ಚಾಮರಾಜನಗರ: ಜಿಲ್ಲೆಯಲ್ಲಿ ಕಳೆದ ಜುಲೈ ತಿಂಗಳಿನಲ್ಲಿ ನಡೆಸಲಾದ ವಿಕಲಚೇತನರ ತಪಾಸಣಾ ಶಿಬಿರದಲ್ಲಿ ಸಾಧನ, ಸಲಕರಣೆಗಳನ್ನು ವಿತರಿಸಲು ಗುರುತಿಸಲಾಗಿರುವ ೧೬೯೩ ವಿಕಲಚೇತನರಿಗೆ ಇದೇ ಡಿಸೆಂಬರ್ ೨೪ರಂದು ಸಾಧನ ಸಲಕರಣೆಗಳನ್ನು ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು, ಇದಕ್ಕಾಗಿ ಎಲ್ಲಾ ಸಿದ್ದತೆಗಳನ್ನು ಕೈಗೊಳ್ಳುವಂತೆ ಲೋಕಸಭಾ ಸದಸ್ಯರಾದ ವಿ. ಶ್ರೀನಿವಾಸಪ್ರಸಾದ್ ಅವರು ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ವಿಕಲಚೇತನರಿಗೆ ಸಾಧನ, ಸಲಕರಣೆ ವಿತರಿಸುವ ಕಾರ್ಯಕ್ರಮ ಆಯೋಜನೆ ಸಂಬಂಧ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರದ ಅಲಿಮ್ಕೊ ಸಂಸ್ಥೆಯು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಹಯೋಗದೊಂದಿಗೆ ವಿಕಲಚೇತನರಿಗೆ ಅಗತ್ಯವಿರುವ ವಿವಿಧ ಸಾಧನ, ಸಲಕರಣೆಗಳನ್ನು ವಿತರಿಸುವ ಸಲುವಾಗಿ ಜಿಲ್ಲೆಯ ವಿವಿಧೆಡೆ ಜುಲೈ ತಿಂಗಳಿನಲ್ಲಿ ತಪಾಸಣಾ ಶಿಬಿರ ಏರ್ಪಡಿಸಿತ್ತು. ಈ ಸಂದರ್ಭದಲ್ಲಿ ೧೬೯೩ ವಿಕಲಚೇತನರಿಗೆ ಸಾಧನ ಸಲಕರಣೆ ಅಗತ್ಯ ಇರುವ ಬಗ್ಗೆ ಗುರುತಿಸಲಾಗಿತ್ತು. ಈ ಎಲ್ಲರಿಗೂ ಡಿಸೆಂಬರ್ ೨೪ರಂದು ಸಾಧನ ಸಲಕರಣೆ ವಿತರಿಸಲು ನಗರದ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲು ಎಲ್ಲಾ ಏರ್ಪಾಡುಗಳನ್ನು ಮಾಡಬೇಕೆಂದು ಲೋಕಸಭಾ ಸದಸ್ಯರು ತಿಳಿಸಿದರು.
ಕಾರ್ಯಕ್ರಮದ ಸ್ಥಳದಲ್ಲಿ ವಿಕಲಚೇತನರು ಸಾಧನ ಸಲಕರಣೆಗಳನ್ನು ಪಡೆಯಲು ಪ್ರತ್ಯೇಕ ಕೌಂಟರ್‌ಗಳನ್ನು ತೆರೆಯಬೇಕು. ಸೌಲಭ್ಯಕ್ಕಾಗಿ ಆಯ್ಕೆಯಾಗಿರುವವರಿಗೆ ಮಾಹಿತಿ ನೀಡಬೇಕು. ಆಯಾ ಗ್ರಾಮ ಪಂಚಾಯಿತಿ, ನಗರ ಪಟ್ಟಣ ವ್ಯಾಪ್ತಿಯಲ್ಲಿ ಇರುವ ಫಲಾನುಭವಿಗಳು ಸಾಧನ ಸಲಕರಣೆ ಪಡೆಯಲು ಅವಶ್ಯವಿರುವ ಎಲ್ಲಾ ಕ್ರಮಗಳಿಗೆ ತ್ವರಿತವಾಗಿ ಮುಂದಾಗುವಂತೆ ನಿರ್ದೇಶನ ನೀಡಿದರು.
ವ್ಹೀಲ್ ಚೇರ್, ತ್ರಿಚಕ್ರ ವಾಹನ ಅಗತ್ಯವಿರುವವರಿಗೆ ವಿಶೇಷ ಕೌಂಟರ್‌ಗಳು ಬೇಕಿದೆ. ಫಲಾನುಭವಿಗಳ ಸಂಖ್ಯೆಗೆ ಅನುಗುಣವಾಗಿ ವಿಸ್ತಾರವಾದ ಸ್ಥಳವಕಾಶ ಮಾಡಬೇಕಾಗುತ್ತದೆ. ಸಲಕರಣೆಗಳನ್ನು ನೀಡಲು ಮೊದಲೇ ರೂಪು ರೇಷೆ ತಯಾರಿಸಿಕೊಂಡು ಯಾವುದೇ ಗೊಂದಲಗಳಾಗದಂತೆ ವಿತರಿಸಬೇಕು ಎಂದು ಲೋಕಸಭಾ ಸದಸ್ಯರು ತಿಳಿಸಿದರು.
ವಿಕಲಚೇತನರನ್ನು ಕರೆತರಲು ಬಸ್‌ಗಳ ವ್ಯವಸ್ಥೆ ಮಾಡಬೇಕಿದೆ. ಅಂಗವೈಕಲ್ಯ ಪ್ರಮಾಣ ತೀರ ಹೆಚ್ಚಿರುವ ಹಾಗೂ ಬಸ್ ನಲ್ಲಿ ಬರಲು ಸಾಧ್ಯವಾಗದ ಫಲಾನುಭವಿಗಳಿಗೆ ವಿಶೇಷ ವಾಹನ ನಿಯೋಜಿಸಬೇಕಾಗುತ್ತದೆ. ಹಲವರಿಗೆ ಅವಲಂಬಿತರು ಜೊತೆಯಲ್ಲಿ ಬರಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ವಾಹನಗಳ ವ್ಯವಸ್ಥೆಯನ್ನು ಸಮರ್ಪಕವಾಗಿ ಮಾಡಬೇಕು. ವಿವಿಧ ಇಲಾಖೆಗಳ ಅಧಿಕಾರಿಗಳು ಸಾಧನ ಸಲಕರಣೆ ಕಾರ್ಯಕ್ರಮದ ಅಚ್ಚುಕಟ್ಟು ನಿರ್ವಹಣೆಗೆ ಯೋಜನಾ ಬದ್ದವಾಗಿ ಕಾರ್ಯೋನ್ಮುಖರಾಗಬೇಕೆಂದು ಲೋಕಸಭಾ ಸದಸ್ಯರಾದ ವಿ. ಶ್ರೀನಿವಾಸಪ್ರಸಾದ್ ಅವರು ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಮಾತನಾಡಿ ಸಾಧನ ಸಲಕರಣೆ ವಿತರಣೆಗೆ ಪೂರ್ವಭಾವಿಯಾಗಿ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು, ವಿಕಲಚೇತನರಿಗೆ ನೆರವಾಗುವ ವಿವಿದೋದ್ದೇಶ ಕಾರ್ಯಕರ್ತರ ಸಭೆ ನಡೆಸಿ ಸೂಕ್ತ ಮಾಗದರ್ಶನ ನೀಡಬೇಕು. ಕಾರ್ಯಕ್ರಮದ ಸ್ಥಳದಲ್ಲಿ ಎನ್.ಸಿ.ಸಿ, ಎನ್.ಎಸ್.ಎಸ್. ಸ್ವಯಂ ಸೇವಕ ವಿದ್ಯಾರ್ಥಿಗಳ ನೆರವು ಪಡೆದುಕೊಳ್ಳಬೇಕು. ವೈದ್ಯಕೀಯ ಸಿಬ್ಬಂದಿ ಸಹ ಇರಬೇಕು. ಕಾರ್ಯಕ್ರಮದ ಜವಾಬ್ದಾರಿ ನಿರ್ವಹಣೆಗೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗುತ್ತದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ. ಶಿವಕುಮಾರ್, ಅಲಿಮ್ಕೊ ಸಂಸ್ಥೆಯ ಬೆಂಗಳೂರಿನ ಉಪ ವ್ಯವಸ್ಥಾಪಕರಾದ ಶಿವಕುಮಾರ್, ಯೂನಿಟ್ ಮುಖ್ಯಸ್ಥರು ಹಾಗೂ ಹಿರಿಯ ವ್ಯವಸ್ಥಾಪಕರಾದ ಎ.ವಿ. ಅಶೋಕ್ ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕರಾದ ಗೀತಾಲಕ್ಷ್ಮಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಕೆ.ಎಂ. ವಿಶ್ವೇಶ್ವರಯ್ಯ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ದೀಪಾ, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮಂಜುನಾಥ್ ಪ್ರಸನ್ನ, ಸಾರ್ವಜನಿಕ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿ ಮಂಜುನಾಥ್, ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರಾದ ಸುಧಾ, ನಗರಸಭೆ ಆಯುಕ್ತರಾದ ರಾಮದಾಸ್, ಇನ್ನಿತರ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
