ಚಾಮರಾಜನಗರ: ನಾಗರಿಕರು ಖಾತೆ ಮತ್ತಿತ್ತರ ಸೌಲಭ್ಯಗಳನ್ನು ಕೋರಿ ಸಲ್ಲಿಸುವ ಅರ್ಜಿಗಳಿಗೆ ನಗರಸಭೆ ಅಧಿಕಾರಿಗಳು ತ್ವರಿತವಾಗಿ ಸ್ಪಂದಿಸಿ ನಿಗದಿತ ಅವಧಿಯೊಳಗೆ ಅನುಕೂಲ ಕಲ್ಪಿಸಬೇಕೆಂದು ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.
ಚಾಮರಾಜನಗರ ನಗರಸಭೆ ಆವರಣದಲ್ಲಿಂದು ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿರುವ ಇ-ಆಸ್ತಿ, ಹಕ್ಕು ವರ್ಗಾವಣೆ, ಖಾತೆ ವಿಲೇವಾರಿ ಸಪ್ತಾಹ ಉದ್ಘಾಟಿಸಿ ಅವರು ಮಾತನಾಡಿದರು.
ಬಡವರು ತಮ್ಮ ಹಕ್ಕು ವರ್ಗಾವಣೆ, ಇ-ಸ್ವತ್ತು, ಇನ್ನಿತರ ಸೌಲಭ್ಯಗಳಿಗಾಗಿ ಕೋರಿ ಅರ್ಜಿ ಸಲ್ಲಿಸುತ್ತಾರೆ. ಇಂತಹ ಅರ್ಜಿಗಳನ್ನು ತ್ವರಿತವಾಗಿ ನಿಗದಿಪಡಿಸಿದ ಅವಧಿಯೊಳಗೆ ವಿಲೇವಾರಿ ಮಾಡಬೇಕು. ಇದರಿಂದ ಫಲಾನುಭವಿಗಳಿಗೆ ಅನುಕೂಲವಾಗುತ್ತದೆ. ಮದ್ಯವರ್ತಿಗಳ ಪ್ರವೇಶಕ್ಕೆ ಅವಕಾಶ ನೀಡಬಾರದು ಎಂದರು.
ಕೆಲವರಿಗೆ ಹಕ್ಕುಪತ್ರ ಪಡೆಯಲು ದಾಖಲಾತಿಗಳು ಲಭ್ಯವಿಲ್ಲ. ಅಂತಹವರು ಮೂಲ ಸೌಕರ್ಯಗಳಿಂದ ವಂಚಿತರಾಗುತ್ತಿದ್ದಾರೆ. ಇವರಿಗೆ ಕನಿಷ್ಠ ದಾಖಲೆಗಳನ್ನು ಪಡೆಯಲು ಅಧಿಕಾರಿಗಳು ನೆರವಾಗಬೇಕು ಎಂದು ತಿಳಿಸಿದ ಶಾಸಕರು ಅರ್ಜಿದಾರರು ಅವರು ಸಲ್ಲಿಸಿದ ಅರ್ಜಿಗೆ ಸೂಕ್ತ ಅವಧಿಯೊಳಗೆ ಪರಿಹಾರ, ಸೌಲಭ್ಯ ದೊರೆಯದಿದ್ದಲ್ಲಿ ಹಿರಿಯ ಅಧಿಕಾರಿಗಳನ್ನು ಸಂಪಕಿಸಬೇಕು. ನನ್ನನ್ನೂ ಸಹ ನೇರವಾಗಿ ಸಂಪರ್ಕಿಸಿ ಗಮನಕ್ಕೆ ತರಬಹುದು. ಯಾವುದೇ ಅನ್ಯಾಯವಾಗಿದ್ದರೂ ನನಗೆ ತಿಳಿಸಬೇಕು ಎಂದರು.
ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಮಾತನಾಡಿ, ನಗರದ ನಾಗರಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ವಾರ್ಡ್‌ವಾರು ಶಿಬಿರಗಳನ್ನು ಆಯೋಜನೆ ಮಾಡಬೇಕು. ಆಯಾ ವಾರ್ಡಿನ ನಗರಸಭಾ ಸದಸ್ಯರ ಸಹಕಾರದೊಂದಿಗೆ ಜನರಿಗೆ ಖಾತೆ ಮತ್ತಿತ್ತರ ಸೌಲಭ್ಯಗಳು ತಲುಪಿಸುವ ವ್ಯವಸ್ಥೆಯನ್ನು ಶಿಬಿರಗಳಲ್ಲಿ ಮಾಡುವುದರಿಂದ ಸಾಕಷ್ಟು ಅರ್ಜಿಗಳು ಶೀಘ್ರವಾಗಿ ವಿಲೇವಾರಿಯಾಗಲಿವೆ ಎಂದರು.
ನಗರಸಭೆ ಅಧ್ಯಕ್ಷರಾದ ಆಶಾ ಅವರು ಮಾತನಾಡಿ ಅರ್ಜಿದಾರರು ಮಧ್ಯವರ್ತಿಗಳನ್ನು ಸಂಪರ್ಕಿಸದೇ ನೇರವಾಗಿ ಅರ್ಜಿಗಳನ್ನು ಸಲ್ಲಿಸಬೇಕು. ಯಾವುದೇ ಕೆಲಸ ವಿಳಂಬವಾದರೆ ನಮ್ಮ ಅಥವಾ ಆಯಾ ವಾರ್ಡಿನ ಸದಸ್ಯರ ಗಮನಕ್ಕೆ ತರಬೇಕು. ಇದರಿಂದ ಅಧಿಕಾರಿಗಳಿಗೆ ಸೂಚನೆ ನೀಡಿ ಶೀಘ್ರವೇ ಜನರ ಕೆಲಸಗಳಿಗೆ ಸ್ಪಂದಿಸಿ ಅನುಕೂಲ ಕಲ್ಪಿಸಿಕೊಡಲಾಗುವುದು. ಎಲ್ಲಾ ವಾರ್ಡಿನಲ್ಲಿಯೂ ಖಾತಾ ಆಂದೋಲನ ಹಮ್ಮಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು.
ನಗರಸಭಾ ಆಯುಕ್ತರಾದ ಎಸ್.ವಿ. ರಾಮದಾಸ್ ಅವರು ಮಾತನಾಡಿ ಖಾತೆ ನಮೂನೆ-೩ ಇನ್ನಿತರ ಸೌಲಭ್ಯಗಳ ಸಂಬಂಧ ಸ್ವೀಕರಿಸಲಾದ ೫೦೮ ಅರ್ಜಿಗಳ ಪೈಕಿ ೪೨೧ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಕಡತ ವಿಲೇವಾರಿಗೆ ಹೆಚ್ಚಿನ ಗಮನ ನೀಡಲಾಗಿದೆ. ಇಂದು ೧೦೦ ಫಲಾನುಭವಿಗಳಿಗೆ ನಮೂನೆ-೩ ವಿತರಿಸಲಾಗುತ್ತಿದೆ. ಅರ್ಜಿದಾರರು ಸಕಾಲದಡಿ ಅರ್ಜಿಗಳನ್ನು ಸಲ್ಲಿಸಿದರೆ ೪೫ ದಿನಗಳೊಳಗೆ ವಿಲೇವಾರಿ ಮಾಡಿ ಅನುಕೂಲ ಮಾಡಿಕೊಡಲಾಗುತ್ತದೆ ಎಂದರು.
ಇದೇ ವೇಳೆ ಅರ್ಜಿದಾರರಿಗೆ ಸೌಲಭ್ಯ ಪತ್ರಗಳನ್ನು ಗಣ್ಯರು ವಿತರಿಸಿದರು.
ನಗರಸಭೆ ಸದಸ್ಯರಾದ ಕುಮುದ ಕೇಶವ್, ಮಹೇಶ್ ಗಾಳಿಪುರ, ಚಿನ್ನಮ್ಮ, ಖಲೀಲ್, ಕಂದಾಯ ಅಧಿಕಾರಿ ಶರವಣ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಗಿರಿಜಾ, ಸಮುದಾಯ ಸಂಘಟನಾ ಅಧಿಕಾರಿ ವೆಂಕಟನಾಯಕ್, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
