ಮೈಸೂರು: ಮದುವೆಯಾಗಿ ಹೆಂಡತಿಯನ್ನು ಸಾಕಬೇಕಾದ ಪತಿಮಹಾಶಯ ಆಕೆಗೆ ವರದಕ್ಷಿಣೆ ತರುವಂತೆ ಕಿರುಕುಳ ನೀಡಿ ಆಕೆ ಆತ್ಮಹತ್ಯೆಗೆ ಶರಣಾಗುವಂತೆ ಮಾಡಿದ್ದನು. ಈ ಆರೋಪದಡಿ ಜೈಲ್ ಸೇರಿದ್ದ ಆತ  ಇದೀಗ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಶ್ರೀರಾಂಪುರ ನಿವಾಸಿ ಪ್ರದೀಪ್ ಎಂಬಾತನೇ ಜೈಲ್ ನಲ್ಲಿ ನೇಣಿಗೆ ಶರಣಾದ ಆರೋಪಿ. ಈತ ಹೆಂಡತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ವರದಕ್ಷಿಣೆ ಕಿರುಕುಳ ಮತ್ತು ಸಾವಿಗೆ ಕಾರಣವಾದ ಆರೋಪ ಎದುರಿಸುತ್ತಿದ್ದನು. ಈತನಿಗೆ ಕೊರೋನಾ ಇದ್ದ ಕಾರಣ ಕೈಲಾಸಪುರಂ ನಲ್ಲಿ ನಿರ್ಮಿಸಲಾದ ತಾತ್ಕಾಲಿಕ ಜೈಲಿನಲ್ಲಿದ್ದನು. ಆದರೆ ಈಗ ಅಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈತ ಕಳೆದ ಏಪ್ರಿಲ್ 4ರಂದು ನಂಜನಗೂಡಿನ ಆಶಾರಾಣಿ ಯನ್ನು ಕುವೆಂಪುನಗರದ ಬಂದಂತಮ್ಮ ಕಾಳಮ್ಮ ಕಲ್ಯಾಣ ಮಂಟಪದಲ್ಲಿ ವಿವಾಹ ಮಾಡಿಕೊಂಡಿದ್ದನು.. ವಿವಾಹದ ವೇಳೆ  130ಗ್ರಾಂ ಚಿನ್ನ, ಐದು ಲಕ್ಷರೂ.ನಗದನ್ನು ವರದಕ್ಷಿಣೆ ರೂಪದಲ್ಲಿ ನೀಡಲಾಗಿತ್ತು. ಮದುವೆಯಾದ ಬಳಿಕ ಹೆಂಡತಿಯೊಂದಿಗೆ ಬಾಳ್ವೆ ನಡೆಸಬೇಕಾದ ಈತ ದುಡಿಯದೆ ಹೆಂಡತಿಯ ತವರಿಂದ ವರದಕ್ಷಿಣೆ ರೂಪದಲ್ಲಿ ಹಣ ಪಡೆದು ಎಂಜಾಯ್ ಮಾಡುವ ಸ್ಕೆಚ್ ಹಾಕಿದ್ದನು. ಅಲ್ಲದೆ ಹೆಂಡತಿ ಆಶಾರಾಣಿಗೆ ತವರಿಂದ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದನು.

ಆದರೆ ಹೆತ್ತವರ ಕಷ್ಟ ಅರಿತ ಆಶಾರಾಣಿ ಮನೆಯವರ ಬಳಿ ಹಣವಿಲ್ಲವೆಂದರೂ ಕಿರುಕುಳ ನೀಡುವುದನ್ನು ನಿಲ್ಲಿಸಿರಲಿಲ್ಲ. ಹೀಗಿರುವಾಗಲೇ ಆಕೆ ಕಳೆದ ಮೇ.7ರಂದು ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಳು. ಸಾವಿಗೆ ಸಂಬಂಧಿಸಿದಂತೆ ಆಕೆಯ ಹೆತ್ತವರು ಕೊಲೆಯೆಂದು ಆರೋಪಿಸಿ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರದೀಪ್ ನನ್ನು ಬಂಧಿಸಿದ್ದರಲ್ಲದೆ,. ಆತನಿಗೆ ಕೋವಿಡ್ ಪರೀಕ್ಷೆ ಮಾಡಿಸಿದಾಗ ಪಾಸಿಟಿವ್ ಬಂದಿದ್ದರಿಂದ ಕೈಲಾಸಪುರಂ ನಲ್ಲಿ ನಿರ್ಮಿಸಲಾದ ತಾತ್ಕಾಲಿಕ ಜೈಲಿನಲ್ಲಿ ಇರಿಸಲಾಗಿತ್ತು. ಇದೀಗ ಆತ ನೇಣಿಗೆ ಶರಣಾಗಿದ್ದು, ಈ ಸಂಬಂಧ ಮಂಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

By admin