ಚಾಮರಾಜನಗರ: ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಸಿಮ್ಸ್ ಟೀಚರ್ ಅಸೋಸಿಯೇಶನ್ ವತಿಯಿಂದ ಸಿ.ಎಂ.ಇ ಇನ್ ಪ್ಲಾನಿಂಗ್ ಮತ್ತು ಕಂಡಕ್ಟಿಂಗ್ ಮೆಡಿಕಲ್ ರೀಸರ್ಚ್ ಕಾರ್ಯಕ್ರಮವನ್ನು ಜನವರಿ ೨೦ರಂದು ಬೆಳಿಗ್ಗೆ ೯.೩೦ ರಿಂದ ಮಧ್ಯಾಹ್ನ ೩ ಗಂಟೆಯವರೆಗೆ ನಗರದ ವೈದ್ಯಕೀಯ ಕಾಲೇಜಿನ ಮೆಡಿಕಲ್ ಎಜುಕೇಶನ್ ಯೂನಿಟ್ ಹಾಲ್‌ನಲ್ಲಿ ಆಯೋಜಿಸಲಾಗಿದೆ.
ಮೆಡಿಕಲ್ ಎಜುಕೇಶನ್ ಯೂನಿಟ್ ಹಾಗೂ ಬೆಂಗಳೂರಿನ ಕೋ-ಗೈಡ್ ಸಂಸ್ಥೆ ಸಹಯೋಗದೊಂದಿಗೆ ಏರ್ಪಡಿಸಲಾಗಿರುವ ಸಿ.ಎಂ.ಇ ಕಾರ್ಯಕ್ರಮಕ್ಕೆ ೧೦೮ ವೈದ್ಯರು ನೋಂದಣಿಯಾಗಿದ್ದಾರೆ.
ನಗರದ ಹಳೆಯ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಸರ್ಜನ್ ಸಭಾಂಗಣದಲ್ಲಿಂದು ಸುದ್ದಿಗೋಷ್ಠಿಯಲ್ಲಿ ವೈದ್ಯಕೀಯ ಕಾಲೇಜಿನ ಡೀನ್ ಹಾಗೂ ನಿರ್ದೇಶಕರಾದ ಡಾ. ಸಂಜೀವ್, ಸಿಮ್ಸ್ ಟೀಚರ್ ಸಂಘದ ಅಧ್ಯಕ್ಷರು ಹಾಗೂ ಕೀಲು ಮೂಳೆ ವಿಭಾಗದ ಮುಖ್ಯಸ್ಥರಾದ ಡಾ. ಸಿ.ವಿ. ಮಾರುತಿ ಅವರು ಈ ವಿಷಯ ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಂ. ವಿಶ್ವೇಶ್ವರಯ್ಯ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ವೈದ್ಯಕೀಯ ಕಾಲೇಜಿನ ಎಲ್ಲಾ ವಿಭಾಗಗಳ ಮುಖ್ಯಸ್ಥರುಗಳು, ಟೀಚರ್ ಅಸೋಸಿಯೇಶನ್ ಪದಾಧಿಕಾರಿಗಳು, ಸದಸ್ಯರು, ಕೋ-ಗೈಡ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ಡಾ. ಜಿ. ಮುರಳಿ ಮೋಹನ್ ರೆಡ್ಡಿ ಭಾಗವಹಿಸಲಿದ್ದಾರೆ.
ಸಿಮ್ಸ್‌ನ ಎಲ್ಲಾ ವೈದ್ಯರು, ಜಿಲ್ಲೆಯ ವೈದ್ಯಾಧಿಕಾರಿಗಳು, ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ವೈದ್ಯರು ಮತ್ತು ಸಂಸ್ಥೆಯ ಸ್ನಾತಕೋತ್ತರ ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಲಿದ್ದಾರೆ.
ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯು ಎಲ್ಲಾ ವಿಭಾಗಗಳಲ್ಲಿ ಜಿಲ್ಲೆಯ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವುದರಲ್ಲಿ ಮೇಲುಗೈ ಸಾಧಿಸಿದೆ. ಕಡಿಮೆ ಸಂಖ್ಯೆಯ ಮಾನವ ಸಂಪನ್ಮೂಲದ ಸದುಪಯೋಗ ಪಡಿಸಿಕೊಂಡು ಕಡಿಮೆ ಖರ್ಚಿನಲ್ಲಿ ತೀವ್ರ ಗತಿಯಲ್ಲಿ ಅತ್ಯಂತ ದಕ್ಷತೆಯಿಂದ ಆಧುನಿಕ ತಂತ್ರಜ್ಞಾನದ ಕೋ-ಗೈಡ್ ತಂತ್ರಾಂಶವನ್ನು ಉಪಯೋಗಿಸಿಕೊಳ್ಳಲಾಗುತ್ತಿದೆ. ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಸಂಶೋಧನೆಗಳನ್ನು ಮಾಡಲು ನಮ್ಮ ಸಂಸ್ಥೆ ಮುಂದೆ ಬಂದಿರುವುದು ಹೆಮ್ಮೆಯ ಸಂಗತಿ ಎಂದು ಡಾ. ಸಂಜೀವ್ ಮತ್ತು ಡಾ. ಮಾರುತಿ ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಹಿರಿಯ ವೈದ್ಯರು ಇದ್ದರು.