ಮೈಸೂರು: ಲಾಕ್ ಡೌನ್ ವೇಳೆಯಲ್ಲಿಯೇ ಸೀಮೆ ಹಸುಗಳ ಗಂಡು ಕರುಗಳನ್ನು ಕಡಿಮೆ ಬೆಲೆಗೆ ಖರೀದಿಸಿ ಕಸಾಯಿಖಾನೆಗಳಿಗೆ ಸಾಗಿಸುವ ಜಾಲ ಸಕ್ರಿಯಗೊಂಡಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.

ಇದಕ್ಕೆ ಸಾಕ್ಷಿ ಎಂಬಂತೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕಟ್ಟೇರಿ ಗ್ರಾಮದ ಬಳಿ ಗೂಡ್ಸ್ ಆಟೋದಲ್ಲಿ ಸಾಗಿಸುತ್ತಿದ್ದ ಸುಮಾರು 13 ಕರುಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಲಾಕ್ ಡೌನ್ ವೇಳೆಯಲ್ಲಿ ಕುರಿ ಮೇಕೆ ಮಾಂಸಗಳಿಗೆ ಎಲ್ಲಿಲ್ಲದ ಬೇಡಿಕೆ ಬಂದಿದ್ದು ಹೀಗಾಗಿ ಕುರಿ ಮಾಂಸದ ಜತೆಯಲ್ಲಿ ಕರುಗಳ ಮಾಂಸಗಳನ್ನು ಬೆರೆಸಿ ಮಾರಾಟ ಮಾಡುವ ದಂಧೆಯೂ ನಡೆಯುತ್ತಿದೆ ಎಂಬ ಆರೋಪವಿದೆ. ಕಳೆದ ವರ್ಷ ಏಪ್ರಿಲ್ ನಲ್ಲಿ ಲಾಕ್ ಡೌನ್ ವೇಳೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯ ಹೊಸಹೊಳಲು ಗ್ರಾಮದಲ್ಲಿ ಸೀಮೆ ಹಸುವಿನ ಕರುಗಳನ್ನು ತಂದು ಅವುಗಳನ್ನು ಕೊಂದು ಮಾಂಸ ಮಾಡಿ ಕುರಿ ಮಾಂಸದೊಂದಿಗೆ ಬೆರೆಸಿ ಮಾರಾಟ ಮಾಡುತ್ತಿದ್ದದ್ದು ಬೆಳಕಿಗೆ ಬಂದಿತ್ತು. ಇದೀಗ ಗೂಡ್ಸ್ ವಾಹನಗಳಲ್ಲಿ  ಕರುಗಳನ್ನು ಸಾಗಿಸುತ್ತಿರುವುದು ಕೂಡ ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶಕ್ಕೆ ಎಂಬುದು  ದೃಢವಾಗಿದೆ.

ಸದ್ಯ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಿದ್ದರೂ ಗೂಡ್ಸ್ ಆಟೋದಲ್ಲಿ ಕಸಾಯಿಖಾನೆಗೆ ಸಾಗಿಸುತ್ತಿದ್ದಸೀಮೆ ಹಸುವಿನ 13 ಕರುಗಳನ್ನು ಕೆ.ಆರ್.ಎಸ್ ಪೊಲೀಸರು ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ. ಜತೆಗೆ ಆರೋಪಿ ಮೈಸೂರು ನಗರದ ಮೇಟಗಳ್ಳಿ ನಿವಾಸಿ ಪಾಷ ಅವರ ಪುತ್ರ ಅಸ್ಲಂ (36) ಎಂಬಾತನನ್ನು ಬಂಧಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಸೀಮೆ ಹಸುವಿನ ಗಂಡು ಕರುಗಳನ್ನು ಸಾಕಲು ರೈತರಾಗಲೀ, ಹೈನುಗಾರಿಕೆ ನಡೆಸುವವರಾಗಲೀ ಮುಂದೆ ಬರುವುದಿಲ್ಲ. ಹೀಗಾಗಿ ಅವುಗಳನ್ನು ಕಡಿಮೆ ಹಣಕ್ಕೆ ಮಾರಾಟ ಮಾಡಿಬಿಡುತ್ತಾರೆ. ಅಂತಹ ಕರುಗಳನ್ನು ಖರೀದಿಸಿ ತಂದು ಕೆಲವರು ಕುರಿ, ಮೇಕೆ ಮಾಂಸದ ಜತೆ ಬೆರೆಸಿ ಮಾರಾಟ ಮಾಡುವ ದಂಧೆ ನಡೆಸುತ್ತಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಇಂತಹ ಮೋಸದ ವ್ಯಾಪಾರಗಳು ಸ್ವಲ್ಪ ಜೋರಾಗಿಯೇ ನಡೆಯುತ್ತಿದ್ದು, ಜನ ಮಾಂಸ ಸಿಕ್ಕಿದರೆ ಸಾಕು ಎಂದು ಕಾಯುತ್ತಿರುತ್ತಾರೆ. ಅದನ್ನೇ ಬಂಡವಾಳವಾಗಿಸಿಕೊಂಡು ಕೆಲವರು ಕರುಗಳ ಮಾಂಸವನ್ನು ಬೆರೆಸಿ ಮಾರಾಟ ಮಾಡಿ ಜೇಬು ತುಂಬಿಸಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ. ಇದೀಗ ಜಿಲ್ಲೆಯ ಪಾಂಡವಪುರ ತಾಲೂಕಿನ ಕಟ್ಟೇರಿ ಗ್ರಾಮದ ಬಳಿ ಗೂಡ್ಸ್ ಆಟೋದಲ್ಲಿದ್ದ ಕರುಗಳನ್ನು ಪಾಂಡವಪುರ ತಾಲೂಕಿನ ಡಿಂಕಾ, ಬನ್ನಂಗಾಡಿ ಹಾಗೂ ಕಟ್ಟೇರಿ ಗ್ರಾಮಗಳಿಂದ ತಂದಿದ್ದಾಗಿ ಹೇಳಲಾಗುತ್ತಿದೆ.

ಇಂತಹ ದಂಧೆಗಳು ಬಹಳಷ್ಟು ಕಡೆಗಳಲ್ಲಿ ಬೇರು ಬಿಟ್ಟಿದ್ದು, ಮಾಂಸ ಹಾರಿಗಳೇ ಎಚ್ಚರ ನೀವು ಖರೀದಿಸಿದ ಮಾಂಸ ನಿಜವಾಗಿಯೂ ಕುರಿ ಅಥವಾ ಮೇಕೆಯದೇ ಎಂಬುದನ್ನು ಖಾತರಿ ಮಾಡಿ ಕೊಳ್ಳುವುದನ್ನು ಮರೆಯದಿರಿ.

By admin