ಚಾಮರಾಜನಗರ: ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಯಳಂದೂರು ತಾಲೂಕಿನ ಕೆ. ದೇವರಹಳ್ಳಿ ಗ್ರಾಮದಲ್ಲಿಂದು ಜಿಲ್ಲಾಧಿಕಾರಿಗಳ ನಡೆ ಗ್ರಾಮದ ಕಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗ್ರಾಮೀಣ ಜನರ ಅಹವಾಲುಗಳನ್ನು ಆಲಿಸಿ ಪರಿಹಾರ ಸೂಚಿಸಿದರು.
ಆರಂಭದಲ್ಲಿಯೇ ಗ್ರಾಮಸ್ಥರು ಮೂಲಸೌಕರ್ಯ, ರಸ್ತೆ, ಬಸ್‌ಗಳ ವ್ಯವಸ್ಥೆ, ವಿದ್ಯುತ್, ಪಡಿತರ, ಪಿಂಚಣಿ, ಸ್ಮಶಾನ, ಭೂಮಿ ಪರಿಹಾರ, ಕೆರೆಗಳ ಒತ್ತುವರಿ ಸೇರಿದಂತೆ ಇನ್ನೂ ಹಲವು ಸಮಸ್ಯೆಗಳನ್ನು ಜಿಲ್ಲಾಧಿಕಾರಿಯವರ ಗಮನಕ್ಕೆ ತಂದರು.
ಗ್ರಾಮದಲ್ಲಿ ರಸ್ತೆಗಳು ಹಾಳಾಗಿರುವುದರಿಂದ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಬಸ್ಸುಗಳ ಸಹ ಬರುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಶಾಲೆಗಳಿಗೆ ಹೋಗಲು ಅನಾನುಕೂಲವಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳ ಬಳಿ ಮನವಿ ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಸ್ಥಳದಲ್ಲಿದ್ದ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳಿಗೆ ತುರ್ತಾಗಿ ಬಸ್ ನಿಯೋಜಿಸುವಂತೆ ಸೂಚಿಸಿದರು.
ಲೋಕೋಪಯೋಗಿ ಹಾಗೂ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳಿಗು ರಸ್ತೆ ದುರಸ್ತಿಗೆ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಯವರು ನಿರ್ದೇಶನ ನೀಡಿದರು.
ಅರಣ್ಯ ಇಲಾಖೆಯಿಂದ ಭೂಮಿ ಸಂಬಂಧ ತೊಂದರೆಯಾಗುತಿದೆ. ಕಾಡುಪ್ರಾಣಿಗಳ ಹಾವಳಿ ಸಹ ಹೆಚ್ಚಿದೆ ಎಂದು ಹಲವು ಗ್ರಾಮಸ್ಥರು ಗಮನಕ್ಕೆ ತಂದ ವೇಳೆ ಸ್ಥಳೀಯ ಅರಣ್ಯ ಅಧಿಕಾರಿಗೆ ಸೂಚನೆ ನೀಡಿದ ಜಿಲ್ಲಾಧಿಕಾರಿಯವರು ಭೂಮಿ ಸಂಬಂಧ ಸಭೆ ನಡೆಸಿ ಮುಂದಿನ ಕ್ರಮ ತೆಗೆದುಕೊಳ್ಳಬೇಕಿದೆ ಎಂದರು. ಕಾಡುಪ್ರಾಣಿಗಳ ಹಾವಳಿ ತಡೆಗಾಗಿ ಸೋಲಾರ್ ಬೇಲಿ, ರೈಲ್ವೆ ಕಂಬಿ ಅಳವಡಿಕೆ ಕಾರ್ಯ ನಡೆಯುತ್ತಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದಾದ ಬಳಿಕ ಸಮಸ್ಯೆ ನೀಗಲಿದೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ದೇವರಹಳ್ಳಿಯ ೫೨ ಪಡಿತರ ಕುಟುಂಬಗಳು ಪಡಿತರ ಪಡೆಯಲು ೭ ಕಿ.ಮೀ ದೂರವಿರುವ ಪಕ್ಕದ ಊರಿಗೆ ಹೋಗಬೇಕಿದೆ. ಇಲ್ಲಿಯೇ ಪಡಿತರ ವಿತರಿಸಿ ಅನುಕೂಲ ಕಲ್ಪಿಸಬೇಕೆಂಬ ಮನವಿಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಯವರು ಗ್ರಾಮ ಪಂಚಾಯತ್ ನೆರವಿನಿಂದ ಇಲ್ಲಿಯೇ ಪಡಿತರ ವಿತರಿಸಲು ಕ್ರಮ ವಹಿಸಿ. ಇಲ್ಲವಾದಲ್ಲಿ ಪರ್ಯಾಯ ವ್ಯವಸ್ಥೆ ಮೂಲಕ ವಾಹನದಲ್ಲಿ ಪಡಿತರ ತಂದು ವಿತರಿಸಲು ಮುಂದಾಗುವಂತೆ ತಿಳಿಸಿದರು.
ವಸತಿ ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿಯವರು ಈಗಾಗಲೇ ಮನವಿ ಮಾಡಿರುವ ಗ್ರಾಮಸ್ಥರಿಗೆ ವಸತಿ ಸೌಕರ್ಯಕ್ಕಾಗಿ ಗ್ರಾಮ ಪಂಚಾಯಿತಿ ಮೂಲಕ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಸವಲತ್ತುಗಳ ಮಂಜೂರಾತಿ ಪತ್ರವನ್ನು ಜಿಲ್ಲಾಧಿಕಾರಿಯವರು ವಿತರಿಸಿದರು. ಆರೋಗ್ಯ ಇಲಾಖೆ ಹಲವು ಉಪಯುಕ್ತ ಮಳಿಗೆಗಳನ್ನು ತೆರೆದಿತ್ತು.
ಗ್ರಾಮಕ್ಕೆ ಆಗಮಿಸಿದ ಜಿಲ್ಲಾಧಿಕಾರಿಯವರಿಗೆ ಗೊರುಕನ ನೃತ್ಯ ಪ್ರದರ್ಶನದ ಮೂಲಕ ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು.
ಉಪವಿಭಾಗಾಧಿಕಾರಿ ಗೀತಾ ಹುಡೇದ, ಯರಗಂಬಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶೀಲಮ್ಮ, ಉಪಾಧ್ಯಕ್ಷರಾದ ಮಹದೇವಮ್ಮ, ಸದಸ್ಯರಾದ ಸಿದ್ದರಾಜು, ಶಾಂತಮ್ಮ, ಮಹೇಶ್, ಸವಿತಾ, ಭಾಗ್ಯಮ್ಮ, ಸುಧಾ,ಮಲ್ಲಿಕಾರ್ಜುನಸ್ವಾಮಿ, ಶೋಭಾ, ಶಿವಕುಮಾರ್, ತಹಶೀಲ್ದಾರರಾದ ಆನಂದಪ್ಪ ನಾಯಕ, ಇತರರು ಉಪಸ್ಥಿತರಿದ್ದರು.