ಚಾಮರಾಜನಗರ:ಚಾಮರಾಜನಗರ ಜಿಲ್ಲೆಯಲ್ಲೂ ಆರಂಭವಾಗುತ್ತಿರುವ ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಕಾರ್ಯಕ್ರಮಗಳಲ್ಲಿ ಒಂದಾದ ನಮ್ಮ ಕ್ಲಿನಿಕ್‌ಗಳಿಗೆ ಮುಖ್ಯಮಂತ್ರಿಯವರಾದ ಬಸವರಾಜ ಬೊಮ್ಮಾಯಿ ಅವರು ಹುಬ್ಬಳ್ಳಿಯಿಂದ ವರ್ಚುವಲ್ ಮೂಲಕ ಇಂದು ಚಾಲನೆ ನೀಡಿದರು.
ರಾಜ್ಯದ ವಿವಿಧ ಜಿಲ್ಲೆಗಳ ೧೧೪ ನಮ್ಮ ಕ್ಲಿನಿಕ್‌ಗಳಿಗೆ ಮುಖ್ಯಮಂತ್ರಿಯವರು ಹುಬ್ಬಳ್ಳಿಯಿಂದ ವರ್ಚುವಲ್ ಮೂಲಕ ಚಾಲನೆ ನೀಡಿದರು. ಚಾಮರಾಜನಗರದ ಕರಿನಂಜನಪುರದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಬಡಾವಣೆ ಸೇರಿದಂತೆ ಜಿಲ್ಲೆಯ ಒಟ್ಟು ಮೂರು ಕಡೆ ನಮ್ಮ ಕ್ಲಿನಿಕ್‌ಗಳು ಆರಂಭವಾಗುತ್ತಿದೆ. ಇದರ ಉದ್ಘಾಟನೆ ನಗರದ ಕರಿನಂಜನಪುರದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಬಡಾವಣೆಯ ನಮ್ಮ ಕ್ಲಿನಿಕ್ ನಲ್ಲಿ ಏರ್ಪಾಡಾಗಿತ್ತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಸ್ಥಳೀಯವಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಹುಬ್ಬಳ್ಳಿಯಿಂದ ಕಾರ್ಯಕ್ರಮ ಉದ್ಘಾಟಿಸಿದ ಬಳಿಕ ಮುಖ್ಯಮಂತ್ರಿಯವರಾದ ಬಸವರಾಜ ಬೊಮ್ಮಾಯಿ ಅವರು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರೊಂದಿಗೆ ಸಂವಾದ ನಡೆಸಿ ಚಾಮರಾಜನಗರ ಜಿಲ್ಲೆಯಲ್ಲಿ ಎಲ್ಲೆಲ್ಲಿ ನಮ್ಮ ಕ್ಲಿನಿಕ್‌ಗಳು ಪ್ರಾರಂಭವಾಗುತ್ತಿದೆ. ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆಯೆ ಎಂದು ಪ್ರಶ್ನಿಸಿದರು. ಇದಕ್ಕೆ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಉತ್ತರಿಸಿ, ಚಾಮರಾಜನಗರದ ಕರಿನಂಜನಪುರ ಬಡಾವಣೆ ಹಾಗೂ ಗುಂಡ್ಲುಪೇಟೆಯಲ್ಲಿ ನಮ್ಮ ಕ್ಲಿನಿಕ್ ಪ್ರಾರಂಭಿಸಲಾಗಿದೆ. ಕೊಳ್ಳೇಗಾಲದಲ್ಲಿ ಕಟ್ಟದ ಸಿದ್ದವಿದ್ದು ಇನ್ನೆರಡು ದಿನಗಳಲ್ಲಿ ಕಾರ್ಯಾರಂಭವಾಗಲಿದೆ. ನಮ್ಮ ಕ್ಲಿನಿಕ್‌ಗೆ ಬೇಕಾದ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ನಮ್ಮ ಕ್ಲಿನಿಕ್‌ನಲ್ಲಿ ವೈದ್ಯರು, ಲ್ಯಾಬ್ ಟೆಕ್ನಿಷಿಯನ್, ನಸಿಂಗ್ ಸಿಬ್ಬಂದಿ ಇದ್ದಾರೆ. ಔ?ಧ ವಿತರಣೆಗೂ ವ್ಯವಸ್ಥೆ ಮಾಡಲಾಗಿದೆ. ನಮ್ಮ ಕ್ಲಿನಿಕ್ ಸಂಬಂಧ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಮಾಡಿಕೊಂಡಿದ್ದೇವೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಬಳಿಕ ಮುಖ್ಯಮಂತ್ರಿಗಳು ಸ್ಥಳೀಯ ನಿವಾಸಿ ಸುಧಾ ಅವರೊಂದಿಗೆ ಮಾತನಾಡಿದರು. ನೀವು ಕ್ಲಿನಿಕ್ ಹತ್ತಿರ ಇದ್ದೀರಾ? ಯಾವ ಬಡಾವಣೆ ನಿಮ್ಮದು? ಈ ಮೊದಲು ಈ ರೀತಿಯ ಕ್ಲಿನಿಕ್ ನಿಮ್ಮ ಬಡಾವಣೆಯಲ್ಲಿ ಇತ್ತೆ? ಕ್ಲಿನಿಕ್ ಬಂದಿರುವುದರಿಂದ ಅನುಕೂಲ ಆಗಲಿದೆಯಾ ಎಂದು ಮುಖ್ಯಮಂತ್ರಿಯವರಾದ ಬಸವರಾಜ ಬೊಮ್ಮಾಯಿ ಅವರು ಪ್ರಶ್ನಿಸಿದರು. ಇದಕ್ಕೆ ಸುಧಾ ಅವರು ಆಸ್ಪತ್ರೆಗಾಗಿ ನಾವು ಪಟ್ಟಣಕ್ಕೆ ಹೋಗಬೇಕಿತ್ತು. ಈಗ ನಮ್ಮ ಬಡಾವಣೆಯಲ್ಲಿಯೇ ಕ್ಲಿನಿಕ್ ಮಾಡಿರುವುದರಿಂದ ತುಂಬಾ ಅನುಕೂಲವಾಗಿದೆ. ಇದಕ್ಕಾಗಿ ತಮಗೆ ಕೃತಜ್ಞತೆಗಳು ಎಂದರು.
ಸಣ್ಣ ಪುಟ್ಟ ಜ್ವರವಿರಲಿ, ಇನ್ನಿತರ ಯಾವುದೇ ಆರೋಗ್ಯ ಸಮಸ್ಯೆಗಳಿದ್ದರೆ ಕ್ಲಿನಿಕ್‌ನಲ್ಲಿ ಉಚಿತವಾಗಿ ಚಿಕಿತ್ಸೆ, ಔಷಧ ನೀಡಲಾಗುತ್ತದೆ. ಟೆಸ್ಟ್ ಲ್ಯಾಬ್ ಸೌಲಭ್ಯವು ಇರುತ್ತದೆ. ಈ ಎಲ್ಲಾ ಸೌಲಭ್ಯವನ್ನು ಸದುಪಯೋಗ ಮಾಡಿಕೊಳ್ಳಿ ಬೇರೆಯವರಿಗೂ ನಮ್ಮ ಕ್ಲಿನಿಕ್ ಬಗ್ಗೆ ತಿಳಿಸಿಕೊಡಿ ಎಂದು ಮುಖ್ಯಮಂತ್ರಿಯವರು ಸಲಹೆ ಮಾಡಿದರು.
ಸ್ಥಳೀಯವಾಗಿ ನಡೆದ ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷೆ ಆಶಾ ನಟರಾಜು ಅವರು ನಮ್ಮ ಕ್ಲಿನಿಕ್ ಉದ್ಘಾಟಿಸಿದರು. ಸದಸ್ಯರಾದ ಮನೋಜ್ ಪಟೇಲ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಂ. ವಿಶ್ವೇಶ್ವರಯ್ಯ, ತಾಲೂಕು ವೈದ್ಯಾಧಿಕಾರಿ ಡಾ. ಶ್ರೀನಿವಾಸ್, ವೈದ್ಯಾಧಿಕಾರಿ ಡಾ. ಮಮತಾ ಸೇರಿದಂತೆ ಇತರರು ಇದ್ದರು.