ಚಾಮರಾಜನಗರ: ಜನವರಿ ೧೫ರಂದು ನಗರದಲ್ಲಿ ನಡೆಯಲಿರುವ ಯೋಗಾಥಾನ್ ಕಾರ್ಯಕ್ರಮಕ್ಕೆ ಅಗತ್ಯ ಸಿದ್ದತೆಗಳನ್ನು ತ್ವರಿತವಾಗಿ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ (ಜ. ೦೪) ರಾಷ್ಟ್ರೀಯ ಯುವಜನೋತ್ಸವದ ಅಂಗವಾಗಿ
ಜಿಲ್ಲೆಯಲ್ಲಿ ಯೋಗಾಥಾನ್-೨೦೨೨ ಕಾರ್ಯಕ್ರಮ ಆಯೋಜನೆ ಸಂಬಂಧ ನಡೆದ ಪೂರ್ವಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಷ್ಟ್ರೀಯ ಯುವಜನೋತ್ಸವದ ಅಂಗವಾಗಿ ಸರ್ಕಾರದ ನಿರ್ದೇಶನದನ್ವಯ ಜನವರಿ ೧೫ರಂದು ರಾಜ್ಯದ್ಯಂತ ನಡೆಯುವ ಕಾರ್ಯಕ್ರಮದಲ್ಲಿ ೧೦ ಸಾವಿರ ಯೋಗ ಬೋಧಕರು ಹಾಗೂ ೧೦ ಲಕ್ಷ ಯೋಗಾಸಕ್ತರಿಂದ ಯೋಗಾಭ್ಯಾಸ ಮೂಲಕ ಗಿನ್ನಿಸ್ ವಿಶ್ವದಾಖಲೆ ನಿರ್ಮಿಸುವ ಉದ್ದೇಶ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಯೋಗಾಸಕ್ತರಿಂದ ಜನವರಿ ೧೫ರಂದು ನಗರದ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಯೋಗಾಥಾನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮ ಆಯೋಜನೆಯಲ್ಲಿ ಯಾವುದೇ ಲೋಪಗಳಿಗೆ ಅವಕಾಶವಾಗದಂತೆ ನೋಡಿಕೊಳ್ಳಬೇಕು ಎಂದರು.
ಯೋಗಾಥಾನ್ ಕಾರ್ಯಕ್ರಮದಲ್ಲಿ ೬ ಸಾವಿರ ಯೋಗಪಟುಗಳು ಭಾಗವಹಿಸುವ ನಿರೀಕ್ಷೆ ಇದ್ದು, ಇದಕ್ಕಾಗಿ ಕುಡಿಯುವ ನೀರು, ಕೃತಕ ಶೌಚಾಲಯ ವ್ಯವಸ್ಥೆ ಸೇರಿದಂತೆ ಅವಶ್ಯ ಮೂಲಸೌಕರ್ಯ ಒದಗಿಸಬೇಕಿದೆ. ಸಾವಿರ ಯೋಗಪಟುಗಳಿಗೆ ಒಬ್ಬ ಬೋಧಕರಂತೆ ಒಟ್ಟು ೬ ಯೋಗಬೋಧಕರನ್ನು ನಿಯೋಜಿಸಬೇಕು. ಬೋಧಕರು ಯೋಗ ಪ್ರದರ್ಶಿಸಲು ಅನುಕೂಲವಾಗುವಂತೆ ೫*೫ ಅಳತೆಯ ವೇದಿಕೆ (ಲ್ಯಾನ್) ವ್ಯವಸ್ಥೆ ಮಾಡಬೇಕು. ಯೋಗಾಸಕ್ತರು ಯೋಗ ಮ್ಯಾಟ್ ಅನ್ನು ಸ್ವತಃ ಅವರೇ ತರುವಂತೆ ತಿಳಿಸಬೇಕು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಯೋಗಾಥಾನ್ ಕಾರ್ಯಕ್ರಮ ಯಶಸ್ವಿಗಾಗಿ ಶಾಲಾ-ಕಾಲೇಜುಗಳು, ವಿವಿಧ ಸಂಘಸಂಸ್ಥೆಗಳ ಸಹಕಾರ ಪಡೆಯಬೇಕು. ಅಲ್ಲದೆ ಯೋಗಾಥಾನ್ ನಡೆಯುವ ಜಿಲ್ಲಾ ಕ್ರೀಡಾಂಗಣದಲ್ಲಿ ಒಂದೆಡೆ ಪ್ರವೇಶದ್ವಾರ ಹಾಗೂ ಮತ್ತೊಂದಡೆ ನಿರ್ಗಮನ ದ್ವಾರಗಳ ವ್ಯವಸ್ಥೆಯಾಗಬೇಕು. ಯೋಗಪಟುಗಳಿಗೆ ಕ್ರೀಡಾಂಗಣ ಸಮತಟ್ಟುಗೊಳ್ಳಬೇಕು. ಕಾರ್ಯಕ್ರಮ ಸಂಘಟನೆಗಾಗಿ ಅಗತ್ಯವಿರುವ ೩೦೦ರಿಂದ ೪೦೦ ಎನ್.ಎಸ್.ಎಸ್ ಸ್ವಯಂಸೇವಕರನ್ನು ನಿಯೋಜಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ಅನಿತಾ ಅವರು ಮಾತನಾಡಿ ಜನವರಿ ೧೫ರಂದು ಬೆಳಿಗ್ಗೆ ೬ರಿಂದ ೮.೩೦ ಗಂಟೆಯವರೆಗೆ ನಡೆಯಲಿರುವ ಯೋಗಾಥಾನ್ ಕಾರ್ಯಕ್ರಮದ ಪೂರ್ವಾಭ್ಯಾಸವನ್ನು ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಜನವರಿ ೧೨, ೧೩ ಹಾಗೂ ೧೪ರಂದು ಏರ್ಪಡಿಸಲಾಗಿದೆ. ಜಿಲ್ಲೆಯಲ್ಲಿ ಯೋಗಾಥಾನ್‌ನಲ್ಲಿ ಪಾಲ್ಗೊಳ್ಳಲು ೫ ಸಾವಿರ ಯೋಗಾಸಕ್ತರನ್ನು ನೊಂದಣಿಗೆ ಇಲಾಖೆಗೆ ಗುರಿ ನೀಡಲಾಗಿದೆ. ಜಿಲ್ಲೆಯ ೮೮ ಶಾಲೆಗಳಿಂದ ೪೩೨೧ ಹಾಗೂ ವಿವಿಧ ೧೬ ಕಾಲೇಜುಗಳ ೭೦೭ ವಿದ್ಯಾರ್ಥಿಗಳನ್ನು ಈಗಾಗಲೇ ನೊಂದಣಿ ಮಾಡಲಾಗಿದೆ ಎಂದು ತಿಳಿಸಿದರು.
ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ಶಾಲಾ-ಕಾಲೇಜು ಪ್ರಾಂಶುಪಾಲರು ಹಾಗೂ ಸಂಘಸಂಸ್ಥೆಗಳ ಪದಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.