ ಕಲ್ಪಿಸಲು ಅನುಕೂಲವಾಗುವಂತೆ ಮಾಗಡಿ, ನಾಗಮಂಗಲ, ಕೃಷ್ಣರಾಜಪೇಟೆ, ಭೇರ್ಯ, ಸಾಲಿಗ್ರಾಮ, ರಾಮನಾಥಪುರ, ಕೊಣನೂರು, ಕುಶಾಲನಗರ ಮಾರ್ಗವಾಗಿ ಜಲಸೂರಿಗೆ ಸಂಪರ್ಕ ನೀಡುವ ರಸ್ತೆ ಕಾಮಗಾರಿಯನ್ನು ಕೆಶಿಫ್ ವತಿಯಿಂದ ಕೈಗೊಂಡಿರುವ ರಾಜ್ಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರವು ನೆರೆಯ ಹೈದರಾಬಾದ್ ಮೂಲಕ ಕೆಎನ್‌ಆರ್‌ಸಿಎಲ್ ಕನ್ಸಟ್ರಕ್ಷನ್ ಕಂಪನಿಗೆ ಕಾಮಗಾರಿಯನ್ನು ಟೆಂಡರ್ ಮೂಲಕ ವಹಿಸಿದ್ದು ರಸ್ತೆ ಅಭಿವೃದ್ಧಿ ಕಾಮಗಾರಿಯು ಭರದಿಂದ ಸಾಗಿದೆ.
ಈ ನಡುವೆ ಮಾಚಹೊಳಲು ಗ್ರಾಮದ ಪ್ರಗತಿಪರ ರೈತರಾದ ಪುಟ್ಟರಾಜು ಗ್ರಾಮದ ಸರ್ವೇ ನಂಬರ್ 6/6ರ ಪೈಕಿ ಒಂದೂವರೆ ಎಕರೆ ಕೃಷಿ ಭೂಮಿಯನ್ನು ಹೊಂದಿದ್ದು, ಈ ಭೂಮಿಯಲ್ಲಿ 14.5 ಗುಂಟೆ ಜಮೀನನ್ನು ರಾಜ್ಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರವು ರಸ್ತೆ ನಿರ್ಮಿಸಲು ಸ್ವಾಧೀನಕ್ಕೆ ಪಡೆದುಕೊಂಡು ಎರಡು ವರ್ಷಗಳು ಕಳೆಯುತ್ತಿದ್ದರೂ ಪುಟ್ಟರಾಜು ಅವರ ಖಾತೆಗೆ ಮಾತ್ರ ಇಂದಿಗೂ ಹಣ ತಲುಪಿಲ್ಲ. ಆದರೆ ರಸ್ತೆಯ ಕಾಮಗಾರಿಯನ್ನು ಗುತ್ತಿಗೆಗೆ ಪಡೆದುಕೊಂಡಿರುವ ಕೆಎನ್‌ಆರ್‌ಸಿಎಲ್ ಕಂಪನಿಯು ಪುಟ್ಟರಾಜು ಅವರಿಗೆ ಸೇರಿರುವ ಜಮೀನಿನಲ್ಲಿ ಅವರ ವಿರೋಧದ ನಡುವೆಯೂ ರಸ್ತೆ ಕಾಮಗಾರಿಯನ್ನು ನಡೆಸುತ್ತಿರುವುದರಿಂದ ನೊಂದ ರೈತ ಪುಟ್ಟರಾಜು ತಮ್ಮ ಇಳಿ ವಯಸ್ಸಿನಲ್ಲಿ ತಮ್ಮ ಪತ್ನಿ ಸಮೇತರಾಗಿ ರಸ್ತೆಯಲ್ಲಿಯೇ ಕುಳಿತು ಧರಣಿ ಸತ್ಯಾಗ್ರಹವನ್ನು ಆರಂಭಿಸಿದ್ದಾರೆ. ಸಂಬಂಧಿಸಿದವರಿಗೆ ವೃದ್ಧ ದಂಪತಿಗಳ ಕೂಗು ಕೇಳಿಸುತ್ತದೆಯಾ ಎಂಬುದನ್ನು ಕಾದು ನೋಡಬೇಕಿದೆ.