12ನೇ ಶತಮಾನ ವೈಚಾರಿಕ ಚಿಂತನೆಯ ಸಂಮೃದ್ಧಿಯ ಯುಗ. ಈ ಚಿಂತನಾ ಲೋಕದ ಸೂರ್ಯ ಜಗಜ್ಯೋತಿ ಬಸವಣ್ಣ. ಅಂದು ಅವರು ಮಾಡಿದ ಧಾರ್ಮಿಕ ಸಾಮಾಜಿಕ ಆಧ್ಯಾತ್ಮಿಕ ಚಿಂತನೆಗಳು ಅಂದಿನ ಕಾಲಘಟ್ಟವನ್ನೂ ಮೀರಿ ಸಾರ್ವಕಾಲಿಕ ಸತ್ಯದ ಸ್ವರೂಪವನ್ನು ಪಡೆದುಕೊಂಡವು.

ನಿಷ್ಕಲ್ಮಶವಾದ ವಿಚಾರಗಳಿಗೆ ಕಾಲಮಿತಿಯಿರುವದಿಲ್ಲ. ಅವು ಗಣಿತಶಾಸ್ತ್ರ ಅಂಕಿ ಸಂಕೆಗಳಷ್ಟೇ ಸತ್ಯವಾದವುಗಳು. ಅಂತೆಯೇ ಬಸವಣ್ಣನವರು ಅಂದಿನ ಕಾಲದಲ್ಲಿ  ಪ್ರತಿಪಾದಿಸಿದ ಜೀವನ ಮೌಲ್ಯಗಳು ತ್ರಿಕಾಲ ಆಭಾದಿತವಾದವುಗಳು. ಕಾಲ್ಪನಿಕ ಸಂಗತಿಗಳಿಗೆ ಮೊರೆ ಹೋಗದೇ ವಸ್ತು ನಿಷ್ಠವಾದ ಸತ್ಯ ವಿಚಾರಗಳನ್ನು ಯಾವ ಆಮಿಷಕ್ಕೂ ಒಳಗಾಗದೇ ಅಭಿವ್ಯಕ್ತಿಸಿದರು. ಮಾತ್ರವಲ್ಲದೇ ತಮ್ಮಂತೆ ವೈಚಾರಿಕ ಮನಸ್ಸಿನ ಅನೇಕ ಶರಣರಿಗೂ ಮುಕ್ತವಾದ ಅಭಿವ್ಯಕ್ತಿಸುವ ವಾತಾವರಣ ನಿರ್ಮಿಸಿದರು. ಅದುವೆ ಅನುಭವ ಮಂಟಪವಾಯಿತು. ಆರೋಗ್ಯ ಪೂರ್ಣ ಚಿಂತನೆಗಳಿಗೆ ಅದು ವೇದಿಕೆಯಾಯಿತು. ಅದರ ಫಲಶ್ರುತಿಯೇ ಇಂದು ಜಗವ ಬೆಳಗುವ ವಚನ ವಾರಿಧಿ ನಿರ್ಮಾಣವಾಯಿತು.

ಇಲ್ಲಿ ಕಾಲ್ಪನಿಕವಾದ ಯಾವದೆ ಸಂಗತಿಗಳಿಗೆ ಅವಕಾಶ ವಿಲ್ಲದೇ ವಾಸ್ತವದ ನೆಲೆಗಟ್ಟಿನಲ್ಲಿ ಚಿಂತಗಳು ಮೂಡಿದವು ಅಸಹಾಯಕರಾಗಿದ್ದ ವಿವಿಧ ಸಮುದಾಯದ ವಿಚಾರವಂತ ಶರಣರು ತಮ್ಮ ಅಂತರಂಗದ ಅನುಭವವನ್ನು ಮುಕ್ತವಾಗಿ ಅಭಿವ್ಯಕ್ತಿಸಿದ ಪರಿಣಾಮವಾಗಿ, ಅಲ್ಲಿನ ವಿಚಾರಮಥನದಿಂದ ಜಗತ್ತಿನ ಕಣ್ಣು ತೆರೆಸುವ ವಚನ ಸಂಪದ ಉದಯವಾಯಿತು. ಇಂದಿಗೂ ಅದು ಜಾಗತಿಕ ಮಟ್ಟದಲ್ಲಿ ಕನ್ನಡಿಗರ ಅಭಿಮಾನ ಹೆಚ್ಚಿಸುವ ಸಾಹಿತ್ಯ ವಾರಿಧಿಯಾಗಿದೆ. ಪುರಾಣೋಕ್ತವಾದ ಕಥೆ ಕಲ್ಪನೆಗಳೇ ಜನರ ಮನಸ್ಸನ್ನು ಆಳುವ ಕಾಲವದು. ಭಯಮೂಡಿಸಿ ಸತ್ಯವನ್ನು ಮರೆಮಾಚುವುದು ನಮ್ಮ ಸಂಸ್ಕೃತಿಯಲ್ಲ. ಬದಲಿಗೆ ವಾಸ್ತವಿಕತೆ ಮನದಟ್ಟಾಗಬೇಕು. ಅಂತೆಯೇ ಬಸವಣ್ಣನವರು ಮಾಡಿದ ಬಹುಮುಖ್ಯ ಸಾಧನೆ ಸತ್ಯದ ಅನಾವರಣ. ಸ್ವರ್ಗ ಎಂಬುದು ಒಂದು ಸಂಮೃದ್ಧ ,ಮುಕ್ತ, ಸಂತೃಪ್ತ ಸ್ತಿತಿ.  ಅದನ್ನು ವಾಸ್ತವಿಕವಾಗಿ ಕಾಣದ ಪರಿಸ್ತಿತಿಯಲ್ಲಿ ನಮ್ಮ ಪುರಾಣಗಳು ದೇವತೆಗಳ ಪಾತ್ರ ಸೃಷ್ಟಿಸಿ ಸ್ವರ್ಗ ಅದೊಂದು ದೇವತೆಗಳು ವಾಸಿಸುವ ಸ್ಥಾನ, ನರಕ ಪಾಪಿಗಳು ನೆಲಸಿದ ಲೋಕ ಎಂಬುದಾಗಿ ಹೇಳಿದವು. ಇದರ ಹಿಂದೆ ಪಾಪಕಾರ್ಯಗಳ ಬಗ್ಗೆ ಭಯ ಮೂಡೀಸುವ ಉದ್ದೇಶವೂ ಇರಬಹುದು. ಆದರೆ ಹಚ್ಚಿಕೊಂಡ ಬಣ್ಣ ಬಹಳ ಕಾಲ ನಿಲ್ಲುವದಿಲ್ಲ. ಅದರಂತೆ ಕಲ್ಪನೆಯಲ್ಲಿ ಕಟ್ಟಿದ ಕಥೆಯೂ ಹೆಚ್ಚುಕಾಲ ಉಳಿಯುವದಿಲ್ಲ. ಇದು ಕಲ್ಪನೆಯಂಬುದು ತಿಳಿದಾಗ ಪಾಪದಬಗೆಗೆ ಇರುವ ಭೀತಿ ದೂರವಾಗುತ್ತದೆ. ಅಂತೆಯೇ ಬಸವಣ್ಣನವರು ಭಯದ ನೆರಳಲ್ಲಿ ಸತ್ಯವನ್ನು ಪ್ರತಿಪಾದಿಸದೇ ಅರಿವಿನ ಮೊಲಕ ಅಗ್ನಾನವನ್ನು ನಿವಾರಿಸುವ ಪ್ರಯತ್ನ ಮಾಡಿದರು.

ಸ್ವರ್ಗ ಒಂದು ಸಂಮೃದ್ಧ ಸ್ತಿತಿಯಂದು ಭಾವಿಸುವದಾದರೆ ಅದನ್ನು ನಾವಿರುವ ಪರಿಸರ ದಲ್ಲಿಯೇ ಕಾಣಬೇಕೆ ಹೊರತು ಬೇರೆಡೆಯಲ್ಲ. ನಮಗಿಲ್ಲದ ಸ್ವರ್ಗ ಹೇಗಿದ್ದರೇನು. ಸ್ವರ್ಗ ಕಾಲ್ಪನಿಕವಾದ ದೇವತೆಗಳ ತಾಣವಾಗಬಾರದು. ಬದಲಿಗೆ ಹೃದಯವಂತ ಮಾನವರಿಂದ ಕೂಡಿದ ಸಮೂಹವಾಗಬೇಕು.  ಮನುಷ್ಯ ಮನುಷ್ಯರು ಪವಿತ್ರ ಬಾಂಧವ್ಯದಿಂದ ಬಾಳಿ ಬದುಕಿದರೆ ಅದೇ ಸ್ವರ್ಗ. ವ್ಯಕ್ತಿ ವ್ಯಕ್ತಿಗಳ ಮದ್ದೆ ಅಂತರ ಸೃಷ್ಟಿಸಿ ಭೇದ ಭಾವಗಳಿಂದ ಕೂಡೀದ್ದರೆ ಅದೇ ನರಕ. ಬಸವಣ್ಣನವರ ಸ್ವರ್ಗದ ಪರಿಕಲ್ಪನೆಯೇ ಬಹಳ ವಿಶಿಷ್ಠವಾದುದು.

ಮರ್ತ್ಯ ಲೋಕವೆಂಬುದು ಕರ್ತಾರನ ಕಮ್ಮಟವಯ್ಯ. 

ಇಲ್ಲಿಸಲ್ಲುವವರು ಅಲ್ಲಿಯೂ ಸಲ್ಲುವರು. 

ಇಲ್ಲಿ ಸಲ್ಲದವರು ಆಲ್ಲಿಯೂ ಸಲ್ಲರು.

ಕೂಡಲಸಂಗಮದೇವಾ. 

ಎಂಬ ಅವರ ವಚನ ನಾವಿರುವ ಭೂಮಿ ಒಂದು ಸಾಧನೀಕರಣದ ವೇದಿಕೆ. ಇಲ್ಲಿ ವ್ಯಕ್ತಿ ಪರಿಶುದ್ಧ ಸಚ್ಚಾರಿತ್ರ್ಯದಿಂದ ಬಾಳಿ ಬದುಕಬೇಕು. ಜೀವನ ಮೌಲ್ಯಗಳನ್ನು ಅನುಸರಿಸಿ ಸಾರ್ಥಕ ಜೀವನವನ್ನು ನಡೆಸಿದರೆ ನಾವಿರುವ ತಾಣವೇ ಸ್ವರ್ಗ. ಸ್ವರ್ಗವನ್ನು ಹುಡೀಕಿಕೊಂಡು ಹೋಗುವುದಲ್ಲ. ಬದಲಿಗೆ ನಮ್ಮ ಸುಂರರ ಬದುಕನ್ನು ನಿರ್ಮಿಸಿಕೊಳ್ಳುವ  ಮೂಲಕ ಕಂಡುಕೊಳ್ಳುವುದು. ಭ್ರಮಾತ್ಮಕವಾದ ಸ್ವರ್ಗವನ್ನು ನಿರಾಕರಿಸಿ,  ವಾಸ್ತವದ ನೆಲೆಗಟ್ಟಿನಲ್ಲಿ ಜೀವನವನ್ನು ರೂಪಿಸಿಕೊಳ್ಳುವುದೇ ನಮ್ಮ ಬದುಕಿನ ಗುರಿಯಾಗಬೇಕು. ಮಾನವ ಜನ್ಮ ಅಂತಹ ಸ್ವಚ್ಛ ಶುದ್ದ ಬದುಕನ್ನು ಕಂಡುಕೊಳ್ಳಲು ದೇವರು ದಯಪಾಲಿಸಿದ  ಬದುಕು. ಆದರ್ಶಗಳ ಪರಿಪಾಲನೆಯಿಂದ ಅನ್ಯರಿಗೆ ಅಸಹ್ಯ ಪಡದೇ ಸರ್ವರ ಹಿತಕಾಯುವ, ತನ್ನಂತೆ ಪರರು ಎಂದು ಭಾವಿಸಿ ಬಾಳಿದಲ್ಲಿ ಈ ಭೂಮಿಯೇ ಸ್ವರ್ಗ. ಅವರ ಬಹಳಷ್ಟು ವಚನಗಳಲ್ಲಿ ಇಂತಹ ಸಹೃದಯತೆಯ ಭಾವ ವ್ಯಕ್ತವಾಗಿದೆ. ‘ ಅಯ್ಯಾ ಎಂದರೆ ಸ್ವರ್ಗ, ಎಲವೋ ಎಂದರೆ ನರಕ ’  ಆಚಾರವೇ ಸ್ವರ್ಗ, ಅನಾಚಾರವೇ ನರಕ ’ ಇಂತಹ ವಚನಗಳ ಉಕ್ತಿಯಲ್ಲಿ ಭ್ರಮಾತ್ಮಕವಾದ ಸ್ವರ್ಗ ನರಕಗಳನ್ನು ನಿರಾಕರಿಸಿ ಸತ್ಯದ ಬಾಳನ್ನು ಅನಾವರಣ ಗೊಳಿಸಿರುವದನ್ನು ಕಾಣುತ್ತೇವೆ. ತನ್ಮೂಲಕವಾಗಿ ಬಸವಣ್ಣನವರು ವಾಸ್ತವಿಕತೆಯ ಆಧಾರದದಲ್ಲಿ ಜೀವನದ ಮೌಲ್ಯವನ್ನು ಮನದಟ್ಟು ಮಾಡಿಕೊಟ್ಟಿದ್ದಾರೆ.

ಸತ್ಯ ಶುದ್ಧ ಕಾಯಕ, ಸರಳವಾದ  ಢಾಂಬಿಕವಲ್ಲದ ಆಚಾರ ವಿಚಾರ, ಪರಿಶುದ್ಧ ನಡೆ_ನುಡಿಗಳು ಮನೆ ಮನಗಳಲ್ಲಿ ನೆಲೆಗೊಳ್ಳಬೇಕು. ನಮ್ಮ ಅಂತರಂಗ ಬಹಿರಂಗಗಳು ಶುದ್ಧವಾಗಿ ಜಾತಿ ಮತ ಭೇದ ಭಾವಗಳು ದೂರವಾಗಿ, ಸುಂದರ ಸಮಾಜ ನಿರ್ಮಾಣವಾದಲ್ಲಿ, ಅದುವೇ ಸ್ವರ್ಗ. ಬಸವಣ್ಣನವರು ತಮ್ಮ ಎಲ್ಲಾ ಧ್ಯೇಯೋದ್ದೇಶಗಳನ್ನು ಕೇವಲ ಬೋಧನೆಯ ರೂಪದಲ್ಲಿ ಹೂಮಿಸದೇ ಸ್ವತಹ ತಮ್ಮ ಬದುಕಿನಲ್ಲಿ ನಡೆದು ತೋರಿದರು. ಅವರ ಕಾಲದಲ್ಲಿ ಅಂದು ಶೋಷಿತರಾಗಿ ಸಮಾಜದ ನಿಮ್ನ ವರ್ಗದವರಿಂದ ತುಳಿತಕ್ಕೊಳಗಾಗಿ ನಲುಗಿಹೋಗಿದ್ದ ಅನೇಕ ವಿವಿಧ ಸಮುದಾಯದ ಶರಣರನ್ನು ಸಂಘಟಿಸಿ, ಅವರಲ್ಲಿದ್ದ ಕೀಳರಿಮೆಯನ್ನು ಹೋಗಲಾಡಿಸಿ ಸಮಾಜದ ಮುಖ್ಯವಾಹಿನಿಗೆ ತಂದವರು ಬಸವಣ್ಣನವರು.  ಅರಿವಿಂಗೆ ಹಿರಿದು ಕಿರಿದೆಂಬ ಭೇದ ಭಾವವಿಲ್ಲ. ವಿದ್ಯೆ ದೈವ ದತ್ತವಾಗಿ ಸರ್ವರಲ್ಲಿ ಸಮಾನವಾಗಿರುತ್ತದೆ. ಎಲ್ಲರಿಗೂ ಮುಕ್ತವಾದ ಅಭಿವ್ಯಕ್ತಿ ಸ್ವಾತತಂತ್ರವನ್ನು ನೀಡಿದರೆ, ಜಗದ ಕಣ್ಣು ಶಕ್ತಿ  ಅವರ ಅಂತರಂಗದಲ್ಲಿದೆ ಎಂಬುದು ಸರ್ವರಿಗೂ ಮನದಟ್ಟಗುವುದು. ಇಡೀ ವ್ಯವಸ್ಥೆಯ ವಿರೋಧವನ್ನು ಎದುರಿಸಿ, ಅವರ  ಅರಿವಿನ ಬೆಳಕನ್ನು ಜಗದೆಲ್ಲಡೆಗೆ ಬೆಳಗುವಂತೆ ಬಸವಣ್ಣನವರು ಮಾಡಿದರು. ಅಂತೆಯೇ ಅನುಭವ ಮಂಟಪ ಅದು ವಚನ ಮಂಟಪವೂ ಹೌದು.  ‘ಮಾತು ಮಾತು ಮಥಿಸಿ ಬಂದ ನಾದದ ನವ ನೀತ’ ಎಂಬಂತೆ ವೆಲ್ಲ ಶರಣರ ವಿಚಾರ ಮಂಥನ ದಿಂದ ಹೊಮ್ಮಿ ಬಂದುದೇ ವಚನ ಸಾಹಿತ್ಯ. ಬಸವಣ್ಣನವರು ಇಂತಹ ಕೆಲಸ ಮಾಡದೇ ಹೋಗಿದ್ದರೆ ಆ ಎಲ್ಲ ಶರಣರ ವಿಚಾರ ಧಾರೆ ಕಾನನದ ಬೆಳದಿಂಗಳಂತೆ ಕಣ್ಮರೆಯಾಗಿ ಹೋಗುತ್ತಿತ್ತು. ಬಸವಣ್ಣನವರು ಸ್ವರ್ಗವನ್ನು ಅರಸಿಕೊಂಡು ಹೋಗದೇ ತಮ್ಮ ವೈಚಾರಿಕ ಕ್ರಾಂತಿಯಿಂದ ತಾವಿರುವ ಭುವಿಯನ್ನೇ ಸ್ವರ್ಗವಾಗಿಸಿದರು.

ಅಂದಿನ ಬಸವಣ್ಣನವರ ತತ್ವ ಆದರ್ಶಗಳು ಸಾರ್ವ ಕಾಲಿಕ ಸತ್ಯವಾದವುಗಳು. ಅಕ್ಷಯ ತೃತಿಯಾ ದಿನದಂದು ಆಚರಿಸಲ್ಪಡುವ ಬಸವ ಜಯಂತಿಯು ಅರ್ಥಪೂರ್ಣ ಆಚರಣೆಯನಿಸ ಬೇಕಾದಲ್ಲಿ ಅವರೆಲ್ಲ ಆದರ್ಶಗಳನ್ನು ಆಚರಣೇಗೆ ತರುವ ಸಂಕಲ್ಪ ನಮ್ಮದಾಗಬೇಕು. ಆಗಲೇ ನಾವು ಆಚರಿಸುವ  ಬಸವ ಜಯಂತಿಯು ಸಾರ್ಥಕತೆಯನ್ನು ಪಡೆಯುವುದು.

– ಶ್ರೀಷ.ಬ್ರ. ಡಾ|| ಮಲಯ ಶಾಂತಮುನಿ ಶಿವಚಾರ್ಯ ಸ್ವಾಮಿಗಳು. 

ಮೇಲಣಗವಿ ವೀರಸಿಂಹಾಸನ ಸಂಸ್ಥಾನ ಮಠ. ಶಿವಗಂಗಾ ಕ್ಷೇತ್ರ.

ಮೊ.9620462790

 

By admin