ಚಾಮರಾಜನಗರ: ವಿವಿಧ ಇಲಾಖೆಗಳು ಪ್ರಸಕ್ತ ಸಾಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪ ಯೋಜನೆಯಡಿ ಕಾರ್ಯಕ್ರಮಗಳ ಪ್ರಗತಿಯನ್ನು ಶೇ.೧೦೦ರಷ್ಟು ಸಾಧಿಸುವಂತೆ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಪರಿಶಿಷ್ಟ ಜಾತಿ ಉಪ ಯೋಜನೆ ಮತ್ತು ಪರಿಶಿಷ್ಟ ಪಂಗಡ ಉಪ ಯೋಜನೆ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಸಕ್ತ ಸಾಲಿನ ಆರ್ಥಿಕ ವರ್ಷದ ಅಂತ್ಯದಲ್ಲಿದ್ದೇವೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಉಪಯೋಜನೆಯಡಿ ಬಾಕಿ ಇರುವ ಕಾರ್ಯವನ್ನು ಪೂರ್ಣಗೊಳಿಸಿ ತ್ವರಿತವಾಗಿ ಶೇ. ೧೦೦ರಷ್ಟು ಪ್ರಗತಿ ಸಾಧಿಸಬೇಕು. ಯಾವುದೇ ಕಾರಣಕ್ಕೂ ಅನುದಾನ ವ್ಯಪಗತವಾಗಬಾರದೆಂದು ಜಿಲ್ಲಾಧಿಕಾರಿಯವರು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಹಲವು ಇಲಾಖೆಗಳು ಬಹುತೇಕ ನಿಗದಿಪಡಿಸಿದ ಯೋಜನೆ ಕಾರ್ಯಕ್ರಮಗಳನ್ನು ಪೂರ್ಣಗೊಳಿಸಿವೆ. ಬಾಕಿ ಇರುವ ಕೆಲವೇ ಇಲಾಖೆಗಳು ಉಳಿದ ಯೋಜನೆಯ ಕಾರ್ಯಕ್ರಮವನ್ನು ಶೀಘ್ರ ತಲುಪಿಸಿ ನಿಗದಿತ ಅವಧಿಯೊಳಗೆ ಗುರಿ ಮುಟ್ಟಬೇಕು. ಇಲ್ಲವಾದಲ್ಲಿ ನಿಯಮಾನುಸಾರ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು.
ಬಾಲ ಕಾರ್ಮಿಕರಾಗಿ ದುಡಿಯುತ್ತಿರುವವರನ್ನು ಪತ್ತೆಹಚ್ಚಿ ಅವರ ಶಿಕ್ಷಣ ಮುಂದಿನ ಉತ್ತಮ ಭವಿಷ್ಯಕ್ಕೆ ಕ್ರಮವಹಿಸಬೇಕು. ಶಾಲೆ ಬಿಟ್ಟಿರುವ ಮಕ್ಕಳ ಮಾಹಿತಿಯನ್ನು ಶಿಕ್ಷಣ ಇಲಾಖೆಯಿಂದ ಪಡೆದು ಪೋಷಕರ ಮನೆಗೆ ಭೇಟಿ ನೀಡಿ ವರದಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಸೂಚನೆ ನೀಡಿದರು.
ವಿವಿಧ ಇಲಾಖೆಗಳ ಪ್ರಗತಿಯನ್ನು ವಿವರವಾಗಿ ಪರಿಶೀಲಿಸಲಾಯಿತು.
ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಮಲ್ಲಿಕಾರ್ಜುನ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜುಳಾ, ಕೃಷಿ ಜಂಟಿ ನಿರ್ದೇಶಕರಾದ ಮಧುಸೂಧನ್, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರಾದ ಶಿವಪ್ರಸಾದ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕರಾದ ಗೀತಾಲಕ್ಷ್ಮಿ, ಪಂಚಾಯತ್ ರಾಜ್ ಎಂಜಿನಿರಿಂಗ್ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಇಬ್ರಾಹಿಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಹಾಗೂ ಅಕ್ಷರ ದಾಸೋಹ ಅಧಿಕಾರಿ ಗುರುಲಿಂಗಯ್ಯ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೆಶಕರಾದ ಅನಿತಾ, ಶಿಕ್ಷಣ ಅಧಿಕಾರಿ ಮಂಜುನಾಥ್, ಆಹಾರ ಇಲಾಖೆಯ ಉಪನಿರ್ದೇಶಕರಾದ ಯೋಗಾನಂದ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
