ಕೃಷ್ಣರಾಜಪೇಟೆ: ದೇಗುಲದ ಬಾಗಿಲನ್ನು ಮುರಿದು ಹುಂಡಿಯನ್ನು ಒಡೆದು ಅದರಲ್ಲಿ ಸಂಗ್ರಹವಾಗಿದ್ದ ನಗದು, ಅಮ್ಮನವರಿಗೆ ಧರಿಸಿದ್ದ ಒಂದು ಚಿನ್ನದ ತಾಳಿಯನ್ನು ದೋಚಿ ಪರಾರಿಯಾಗಿರುವ ಘಟನೆ ತಾಲೂಕಿನ ಬೂಕನಕೆರೆ ಹೋಬಳಿ ಮೋದೂರು ಗ್ರಾಮದ ಹೊರ ವಲಯದಲ್ಲಿರುವ ಶ್ರೀರಾಮಲಿಂಗೇಶ್ವರ ದೇವಾಲಯದಲ್ಲಿ ನಡೆದಿದೆ.
ಕೋವಿಡ್‌ನ ಕಾರಣದಿಂದಾಗಿ ತಾಲೂಕಿನಾದ್ಯಂತ ಲಾಕ್‌ಡೌನ್ ಘೋಷಿಸಿದ್ದರಿಂದ ಭಕ್ತಾದಿಗಳಿಗೆ ಪೂಜೆ ಸಲ್ಲಿಸಲು ಅವಕಾಶವನ್ನು ನೀಡಲಾಗುತ್ತಿಲ್ಲ. ಆದ್ದರಿಂದ ಈ ಅವಕಾಶವನ್ನು ಉಪಯೋಗಿಸಿಕೊಂಡ ಕಳ್ಳರು ಈ ದುಷ್ಕೃತ್ಯವನ್ನು ಎಸಗಿದ್ದಾರೆ. ಎಂದಿನಂತೆ ದೇವರಿಗೆ ಪೂಜೆಯನ್ನು ಸಲ್ಲಿಸಲು ಅರ್ಚಕ ಪ್ರಕಾಶ್‌ಆರಾಧ್ಯ ಅವರು ದೇವಾಲಯದ ಬಳಿ ಬಂದಾಗ ಹುಂಡಿಯನ್ನು ದೇವಾಲಯದ ಆಚೆ ಬಿಸಾಡಿರುವುದನ್ನು ಕಂಡು ಗ್ರಾಮಸ್ಥರಿಗೆ ವಿಷಯವನ್ನು ಮುಟ್ಟಿಸಿದ್ದಾರೆ.
ತಕ್ಷಣವೇ ರಾಮಲಿಂಗೇಶ್ವರ ದೇವಾಲಯದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪಟೇಲ್ ಚಂದ್ರಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ಎಂ.ಆರ್.ರಮೇಶ್, ನಾಗರಾಜು ಮತ್ತು ಮಂಜು ಅವರು ಗ್ರಾಮಸ್ಥರೊಡನೆ ದೇವಾಲಯಕ್ಕೆ ಬಂದು ಪೊಲೀಸರಿಗೆ ವಿಷಯವನ್ನು ಮುಟ್ಟಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಗ್ರಾಮಾಂತರ ಠಾಣೆ ಪೊಲೀಸ್ ಇನ್ಸ್ ಪೆಕ್ಟರ್ ಕೆ.ಎಸ್.ನಿರಂಜನ, ಸಬ್ ಇನ್ಸ್ ಪೆಕ್ಟರ್ ಸಿ.ಎಸ್.ಸುರೇಶ್, ಎಂ.ಪ್ರಮೋದ್ ಸ್ಥಳಕ್ಕೆ ಆಗಮಿಸಿ ದೇವಾಲಯದ ಸುತ್ತಲೂ ಪರಿಶೀಲನೆ ನಡೆಸಿ ಗ್ರಾಮಸ್ಥರಿಂದ ದೂರನ್ನು ಪಡೆದು ಕಳ್ಳರ ಬಂಧನಕ್ಕೆ ಬಲೆ ಬೀಸಿದ್ದಾರೆ.