ಚಾಮರಾಜನಗರ: ಕೊಳ್ಳೇಗಾಲ ತಾಲೂಕಿನ ಶ್ರೀಕ್ಷೇತ್ರ ಚಿಕ್ಕಲ್ಲೂರಿನಲ್ಲಿ ಜನವರಿ ೬ರಿಂದ ೧೦ರವರೆಗೆ ನಡೆಯಲಿರುವ ಜಾತ್ರಾ ಮಹೋತ್ಸವಕ್ಕೆ ಎಲ್ಲ ಸಿದ್ದತೆಗಳನ್ನು ತ್ವರಿತವಾಗಿ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಚಿಕ್ಕಲ್ಲೂರು ಜಾತ್ರಾ ಮಹೋತ್ಸವ ಸಿದ್ದತೆ ಸಂಬಂಧ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾನೂನು ಸುವ್ಯವಸ್ಥೆ ಹಾಗೂ ಪೊಲೀಸ್ ಬಂದೋ ಬಸ್ತ್ ನಿರ್ವಹಣೆಗಾಗಿ ಅಗತ್ಯವಿರುವ ಕಡೆ ಚೆಕ್‌ಪೋಸ್ಟ್‌ಗಳ ಸ್ಥಾಪನೆ, ಬ್ಯಾರಿಕೇಡ್ ವ್ಯವಸ್ಥೆ, ವಾಹನಗಳ ಸಂಚಾರ ಹಾಗೂ ನಿಲುಗಡೆ, ಕಂಟ್ರೋಲ್ ರೂಂ ತೆರೆಯಲು ಕ್ರಮವಹಿಸುವಂತೆ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಯವರು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ. ಶಿವಕುಮಾರ್ ಅವರು ಮಾತನಾಡಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಚೆಕ್ ಪೋಸ್ಟ್‌ಗಳನ್ನು ನಿರ್ಮಿಸಲಾಗುವುದು. ಅಗತ್ಯವಿರುವ ಕಡೆ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜಿಸಿ ಎಲ್ಲಾ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದೆಂದು ತಿಳಿಸಿದರು.
ಜಿಲ್ಲಾಧಿಕಾರಿ ರಮೇಶ್ ಅವರು ಮಾತನಾಡಿ ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಲಿರುವ ಹಿನ್ನೆಲೆಯಲ್ಲಿ ಹೆಚ್ಚು ಸಂಖ್ಯೆಯಲ್ಲಿ ಬಸ್‌ಗಳ ಕಾರ್ಯಾಚರಣೆಯಾಗಬೇಕು. ಹೀಗಾಗಿ ಹೆಚ್ಚಿನ ಬಸ್ಸುಗಳನ್ನು ಎಲ್ಲೆಡೆಯಿಂದ ನಿಯೋಜಿಸಬೇಕೆಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಜಾತ್ರಾ ಸ್ಥಳದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿರಬೇಕು. ಶೌಚಾಲಯಗಳನ್ನು ತೆರೆಯಬೇಕು. ಸ್ವಚ್ಚತಾ ಕಾರ್ಯಗಳು ನಡೆಯಲು ಸಿಬ್ಬಂದಿ ನಿಯೋಜಿಸಬೇಕು. ತಾತ್ಕಾಲಿಕವಾಗಿ ಅಂಗಡಿ ಮಳಿಗೆಗಳನ್ನು ತೆರೆಯಲು ಅನುಮತಿ ನೀಡಬೇಕು. ಜಾತ್ರೆ ಕಾರ್ಯಕ್ಕಾಗಿ ನಿಯೋಜಿತರಾಗುವ ಸೆಕ್ಟರ್ ಅಧಿಕಾರಿಗಳಿಗೆ ಕಚೇರಿ ತೆರೆಯಬೇಕು. ಅಧಿಕಾರಿಗಳ ಕರ್ತವ್ಯ ನಿರ್ವಹಣೆಗೆ ಅಗತ್ಯವಾಗಿರುವ ಎಲ್ಲ ವ್ಯವಸ್ಥೆಗಳನ್ನು ಕೊಳ್ಳೇಗಾಲ ತಾಲೂಕು ಪಂಚಾಯಿತಿ ಅಧಿಕಾರಿಗಳು ಮಾಡುವಂತೆ ಜಿಲ್ಲಾಧಿಕಾರಿಯವರು ಸೂಚಿಸಿದರು.
ಜಾತ್ರಾ ಸ್ಥಳದಲ್ಲಿ ತಾತ್ಕಾಲಿಕವಾಗಿ ಆರೋಗ್ಯ ಕೇಂದ್ರ ತೆರೆಯಬೇಕು. ಸಾಂಕ್ರಾಮಿಕ ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮ ವಹಿಸಬೇಕು. ಇತ್ತೀಚಿನ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವ ಕ್ರಮಗಳಿಗೆ ಮುಂದಾಗಬೇಕು ಎಂದರು.
ಜಾತ್ರಾ ಪ್ರದೇಶದಲ್ಲಿ ವಿದ್ಯುತ್ ದೀಪಗಳ ವ್ಯವಸ್ಥೆ ಮಾಡಬೇಕು. ವಿದ್ಯುತ್ ಪೂರೈಕೆ ನಿರಂತರವಾಗಿರಬೇಕು. ದೇವಸ್ಥಾನ ಸಂಪರ್ಕಿಸುವ ರಸ್ತೆಗಳಲ್ಲಿ ಗುಂಡಿಗಳನ್ನು ಮುಚ್ಚಬೇಕು. ರಸ್ತೆಯಲ್ಲಿ ಧೂಳು ಬಾರದಂತೆ ನೀರು ಸಿಂಪಡಿಸಬೇಕು. ಸಂಚಾರಕ್ಕೆ ತೊಂದರೆಯಾಗದಂತೆ ರಸ್ತೆ ಬದಿಯ ಗಿಡ ಗಂಟಿಗಳನ್ನು ತೆರವು ಮಾಡಬೇಕು. ಜಾತ್ರೆಗೆ ಪೂರಕವಾಗಿರುವ ಇನ್ನಿತರ ಎಲ್ಲ ಅಗತ್ಯ ವ್ಯವಸ್ಥೆಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಿಎಸ್. ರಮೇಶ್ ಅವರು ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಸುಂದರ್ ರಾಜ್, ಉಪವಿಭಾಗಾಧಿಕಾರಿ ಗೀತಾ ಹುಡೇದ, ತಹಶೀಲ್ದಾರರಾದ ಮಂಜುಳಾ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.