ಚಾಮರಾಜನಗರ, ಜೂನ್ ೧೫ (ಕರ್ನಾಟಕ ವಾರ್ತೆ):- ದೇಶದ ಶ್ರೀಮಂತ ಸಂಸ್ಕೃತಿ, ನೀಲಗಾರರ ಪರಂಪರೆ, ನೈಸರ್ಗಿಕ ಸಂಪತ್ತು ಹಾಗೂ ಸಾಹಿತ್ಯ ಕಲಾಪ್ರಕಾರಗಳ ಘನತೆಯನ್ನು ಮನವರಿಕೆ ಮಾಡಿಕೊಂಡು ಗೌರವಿಸುವುದು ಪೋಷಿಸುವುದು ಅಗತ್ಯವಾಗಿದೆ ಎಂದು ಸುತ್ತೂರಿನ ಜಗದ್ಗುರು ವೀರಸಿಂಹಾಸನ ಮಠದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಯವರು ಅಭಿಪ್ರಾಯ ಪಟ್ಟರು.
ನಗರದ ಹೊರವಲಯದಲ್ಲಿರುವ ಸುವರ್ಣಗಂಗೋತ್ರಿಯ ಡಾ. ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದ ನಿಜಗುಣ ಸಭಾಂಗಣದಲ್ಲಿಂದು ಶ್ರೀ ಮಂಟೇಸ್ವಾಮಿ, ಸಿದ್ದಪ್ಪಾಜಿ, ರಾಚಪ್ಪಾಜಿ ಅಧ್ಯಯನ ಪೀಠದ ವತಿಯಿಂದ ಆಯೋಜಿಸಿದ್ದ ಮಂಟೇಸ್ವಾಮಿ ಪರಂಪರೆಯ ನೀಲಗಾರ ಆತ್ಮಕಥನವಾದ 'ನಾವು ಕೂಗುವ ಕೂಗು' ಕೃತಿ ಬಿಡುಗಡೆಗೊಳಿಸಿ, ಸ್ನಾತಕೋತ್ತರ ಕೇಂದ್ರದ ವಿವಿಧ ಅಭಿವೃದ್ಧಿ ಕಾಮಗಾರಿ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತವು ಸಮೃದ್ಧ ಸಂಸ್ಕೃತಿ ಹೊಂದಿದ ದೇಶವಾಗಿದೆ. ಹಾಗೆಯೇ ಜಿಲ್ಲೆಯು ಸಹ ಸಾಂಸ್ಕೃತಿಕ ಮತ್ತು ಪ್ರಾಕೃತಿಕವಾಗಿ ಶ್ರೀಮಂತಿಕೆಯನ್ನು ಹೊಂದಿದ್ದು, ನೀಲಗಾರ ಪಂರಪರೆಯನ್ನು ಇಲ್ಲಿನ ಕಲಾವಿದರು ಯಾವುದೇ ಅಪೇಕ್ಷೆ ಇಲ್ಲದೆ ವಂಶಪಾರಂಪರ್ಯವಾಗಿ ಉಳಿಸಿಕೊಂಡು ಬಂದಿದ್ದಾರೆ. ನೀಲಗಾರರ ಬದುಕನ್ನು ಸುಲಲಿತವಾಗಿ ಹಾಡಿನ ಮೂಲಕ ಕಟ್ಟಿಕೊಡುವ ಮಳವಳ್ಳಿ ಮಹದೇವಸ್ವಾಮಿಯವರಿಗೆ ಲಭಿಸಿರುವ ಗೌರವ ಡಾಕ್ಟರೇಟ್ ನೀಲಗಾರರಿಗೆ ಸಂದ ಗೌರವವಾಗಿದೆ. ನೀಲಗಾರರ ಆರ್ಥಿಕ ಮತ್ತು ಸಾಮಾಜಿಕ ಜೀವನವನ್ನು ನಾವು ಕೂಗುವ ಕೂಗು ಕೃತಿಯಲ್ಲಿ ಅಚ್ಚುಕಟ್ಟಾಗಿ ಬಿಂಬಿಸಲಾಗಿದೆ ಎಂದರು.
ಸುವರ್ಣ ಗಂಗೋತ್ರಿಯು ಅತೀ ವೇಗವಾಗಿ ಅಭಿವೃದ್ಧಿ ಹೊಂದುತಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗುತ್ತಿದೆ. ಮುಂದಿನ ದಿನಗಳಲ್ಲಿ ಸುವರ್ಣಗಂಗೋತ್ರಿ ಹೆಚ್ಚಿನ ಅಭಿವೃದ್ಧಿ ಕಾಣಲಿ, ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದ ಆಶಾಕಿರಣವಾಗಲಿ ಎಂದು ಮಹಾಸ್ವಾಮಿಯವರು ಹಾರೈಸಿದರು. 
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೈಸೂರು ವಿ.ವಿ. ಕುಲಪತಿ ಪ್ರೊ. ಹೇಮಂತಕುಮಾರ್ ಅವರು ಮಾತನಾಡಿ ಕೇವಲ ೬ ತಿಂಗಳಲ್ಲಿ ನೀಲಗಾರ ಪರಂಪರೆ ಕಲಾವಿದರನ್ನು ಒಗ್ಗೂಡಿಸಿ ಮಾಹಿತಿಯನ್ನು ಸಂಗ್ರಹಿಸಿ ನಾವು ಕೂಗುವ ಕೂಗು ಕೃತಿ ರಚಿಸಲಾಗಿದೆ.  ಸ್ನಾತಕೋತ್ತರ ಕೇಂದ್ರವನ್ನು ಅಧುನಿಕ ಶಿಕ್ಷಣ ಪದ್ದತಿಗೆ ಅನುಗುಣವಾಗಿ ಅಭಿವೃದ್ಧಿ ಪಡಿಸಲಾಗುತಿದ್ದು ಇನ್ನು ಹಲವು ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸಲಾಗುವುದು ಎಂದರು.
ಮಂಟೇಸ್ವಾಮಿ ಅಧ್ಯಯನ ಪೀಠ ಹಾಗೂ ಕನ್ನಡ ವಿಭಾಗದ ಸಂದರ್ಶಕ ಪ್ರಾಧ್ಯಾಪಕರಾದ ಪ್ರೊ. ಕೃಷ್ಣಮೂರ್ತಿ ಹನೂರು ಅವರು ಮಾತನಾಡಿ ಹಲವಾರು ತತ್ವಪದಗಳನ್ನು ಒಳಗೊಂಡಿರುವ ನೀಲಗಾರರ ಸಾಹಿತ್ಯಗಳು ಸುಧೀರ್ಘವಾಗಿ ಹಾಡುವ ಕಲೆಯಾಗಿದೆ. ನೀಲಗಾರರ ಸಂಸ್ಕೃತಿ ನಶಿಸಿಹೋಗದಂತೆ ದಾಖಲೀಕರಿಸಿ ಮುಂದಿನ ಪೀಳಿಗೆಗೆ ಉಳಿಸಿ, ಮುಂದುವರೆಸುವ ಕೆಲಸ ಆಗಬೇಕಿದೆ ಎಂದು ತಿಳಿಸಿದರು.
ಮೈಸೂರು ವಿ.ವಿ. ಕುಲಸಚಿವರಾದ ಆರ್. ಶಿವಪ್ಪ, ಹಣಕಾಸು ಅಧಿಕಾರಿ ಡಾ. ಸಂಗೀತ ಗಜಾನನ, ಸಿಂಡಿಕೇಟ್ ಸದಸ್ಯರಾದ ಪ್ರದೀಪ್‌ಕುಮಾರ್ ದೀಕ್ಷಿತ್, ಡಾ. ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾದ ಪ್ರೊ. ಆರ್. ಮಹೇಶ್, ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರು ಪ್ರೊ. ವಿಜಂiಕುಮಾರಿ ಕರಿಕಲ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.