ಚಾಮರಾಜನಗರ: ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿನ ಬಾಕಿ ಉಳಿದ ವಿಶೇಷಚೇತನ ಫಲಾನುಭವಿಗಳಿಗೆ ಉಚಿತ ಸಾಧನ, ಸಲಕರಣೆಗಳನ್ನು ಜನವರಿ ೧೪ರಂದು ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ವಿತರಿಸಲಾಗುವುದೆಂದು ಲೋಕಸಭಾ ಸದಸ್ಯರಾದ ವಿ. ಶ್ರೀನಿವಾಸಪ್ರಸಾದ್ ಅವರು ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜಿಲ್ಲೆಯ ವಿಕಲಚೇತನರಿಗೆ ಅಗತ್ಯವುಳ್ಳ ಸಾಧನ, ಸಲಕರಣೆಗಳನ್ನು ಉಚಿತವಾಗಿ ವಿತರಿಸುವ ಸಂಬಂಧ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ನಡೆದ ಪೂರ್ವಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೇಂದ್ರಸರ್ಕಾರದ ವಿಶೇಷ ಆಡಿಪ್ ಯೋಜನೆಯಡಿ ಡಿಸೆಂಬರ್ ೨೪ರಂದು ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ವಿಕಲಾಂಗ ವ್ಯಕ್ತಿಗಳ ಸಬಲೀಕರಣ (ದಿವ್ಯಾಂಗಜನ್) ಇಲಾಖೆ, ಆರ್ಟಿಫಿಶಿಯಲ್ ಲಿಂಬ್ಸ್ ಮ್ಯಾನುಫ್ಯಾಕ್ಚರಿಂಗ್ ಕಾರ್ಪೋರೇಷನ್ ಆಫ್ ಇಂಡಿಯಾ (ಆಲಿಂಕೋ), ಜಿಲ್ಲಾಡಳಿತ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಿ ವಿಶೇಷಚೇತನ ಫಲಾನುಭವಿಗಳಿಗೆ ಸಾಧನ, ಸಲಕರಣೆಗಳನ್ನು ವಿತರಿಸಲಾಗಿತ್ತು. ಒಟ್ಟು ೧೬೯೩ ವಿಕಲಚೇತನರಲ್ಲಿ ಬಾಕಿ ಉಳಿದ ೧೯೭ ಫಲಾನುಭವಿಗಳಿಗೆ ಜನವರಿ ೧೪ರಂದು ವಿತರಣೆ ಮಾಡಲಾಗುವುದು ಎಂದರು.
ಜನವರಿ ೧೪ರಂದು ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನ ಕಾರ್ಯಕ್ರಮ ಆಯೋಜನೆಗೆ ಎಲ್ಲಾ ಬಗೆಯ ಅವಶ್ಯ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ ಲೋಕಸಭಾ ಸದಸ್ಯರಾದ ವಿ. ಶ್ರೀನಿವಾಸಪ್ರಸಾದ್ ಅವರು ಸಾಧನಾ ಸಲಕರಣೆ ವಿತರಣೆಯ ೨ನೇ ಹಂತದ ಕಾರ್ಯಕ್ರಮವನ್ನು ಸಹ ಅಚ್ಚುಕಟ್ಟಾಗಿ ಆಯೋಜಿಸಲು ಸಕಲ ವ್ಯವಸ್ಥೆಗಳನ್ನು ಮಾಡಬೇಕು. ಕಾರ್ಯಕ್ರಮಕ್ಕೆ ಆಗಮಿಸುವ ವಿಕಲಚೇತನರು ಹಾಗೂ ಅವರ ಪೋಷಕರಿಗೆ ಅಂಬೇಡ್ಕರ್ ಭವನದ ಅವರಣದಲ್ಲಿ ನೆರಳಿನ ವ್ಯವಸ್ಥೆ, ಅಸನಗಳು, ಕುಡಿಯುವ ನೀರು, ಊಟ ಸೇರಿದಂತೆ ಅತಿಥ್ಯ ವ್ಯವಸ್ಥೆಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿಗಳು ಹಾಜರಿರುವಂತೆ ನೋಡಿಕೊಳ್ಳಬೇಕು ಎಂದರು.
ವಿಶೇಷಚೇತನರಿಗೆ ಉಚಿತವಾಗಿ ಸಾಧನ, ಸಲಕರಣೆ ವಿತರಣೆ ಕೇಂದ್ರಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮ. ಸಾಧನ, ಸಲಕರಣೆ ವಿತರಿಸಲು ದೇಶದ ೩೬ ಲೋಕಸಭಾ ಕ್ಷೇತ್ರಗಳ ಜೊತೆಗೆ ರಾಜ್ಯದ ಚಾಮರಾಜನಗರ ಈ ಯೋಜನೆಗೆ ಆಯ್ಕೆಯಾಗಿರುವ ಏಕೈಕ ಲೋಕಸಭಾ ಕ್ಷೇತ್ರವಾಗಿತ್ತು. ದಕ್ಷಿಣ ಭಾರತದಲ್ಲಿಯೇ ನಡೆದ ದೊಡ್ಡಮಟ್ಟದ ಕಾರ್ಯಕ್ರಮ ಇದಾಗಿದ್ದು, ಜಿಲ್ಲೆಯ ಪ್ರತಿ ಹಳ್ಳಿ, ಗ್ರಾಮ ಪಂಚಾಯಿತಿ ಮಟ್ಟದಿಂದಲೂ ವಿಕಲಚೇತನರನ್ನು ಗುರುತಿಸಿ ಕರೆತಂದು ಕಾರ್ಯಕ್ರಮದ ಯಶಸ್ಸಿಗೆ ನೆರವಾದ ಜಿಲ್ಲೆಯ ಜನಪ್ರತಿನಿಧಿಗಳು, ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಅಭಿನಂದನೆಗಳನ್ನು ಸಭೆಯ ಆರಂಭದಲ್ಲಿ ಲೋಕಸಭಾ ಸದಸ್ಯರಾದ ವಿ. ಶ್ರೀನಿವಾಸಪ್ರಸಾದ್ ಅವರು ತಿಳಿಸಿದರು.
ಕಾವೇರಿ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಜಿ. ನಿಜಗುಣರಾಜು, ಜಿಲ್ಲಾಧಿಕಾರಿ ಡಿ.ಎಸ್. ರಮೇಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯತ್ರಿ, ಉಪ ವಿಭಾಗಾಧಿಕಾರಿ ಗೀತಾ ಹುಡೇದ, ಡಿ.ವೈ.ಎಸ್.ಪಿ ಪ್ರಿಯದರ್ಶಿನಿ ಸಾಣೆಕೊಪ್ಪ, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ದೀಪಾ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕರಾದ ಗೀತಾಲಕ್ಷ್ಮೀ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ವಿಶ್ವೇಶ್ವರಯ್ಯ, ಇತರರು ಸಭೆಯಲ್ಲಿ ಹಾಜರಿದ್ದರು.
