
ಚಾಮರಾಜನಗರ: ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಹಿತರಕ್ಷಣಾ ಸಮಿತಿ ಸಭೆಯಲ್ಲಿ ಚರ್ಚಿತವಾಗುವ ವಿಷಯಗಳಿಗೆ ಸಂಬಂಧಿಸಿದಂತೆ ಕಾಲಮಿತಿಯಲ್ಲಿ ಪರಿಹಾರ ಸಿಗುವಂತೆ ಅಧಿಕಾರಿಗಳು ಕ್ರಮವಹಿಸಬೇಕೆಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಸೂಚಿಸಿದರು.
ನಗರದ ಜಿಲ್ಲಾಡಳಿತ ಭವನದಲ್ಲಿರುವ ಹಳೇ ಕೆಡಿಪಿ ಸಭಾಂಗಣದಲ್ಲಿಂದು ನಡೆದ ಜಿಲ್ಲಾ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಹಿತರಕ್ಷಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಭೆಯ ಆರಂಭದಲ್ಲೇ ಮಾತನಾಡಿದ ಸಮುದಾಯದ ಮುಖಂಡರು ಹಿಂದಿನ ಸಭೆಯಲ್ಲಿ ನಡೆದ ವಿಷಯಗಳು ಚರ್ಚೆಗಳು ನಡಾವಳಿಯಲ್ಲಿ ಸರಿಯಾಗಿ ದಾಖಲಾಗಿಲ್ಲ. ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದೆಯೇ ಎಂಬ ಬಗ್ಗೆ ಮಾಹಿತಿ ಇಲ್ಲ ಎಂದು ಪ್ರಸ್ತಾಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಯವರು ಸಭೆಯಲ್ಲಿ ನಡೆಯುವ ವಿಷಯಗಳು ಚರ್ಚೆಗಳು ವಿವರವಾಗಿ ದಾಖಲಾಗಬೇಕು. ಪ್ರಸ್ತಾಪಿಸಲಾದ ಸಮಸ್ಯೆಗಳಿಗೆ ಯಾವ ಕ್ರಮ ವಹಿಸಲಾಗಿದೆ, ಪರಿಹಾರ ದೊರೆತಿದೆಯೇ ಎಂಬ ಬಗ್ಗೆ ಸ್ಪಷ್ಟವಾಗಿ ನಮೂದು ಮಾಡಬೇಕು. ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ಜನರ ಸಮಸ್ಯೆಗಳಿಗೆ ಶೀಘ್ರವೇ ಪರಿಹಾರ ದೊರೆಯುವಂತೆ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕೆಂದು ನಿರ್ದೇಶನ ನೀಡಿದರು.
ಚಾಮರಾಜನಗರ ತಾಲೂಕಿನ ಹೆಗ್ಗೋಠಾರ ಗ್ರಾಮದಲ್ಲಿ ಇತ್ತೀಚೆಗೆ ಅಸ್ಪೃಶ್ಯತೆ ಆಚರಣೆ ಮಾಡಲಾಗಿದೆ. ಶಾಂತಿ ಸಭೆ ಕರೆಯುವುದಾಗಿ ತಿಳಿಸಲಾಗಿದ್ದರೂ ಈವರೆಗೂ ಸಭೆ ನಡೆಸಲಾಗಿಲ್ಲ. ಹೀಗಾಗಿ ಸಭೆಗೆ ದಿನಾಂಕ ನಿಗದಿ ಮಾಡಬೇಕು. ಅಲ್ಲದೇ ಗ್ರಾಮದ ಇತರೆ ಹಲವು ವಿಷಯಗಳು ಬಗೆಹರಿಯಬೇಕಿದೆ ಎಂದು ಸಭೆಯಲ್ಲಿ ಪ್ರಸ್ತಾಪವಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಯವರು ಇದೇ ಜನವರಿ ೧೨ರಂದು ಸಭೆ ನಡೆಸುವುದಾಗಿ ತಿಳಿಸಿದರು.
ಜೀತ ವಿಮುಕ್ತರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ವಿಳಂಬ ನೀತಿ ಅನುಸರಿಸಲಾಗುತ್ತಿದೆ ಎಂಬ ಗಮನಸೆಳೆದ ಪ್ರಸ್ತಾಪಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿಯವರು ಈ ನಿಟ್ಟಿನಲ್ಲಿ ಕ್ರಮವಹಿಸುವುದಾಗಿ ತಿಳಿಸಿದರು.
೫೦ ಲಕ್ಷದೊಳಗಿನ ಕಾಮಗಾರಿ ನಿರ್ವಹಣೆಗೆ ಪರಿಶಿಷ್ಟರಿಗೆ ಸೇರಿದ ಗುತ್ತಿಗೆದಾರರಿಗು ಅವಕಾಶವಾಗಬೇಕು. ಪ್ರತಿಷ್ಠಿತ ಶಾಲೆಗಳ ಪಟ್ಟಿಗೆ ಇತರೆ ಅರ್ಹ ಶಾಲೆಗಳನ್ನು ಸೇರ್ಪಡೆ ಮಾಡಬೇಕು. ಹೆಚ್‌ಡಿ ಫಾರೆಸ್ಟ್ ಸೇರಿದಂತೆ ಇತರೆ ಭೂಮಿಯನ್ನು ಪರಿಶಿಷ್ಟ ಜನಾಂಗದವರಿಗೆ ನೀಡುವ ನಿಟ್ಟಿನಲ್ಲಿ ಸೂಕ್ತ ಕ್ರಮವಾಗಿಲ್ಲ, ಪರಿಶಿಷ್ಟರಿಗೆ ಬ್ಯಾಂಕುಗಳಲ್ಲಿ ಸಾಲ ಸೌಲಭ್ಯ ಸಿಗುತ್ತಿಲ್ಲ, ಸ್ಮಶಾನ ಮಂಜೂರಾತಿ, ಜಲಜೀವನ್ ಮಿಷನ್ ಕಾಮಗಾರಿ ಬಳಿಕ ರಸ್ತೆಗಳ ಗುಂಡಿ ಮುಚ್ಚದಿರುವುದು ಇನ್ನಿತರ ಹಲವು ಸಮಸ್ಯೆಗಳನ್ನು ಮುಖಂಡರು ಸಭೆಯಲ್ಲಿ ಗಮನಕ್ಕೆ ತಂದು ವಿವರವಾಗಿ ಚರ್ಚಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯತ್ರಿ, ಉಪವಿಭಾಗಾಧಿಕಾರಿ ಗೀತಾ ಹುಡೇದ, ಡಿವೈಎಸ್‌ಪಿ ಪ್ರಿಯದರ್ಶಿನಿ ಸಾಣೆಕೊಪ್ಪ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಮಲ್ಲಿಕಾರ್ಜುನ್, ಜಿಲ್ಲಾ ವಿಶೇಷ ದಳ ಇನ್ಸ್‌ಪೆಕ್ಟರ್ ಮಹದೇವಶೆಟ್ಟಿ, ಮುಖಂಡರಾದ ಸಿ.ಕೆ. ಮಂಜುನಾಥ್, ಸಿ.ಎಂ. ಕೃಷ್ಣಮೂರ್ತಿ, ಕೆ.ಎಂ. ನಾಗರಾಜು, ಆರ್.ಪಿ. ನಂಜುಂಡಸ್ವಾಮಿ, ಅಣಗಳ್ಳಿ ಬಸವರಾಜು, ಸಿದ್ದರಾಜು ಕೆಂಪನಪಾಳ್ಯ, ಸಿ.ಕೆ. ರವಿಕುಮಾರ್, ಚಾ.ಗು. ನಾಗರಾಜು, ಚಂಗುಮಣಿ, ರಾಮಸಮುದ್ರ ನಾಗರಾಜು, ಶ್ರೀಕಂಠ, ಸುರೇಶ್‌ನಾಯಕ, ಜಿ. ಬಂಗಾರು, ಶಿವಣ್ಣ, ಸಂಘಸೇನ, ಬ್ಯಾಡಮೂಡ್ಲು ಬಸವಣ್ಣ, ನಾರಾಯಣ, ಪ್ರಶಾಂತ್, ಕಂದಹಳ್ಳಿ ನಾರಾಯಣ, ಅಂಬರೀಶ್, ಗುಂಡ್ಲುಪೇಟೆ ಸಂತೋಷ್, ಆಲೂರು ನಾಗೇಂದ್ರ, ಕುಮಾರ್, ರಾಚಯ್ಯ, ಧರಣೇಂದ್ರ, ದೊಡ್ಡಿಂದುವಾಡಿ ಸಿದ್ದರಾಜು, ವರದರಾಜು, ಪುಟ್ಟಮ್ಮ, ರಾಜಣ್ಣ, ಇತರೆ ಮುಖಂಡರು, ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
