ಮೈಸೂರು: ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕೊರೊನಾದ ಬಗೆಗಿನ ಭಯ ಕಡಿಮೆಯಾಗಿದೆ. ಜತೆಗೆ ಸೋಂಕಿತರನ್ನು ನೋಡುವ ರೀತಿಯೂ ಬದಲಾಗಿದೆ. ಜತೆಗೆ ಸೋಂಕಿತರು ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ಸೆಂಟರ್ ಗಳಲ್ಲಿ ಆತ್ಮವಿಶ‍್ವಾಸ ತುಂಬುವ, ಸಂತಸ ಪಡುವ ತಾಣಗಳನ್ನಾಗಿ ಮಾರ್ಪಡಿಸುವ ಕಾರ್ಯ ನಡೆಯುತ್ತಿರುವುದು ಖುಷಿಯ ವಿಚಾರವಾಗಿದೆ.

ಈಗಾಗಲೇ ಹಲವು ಕೋವಿಡ್ ಸೆಂಟರ್ ಗಳಲ್ಲಿ ಸೋಂಕಿತರಿಗೆ ಉತ್ಸಾಹ ತುಂಬಿ ಅವರಲ್ಲಿನ ನೋವುಗಳನ್ನು ಹೋಗಲಾಡಿಸಿ ಉತ್ಸಾಹ ತುಂಬುವ ಕೆಲಸಗಳನ್ನು ಮಾಡಲಾಗುತ್ತಿದೆ. ಅದರಂತೆ ಹುಣಸೂರು ತಾಲೂಕಿನ ನಲ್ಲೂರು ಪಾಲದ ಕೋವಿಡ್ ಕೇರ್ ಸೆಂಟರ್‌ ನಲ್ಲಿ ಸೋಂಕಿತ ದಂಪತಿಗಳ ಹಾಡು.. ಯುವಕರ ಕುಣಿತ..  ವೃದ್ಧನ ಸಂಭ್ರಮ ಎಲ್ಲವೂ ಗಮನಸೆಳೆದಿದೆ. ಜತೆಗೆ ಸೋಂಕಿತರಲ್ಲಿನ ನೋವು ಮರೆಸಿ ಉತ್ಸಾಹ ತುಂಬಿದೆ.

ಕೋವಿಡ್ ಸೆಂಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹುಣಸೂರು ತಾಲೂಕಿನ ಶೆಟ್ಟಹಳ್ಳಿ ಗಿರಿಜನ ಪುನರ್ವಸತಿ ಕೇಂದ್ರದ ಆಶ್ರಮ ಶಾಲೆಯ ಶಿಕ್ಷಕ ಯಶೋಧರಪುರದ ಲೋಕೇಶ್ ಹಾಗೂ ಅವರ ಪತ್ನಿ ದೀಪಾ ಹಾಡುಗಾರರಾಗಿದ್ದು. ಕೋವಿಡ್ ಸೆಂಟರ್ ಆವರಣದಲ್ಲಿ ಕಾಫಿಗೆಂದು ಎಲ್ಲರೂ ಸೇರಿದ ವೇಳೆ ಅವರು ಸುಮಧುರವಾಗಿ ಹಾಡುವ ಮೂಲಕ ದಂಪತಿ ತಮ್ಮೊಳಗಿದ್ದ ಪ್ರತಿಭೆಯನ್ನು ಹೊರ ಹಾಕಿದರೆ, ಮಧುರ ಹಾಡಿಗೆ ಇತರೆ ಸೋಂಕಿತರು ತಲೆದೂಗಿದ್ದಲ್ಲದೆ, ಹೆಜ್ಜೆಯನ್ನು ಹಾಕಿದ್ದಾರೆ. ಆಕಸ್ಮಿಕ, ವಿಲನ್ ಚಿತ್ರದ ಹಾಡುಗಳು ಹಾಗೂ ಕುಲದಲ್ಲಿ ಮೇಲ್ಯಾವುದೋ ಹುಚ್ಚಪ್ಪ ಹಾಡು ಸೇರಿದಂತೆ ಅನೇಕ ಹಾಡುಗಳನ್ನು ಲೋಕೇಶ್  ಹಾಡಿದರೆ, ಪತ್ನಿ ದೀಪ ರಂಭೆ ವೈಯಾರದ ಗೊಂಬೆ ಸೇರಿದಂತೆ ಹಲವು ಹಾಡುಗಳನ್ನು ಹಾಡಿ ರಂಜಿಸಿದರು.

ಇನ್ನೊಂದೆಡೆ ಕೋವಿಡ್ ಸೆಂಟರ್‌ನಲ್ಲಿದ್ದ ಹಿರಿಕ್ಯಾತನಹಳ್ಳಿಯ ವೃದ್ದ ಜವರೇಗೌಡ(ಗೆಡ್ಡಣ್ಣ) ಅವರು ರಾತ್ರಿ ವೇಳೆ ಕೊಠಡಿಯಲ್ಲಿ ಕೊರೊನಾ ಕುರಿತು ತಮ್ಮದೇ ಶೈಲಿಯಲ್ಲಿ ಹಾಡಿ ಎಲ್ಲರನ್ನು ರಂಜಿಸಿಸುತ್ತಿದ್ದಾರೆ. ಅಲ್ಲದೆ ಮಕ್ಕಳು ಉಯ್ಯಾಲೆ ಸೇರಿದಂತೆ ಆಟಗಳನ್ನು ಆಡುತ್ತಾ ಕಾಲ ಕಳೆಯುತ್ತಿದ್ದಾರೆ. ಮೊದಲೆಲ್ಲ ತಹಸೀಲ್ದಾರ್ ಬಸವರಾಜು, ಇಓ ಗಿರೀಶ್ ನೇತೃತ್ವದಲ್ಲಿ ಆರ್ಕೆಸ್ಟ್ರಾ ಶ್ರೀನಿವಾಸ್ ತಂಡವು ಎಲ್ಲ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಆಗ್ಗಿಂದಾಗ್ಗೆ ರಸಮಂಜರಿ ಏರ್ಪಡಿಸಿ ಅಧಿಕಾರಿಗಳು ಹಾಡಿ ಸೋಂಕಿತರಲ್ಲಿ ಆತ್ಮಸ್ಥೈರ್ಯ ತುಂಬಿದ್ದರು. ಆದರೆ ಇದೀಗ ಸೋಂಕಿತರೇ ಸಾಂಸ್ಕೃತಿಕ ಕಾರ್ಯಕ್ರಮ ನೀಡಿ, ಎಲ್ಲರಲ್ಲೂ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುತ್ತಿರುವುದಲ್ಲದೆ, ತಮ್ಮಲ್ಲಿದ್ದ ಬೇಸರವನ್ನು ತಾವೇ ಕಳೆದುಕೊಳ್ಳುತ್ತಿದ್ದಾರೆ.  ಸದ್ಯ ಈ ಕೋವಿಡ್ ಸೆಂಟರ್‌ನಲ್ಲಿ 38 ಮಹಿಳೆಯರು, ಇಬ್ಬರು ಮಕ್ಕಳು ಸೇರಿದಂತೆ 28 ಪುರುಷರು ಸೇರಿದಂತೆ 68 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

By admin