ಚಾಮರಾಜನಗರ: ಜಿಲ್ಲೆಯಲಿ ಕುಷ್ಠ ರೋಗ ನಿರ್ಮೂಲನೆಗಾಗಿ ಇದೇ ಜನವರಿ ೩೦ ರಿಂದ ಫೆಬ್ರವರಿ ೧೩ರವರೆಗೆ ಸ್ಪರ್ಶ್ ಕುಷ್ಠರೋಗ ಅರಿವು ಆಂದೋಲನ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಆಯೋಜಿಸುವಂತೆ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಸೂಚಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಕುಷ್ಠರೋಗ ಅರಿವು ಆಂದೋಲನ ಕಾರ್ಯಕ್ರಮ ಸಂಬಂಧ ನಡೆದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕುಷ್ಠರೋಗ ನಿರ್ಮೂಲನೆ ಉದ್ದೇಶಕ್ಕಾಗಿ ಜನವರಿ ೩೦ ರಿಂದ ಕುಷ್ಠರೋಗ ವಿರೋಧಿ ಪಾಕ್ಷಿಕ ದಿನ ಆಚರಿಸಲಾಗುತ್ತಿದೆ. ಈ ಅವಧಿಯಲ್ಲಿ ಜಾಗೃತಿ ಅಭಿಯಾನ ಹಮ್ಮಿಕೊಂಡು ರೋಗದ ಬಗ್ಗೆ ತಿಳಿವಳಿಕೆ ನೀಡಬೇಕಿದೆ. ಶಾಲೆಗಳಲ್ಲಿ ಉಪಾಧ್ಯಯರಿಗೆ, ವಿದ್ಯಾರ್ಥಿಗಳಿಗೆ ಹೆಚ್ಚಿನ ಅರಿವು ಉಂಟು ಮಾಡಬೇಕು. ಇದಕ್ಕಾಗಿ ಮಕ್ಕಳಿಗೆ ರಸಪ್ರಶ್ನೆಯಂತಹ ಕಾರ್ಯಕ್ರಮ ಏರ್ಪಡಿಸಬೇಕೆಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಬರುವ ಗ್ರಾಮ ಪಂಚಾಯಿತಿಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಕುಷ್ಠರೋಗದ ಬಗ್ಗೆ ಇರುವ ತಪ್ಪು ನಂಬಿಕೆ, ಕಳಂಕ, ತಾರತಮ್ಯ ನಿವಾರಣೆ ಹೋಗಲಾಡಿಸಬೇಕು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಷ್ಠರೋಗಿಗಳಿಗೆ ಎಂಸಿಆರ್ ಪಾದರಕ್ಷೆ ಹಾಗೂ ಸ್ವಯಂ ಆರೈಕೆ ಕಿಟ್‌ಗಳನ್ನು ವಿತರಿಸಬೇಕು ಎಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ನಿರ್ದೇಶನ ನೀಡಿದರು.
ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ಪಿ. ಚಂದ್ರಶೇಖರ್ ಮಾತನಾಡಿ ಜಿಲ್ಲೆಯಲ್ಲಿ ೨೦೨೨-೨೩ನೇ ಸಾಲಿನಲ್ಲಿ ಡಿಸೆಂಬರ್ ವರೆಗೆ ೫೯ ಹೊಸರೋಗಿಗಳು ಪತ್ತೆಯಾಗಿದ್ದು, ಇವರಿಗೆ ಎಂಡಿಟಿ ಬಹು ಔಷಧಿ ಚಿಕಿತ್ಸೆ ನೀಡಲಾಗುತ್ತಿದೆ. ೨೯ ಮಂದಿ ಗುಣಮುಖರಾಗಿದ್ದು ಜಿಲ್ಲೆಯಲ್ಲಿ ಕುಷ್ಠರೋಗದ ಸಾಂದ್ರತೆ ೦.೫೦ರಷ್ಟಿದೆ. ರೋಗಿಗಳಿಗೆ ೧೩೨ ಎಂಸಿಆರ್ ಪಾದರಕ್ಷೆ, ೫೦ ಸ್ವಯಂ ಆರೈಕೆ ಕಿಟ್‌ಗಳನ್ನು ವಿತರಿಸಲಾಗಿದೆ. ೭ ಅಂಗವಿಕಲ ರೋಗಿಗಳಿಗೆ ಉಚಿತವಾಗಿ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಸರ್ಕಾರಿ ಆದೇಶದನ್ವಯ ಕುಷ್ಠರೋಗದಿಂದ ಗುಣಮುಖರಾದ ಐವರಿಗೆ ಗ್ರೂಪ್ ಡಿ ಹುದ್ದೆ ದೊರಕಿದೆ ಎಂದು ಮಾಹಿತಿ ನೀಡಿದರು.
ಇದೇ ವೇಳೆ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಸ್ಪರ್ಶ್ ಕುಷ್ಠರೋಗ ಜಾಗೃತಿ ಅಭಿಯಾನದ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ರೋಗದ ಅರಿವು ಸಂಬಂಧ ಹೊರತಂದಿರುವ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಂ. ವಿಶ್ವೇಶ್ವರಯ್ಯ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಅಂಕಪ್ಪ, ಜಿಲ್ಲಾ ಸರ್ವಲೆನ್ಸ್ ಅಧಿಕಾರಿ ಡಾ. ನಾಗರಾಜು, ಮನೋರೋಗ ತಜ್ಞರಾದ ಡಾ. ರಾಜೇಶ್, ಮಲೇರಿಯಾ ನಿರ್ಮೂಲನಾಧಿಕಾರಿ ಡಾ. ಕಾಂತರಾಜು, ತಾಲೂಕು ಆರೋಗ್ಯಾ ಅಧಿಕಾರಿಗಳಾದ ಡಾ. ಶ್ರೀನಿವಾಸ್, ಡಾ. ಗೋಪಾಲ್, ಡಾ. ಪ್ರಕಾಶ್, ಡಾ. ಗಿರಿದಾಸ್, ಜಿಲ್ಲಾ ಪಂಚಾಯತ್ ಅಧಿಕಾರಿ ದೀಪಾ, ಇತರೆ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.