ಚಾಮರಾಜನಗರ: ಯುಜಿಸಿ ನಿಯಮಾವಳಿ ಅನ್ವಯ ಪೂರ್ಣಾವಧಿಯಲ್ಲಿ ಭೌತಿಕ ಶಿಕ್ಷಣ ಮತ್ತು ದೂರ ಶಿಕ್ಷಣವನ್ನು ಏಕಕಾಲದಲ್ಲೇ ಅಭ್ಯಸಿಸಲು ಅವಕಾಶವಿದ್ದು, ಭೌತಿಕ ಶಿಕ್ಷಣ ಹಾಗೂ ದೂರ ಶಿಕ್ಷಣಕ್ಕೆ ಸರ್ಕಾರವು ಸಮಾನ ಮಹತ್ವ ನೀಡಿದೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಅವರು ತಿಳಿಸಿದರು.
ನಗರದ ರಾಮಸಮುದ್ರದ ಬಡಾವಣೆಯ ಕೆ.ಹೆಚ್.ಬಿ. ಕಾಲೋನಿ ಇಮ್ಯಾನ್ಯುವೆಲ್ ಕ್ರಿಶ್ಚಿಯನ್ ಸ್ಕೂಲ್ ಬಳಿ ಇರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರದಲ್ಲಿಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.
ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಒದಗಿಸುವುದರಿಂದ ದೇಶದ ಬೆಳವಣಿಗೆ ಸಾಧ್ಯ. ಬಡ ಮಕ್ಕಳಿಗೂ ಸಹ ಶೈಕ್ಷಣಿಕ ಅವಕಾಶ ಒದಗಿಸುವ ನಿಟ್ಟಿನಲ್ಲಿ ಸರ್ಕಾರವು ‘ಉನ್ನತ ಶಿಕ್ಷಣ ಎಲ್ಲರಿಗೂ-ಎಲ್ಲೆಡೆ’ ಎಂಬ ಮೂಲ ಉದ್ದೇಶದೊಂದಿಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು ಕರ್ನಾಟಕದಾದ್ಯಂತ ೨೩ ಪ್ರಾದೇಶಿಕ ಕೇಂದ್ರ ಮತ್ತು ೧೪೯ ಕಲಿಕಾರ್ಥಿ ಸಹಾಯ ಕೇಂದ್ರಗಳನ್ನು ತೆರೆದಿದೆ ಎಂದರು.
ಮೈಸೂರಿನ ಕರಾಮುವಿ ಯು ಜಿಲ್ಲೆಯ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ನೀಡುವ ನಿಟ್ಟಿನಲ್ಲಿ ಚಾಮರಾಜನಗರದಲ್ಲಿ ೨೦೧೦ರಲ್ಲಿ ಪ್ರಾದೇಶಿಕ ಕೇಂದ್ರವನ್ನು ತೆರೆದಿದೆ. ೨೦೧೬ರಲ್ಲಿ ಸ್ವಂತ ಕಟ್ಟಡವನ್ನು ಹೊಂದಿದ ಕರಾಮುವಿ ಪ್ರಾದೇಶಿಕ ಕೇಂದ್ರವು ಮೂರು ಅಂತಸ್ತಿನ ೧೨ ಕೊಠಡಿಗಳನ್ನು ಹೊಂದಿದ್ದು ಇತರೆ ಪೂರಕ ಸೌಲಭ್ಯಗಳನ್ನು ಒಳಗೊಂಡಿದೆ. ಕರಾಮುವಿಯಲ್ಲಿ ನುರಿತ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದು ಮುಕ್ತ ಶಿಕ್ಷಣಕ್ಕೆ ಸಂಬಂಧಿಸಿದ ಎಲ್ಲಾ ಬಗೆಯ ಮಾಹಿತಿಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ವಿದ್ಯಾರ್ಥಿಗಳ ಮನೆ ಬಾಗಿಲಿಗೆ ಉನ್ನತ ಶಿಕ್ಷಣವನ್ನು ತಲುಪಿಸುವ ಸಲುವಾಗಿ ರೆಗ್ಯೂಲರ್ ವಿಶ್ವವಿದ್ಯಾನಿಲಯಗಳ ಉನ್ನತ ಶಿಕ್ಷಣಕ್ಕೆ ಸರಿಸಮನಾಗಿ ಶಿಕ್ಷಣ ನೀಡುವಲ್ಲಿ ಮುಂಚೂಣಿಯಲ್ಲಿದ್ದು, ಪ್ರಸ್ತುತ ಒಂದು ಲಕ್ಷ ವಿದ್ಯಾರ್ಥಿಗಳ ಪ್ರವೇಶಾತಿಗಾಗಿ ಗುರಿ ಹೊಂದಲಾಗಿದೆ. ಕರಾಮುವಿ ಯಲ್ಲಿ ಈಗಾಗಲೇ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದ ಸಾವಿರಾರು ವಿದ್ಯಾರ್ಥಿಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಶ್ರೇಣಿಯ ಹುದ್ದೆಗಳನ್ನು ಪಡೆದು ಕಾರ್ಯನಿರ್ವಹಿಸುತ್ತಿದ್ದಾರೆ. ಕೆ.ಎ.ಎಸ್., ಐ.ಎ.ಎಸ್, ಪೊಲೀಸ್ ಅಧಿಕಾರಿ ಹಾಗೂ ಅಧ್ಯಾಪಕರಾಗಿ ವಿದ್ಯಾರ್ಥಿಗಳು ಆಯ್ಕೆಯಾಗುತ್ತಿದ್ದಾರೆ ಎಂದು ತಿಳಿಸಿದರು.
ರಾಜ್ಯದಲ್ಲಿ ಬೇರಾವುದೇ ಸಾಂಪ್ರದಾಯಿಕ ವಿವಿಗಳಿಗಿಂತ ಕರಾಮುವಿ ಯು ದೂರ ಶಿಕ್ಷಣ ಹಾಗೂ ಮುಕ್ತ ಶಿಕ್ಷಣ ನೀಡುವ ಏಕೈಕ ವಿಶ್ವವಿದ್ಯಾನಿಲಯವಾಗಿದೆ. ಮುಕ್ತ ವಿಶ್ವವಿದ್ಯಾನಿಲಯಗಳ ದೂರ ಶಿಕ್ಷಣದ ಪದವಿಯು ಸಾಂಪ್ರದಾಯಿಕ ವಿವಿಗಳು ನೀಡುವ ಶಿಕ್ಷಣಕ್ಕೆ ಸಮಾನವಾಗಿದ್ದು, ೨೦೧೮-೧೯ ರಿಂದ ಪ್ರಸ್ತುತ ಸಾಲಿನವರೆಗೂ ಯುಜಿಸಿ ಯಿಂದ ಮಾನ್ಯತೆಯನ್ನು ಪಡೆದಿದೆ. ೨೦೨೨-೨೩ರ ಶೈಕ್ಷಣಿಕ ಸಾಲಿನ ಜನವರಿ ಆವೃತ್ತಿಯ ಯುಜಿಸಿ ಅನುಮೋದಿತ ಕೋರ್ಸ್‌ಗಳ ಪ್ರವೇಶಾತಿ ಈಗಾಗಲೇ ಪ್ರಾರಂಭವಾಗಿದೆ ಎಂದರು.
ಕರಾಮುವಿಯು ಜಿಲ್ಲೆಯ ಕೊಳ್ಳೇಗಾಲ ಮಹದೇಶ್ವರ ಪ್ರಥಮ ದರ್ಜೆ ಕಾಲೇಜು ಮತ್ತು ಗುಂಡ್ಲುಪೇಟೆಯ ಗೌತಮ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಈಗಾಗಲೇ ಕಲಿಕಾರ್ಥಿ ಸಹಾಯ ಕೇಂದ್ರಗಳನ್ನು ತೆರೆದಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಲಿಕಾರ್ಥಿಗಳಿಗೆ ಅನುಕೂಲವಾಗುವಂತೆ ಅಧ್ಯಯನ ಕೇಂದ್ರಗಳನ್ನು ತೆರೆಯಲು ತೀರ್ಮಾನಿಸಿದೆ. ವಿದ್ಯಾರ್ಥಿಗಳು ಪ್ರವೇಶಾತಿ ಅರ್ಜಿಗಳನ್ನು ಕಲಿಕಾರ್ಥಿ ಸಹಾಯ ಕೇಂದ್ರಗಳಲ್ಲೂ ಆನ್‌ಲೈನ್ ಮೂಲಕ ಸಲ್ಲಿಸಿ ಪ್ರವೇಶ ಪಡೆಯಬಹುದಾಗಿದೆ ಎಂದು ಹೇಳಿದರು.
ಕರಾಮುವಿಯು ಪ್ರತಿ ಜಿಲ್ಲೆಯಲ್ಲಿ ಪರೀಕ್ಷಾ ಕೇಂದ್ರ ಹಾಗೂ ಪ್ರತಿ ತಾಲೂಕುಗಳಲ್ಲಿ ಅಧ್ಯಯನ ಕೇಂದ್ರ ಸ್ಥಾಪಿಸಲಿದೆ. ಎಲ್ಲಾ ಶೈಕ್ಷಣಿಕ ಕಲಿಕಾ ಅಧ್ಯಯನ ಸಾಮಗ್ರಿ ಡಿಜಿಟಲೀಕರಣ, ಸ್ಟೂಡೆಂಟ್ ಆಪ್ ಬಳಕೆ ಆನ್‌ಲೈನ್ ನಲ್ಲಿ ಬಿಡುವಿನ ಸಮಯದಲ್ಲಿ ವಿದ್ಯಾರ್ಥಿಗಳು ಅಭ್ಯಸಿಸಲು ಅವಕಾಶ ಕಲ್ಪಿಸಲಾಗಿದೆ. ಕೌಶಲ್ಯಾಭಿವೃದ್ದಿಗೆ ಪ್ರತ್ಯೇಕ ವಿಭಾಗ ರಚನೆ, ದೃಶ್ಯವಾಹಿನಿ ಯೂ ಟ್ಯೂಬ್ ಚಾನೆಲ್ ಸ್ಥಾಪನೆ, ಅಧ್ಯಾಪಕರ ಬೋಧನಾ ವೀಡಿಯೋ ವಿದ್ಯಾರ್ಥಿಗಳಿಗೆ ಲಭ್ಯವಾಗಲಿದೆ. ಪ್ರಸಾರಂಗ ರೇಡಿಯೋ ಸ್ಥಾಪನೆ ಹಾಗೂ ಡಿಜಿಟಲ್ ಮೌಲ್ಯ ಮಾಪನದ ಮೂಲಕ ಗುಣಮಟ್ಟದ ಹಾಗೂ ಶೀಘ್ರ ಫಲಿತಾಂಶ ಪ್ರಕಟಣೆಗೆ ಅನುಕೂಲ ಕಲ್ಪಿಸಿದೆ ಎಂದರು.
ಬಿ.ಪಿಎಲ್ ಕಾರ್ಡ್ ಹೊಂದಿರುವ ಮಹಿಳಾ ಸ್ನಾತಕ, ಸ್ನಾತಕೋತ್ತರ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ, ಡಿಫೆನ್ಸ್ ಹಾಗೂ ಮಾಜಿ ಸೈನಿಕರ ವಿದ್ಯಾರ್ಥಿಗಳಿಗೆ ಭೋಧನಾ ಶುಲ್ಕದಲ್ಲಿ ಶೇ.೧೫ ರಷ್ಟು ರಿಯಾಯಿತಿ, ಆಟೋ, ಕ್ಯಾಬ್ ಚಾಲಕರು ಹಾಗೂ ಇಬ್ಬರು ಮಕ್ಕಳಿಗೆ ಶೇ.೩೦ರಷ್ಟು ಮತ್ತು ಕೆ.ಎಸ್.ಆರ್.ಟಿ.ಸಿ, ಬಿ.ಎಂ.ಟಿ.ಸಿ, ಎನ್.ಡಬ್ಯ್ಲೂ. ಕೆ.ಎಸ್.ಆರ್.ಟಿ.ಸಿ, ಕೆ.ಕೆ.ಆರ್.ಟಿ.ಸಿ ನೌಕರರ ಮಕ್ಕಳಿಗೆ ಶೇ.೨೫ ರಷ್ಟು ರಿಯಾಯಿತಿಯನ್ನು ಬೋಧನಾ ಶುಲ್ಕದಲ್ಲಿ ಕರಾಮುವಿ ವತಿಯಿಂದ ನೀಡಲಾಗುತ್ತಿದೆ ಎಂದು ತಿಳಿಸಿದರು.
ತೃತೀಯ ಲಿಂಗಿ ಹಾಗೂ ದೃಷ್ಠಿಹೀನ ವಿದ್ಯಾರ್ಥಿಗಳು ಮತ್ತು ಕೋವಿಡ್-೧೯ ನಿಂದ ಮೃತರಾದ ತಂದೆ, ತಾಯಿಯ ಮಕ್ಕಳಿಗೆ ಅವರು ಅರ್ಹತೆ ಹೊಂದಿ ಪ್ರವೇಶ ಬಯಸುವ ಶಿಕ್ಷಣ ಕ್ರಮಗಳಿಗೆ ಉಚಿತವಾಗಿ ಪ್ರವೇಶ ನೀಡಲಾಗುವುದು. ಅಲ್ಲದೇ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಪ್ರವೇಶಾತಿ ಪಡೆಯುವ ಎಸ್.ಸಿ, ಎಸ್.ಟಿ ಹಾಗೂ ಒಬಿಸಿ ವಿದ್ಯಾರ್ಥಿಗಳು ಅಗತ್ಯ ದಾಖಲಾತಿ ಒದಗಿಸಿದ್ದಲ್ಲಿ ಎಸ್.ಎಸ್.ಪಿ ಪೋರ್ಟಲ್ ಮೂಲಕ ವಿದ್ಯಾರ್ಥಿವೇತನದ ಅವಕಾಶ ಕಲ್ಪಿಸಲಾಗಿದೆ ಮತ್ತು ಪೂರ್ಣ ಶುಲ್ಕ ಮರುಭರಿಕೆಯಾಗುತ್ತದೆ ಎಂದು ಕುಲಪತಿಯವರಾದ ಪ್ರೊ. ಶರಣಪ್ಪ ವಿ. ಹಲಸೆ ತಿಳಿಸಿದರು.
ನಗರದ ಪ್ರಾದೇಶಿಕ ಕೇಂದ್ರದ ನಿರ್ದೇಶಕರಾದ ಎಸ್. ಮಹದೇವ, ಎಂಜಿನಿಯರ್ ಭಾಸ್ಕರ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
