ಚಾಮರಾಜನಗರ: ತಾಲ್ಲೂಕಿನ ನಂಜದೇವನಪುರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿನ ಸಿಬ್ಬಂದಿಗಳಿಬ್ಬರಿಗೆ ಕೋರೊನಾ ಸೋಂಕು ದೃಢವಾಗಿದ್ದರಿಂದ ಡೈರಿಯ ವಹಿವಾಟು ಬಂದ್ ಮಾಡಲಾಗಿದೆ.
ನಂಜೇದೇವನಪುರ ಗ್ರಾಮದಲ್ಲಿ 150 ಕ್ಕೂ ಹೆಚ್ಚು ಮಂದಿ ಹಾಲಿನ ಡೈರಿಗೆ ಹಾಲು ಹಾಕುವವರಿದ್ದು, 13 ರಿಂದ 15 ಕ್ಯಾನ್ ನಷ್ಟು ಹಾಲು ಸಂಗ್ರಹವಾಗುತ್ತಿದೆ. ಆದರೆ, ಕಳೆದ ಕೆಲವು ದಿನಗಳಿಂದ ನಂಜೇದೇವನಪುರ ಗ್ರಾಮದಲ್ಲಿ ಕೋರೊನಾ ಸೋಂಕು ಹೆಚ್ಚಾಗಿದ್ದು, ಗ್ರಾಮದ ಡೇರಿಯ ಸಿಬ್ಬಂದಿಗೆ ಕೊರೋನಾ ಬಂದಿರುವ ಹಿನ್ನೆಲೆಯಲ್ಲಿ ಡೈರಿಯನ್ನು ಮೇ 11 ರಿಂದ ಬಂದ್ ಮಾಡಲಾಗಿದೆ.
ಹಾಲಿನ ಡೈರಿಯಲ್ಲಿ ಏಕಾಏಕಿ ರೈತರಿಂದ ಹಾಲು ಹಾಕಿಸಿಕೊಳ್ಳಲು ನಿರಾಕರಿಸಿರುವ ಆಡಳಿತ ಮಂಡಳಿ, ತಾತ್ಕಾಲಿಕವಾಗಿ ಡೈರಿಯನ್ನು ಬಂದ್ ಮಾಡಿದ್ದರಿಂದ ಗ್ರಾಮದ ಹಾಲು ಉತ್ಪಾದಕರು ಕಂಗಲಾಗಿದ್ದಾರೆ. ವರ್ಷದ ಎಲ್ಲ ದಿನಗಳಲ್ಲೂ ರೈತರಿಗೆ ಪ್ರತಿವಾರವೂ ಸರಿಯಾಗಿ ನಿಗದಿತ ಆದಾಯ ಬರುತ್ತಿದ್ದುದು ಹೈನುಗಾರಿಕೆಯಿಂದ. ಈಗ ಏಕಾಏಕಿ ಡೇರಿ ಬಂದ್ ಮಾಡಿರುವುದರಿಂದ ಹಾಲು ಉತ್ಪಾದಕರು ಏನು ಮಾಡಬೇಕು. ನಮ್ಮ ಅಕ್ಕಪಕ್ಕದ ಗ್ರಾಮಗಳಲ್ಲೂ ಹೆಚ್ಚು ಕೋವಿಡ್ ಪ್ರಕರಣ ಪತ್ತೆಯಾಗಿದ್ದರೂ ಅಲ್ಲೆಲ್ಲೂ ಡೈರಿ ಬಂದ್ ಮಾಡಿಲ್ಲ. ಡೈರಿ ಬಂದ್ ಮಾಡುವ ಅಧಿಕಾರ ಇಲ್ಲಿನ ಆಡಳಿತ ಮಂಡಳಿಗೆ ಇಲ್ಲ. ಹಾಗಾಗಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಡೇರಿ ಕಾರ್ಯಾರಂಭ ಮಾಡಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಚಾಮುಲ್ ಅಧ್ಯಕ್ಷ ಎಚ್.ಎಸ್. ನಂಜುಂಡಪ್ರಸಾದ್ ಅವರು ಹಾಲು ಪರೀಕ್ಷೆ ಮಾಡುವ ಸಿಬ್ಬಂದಿ, ಕಾರ್ಯದರ್ಶಿ ಹಾಗೂ ಗ್ರಾಮದ ಕೆಲ ಹಾಲು ಉತ್ಪಾದಕರಿಗೆ ಕೋವಿಡ್ ಪಾಸಿಟಿವ್ ಆಗಿರುವುದರಿಂದ ಚಾಮರಾಜನಗರ ತಾಲ್ಲೂಕಿನ ನಂಜೇದೇವನಪುರ ಗ್ರಾಮದ ಹಾಲು ಉತ್ಪಾದಕರ ಸಂಘದ ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರ ನಿರ್ಧಾರದಂತೆ ಡೈರಿಯನ್ನು ಕೆಲ ದಿನಗಳವರೆಗೆ ಬಂದ್ ಮಾಡಲಾಗಿದೆ. ಪರ್ಯಾಯ ವ್ಯವಸ್ಥೆ ಮಾಡುವಂತೆ ಆಡಳಿತ ಮಂಡಳಿಗೆ ಸೂಚಿಸಲಾಗಿದ್ದು, ಮೇ 17 ರಂದು ಕಾರ್ಯಾರಂಭ ಮಾಡಲಿದೆ ಎಂದು ಹೇಳಿದ್ದಾರೆ.