ಕ್ರಿಸ್ತಶಕ ೧೯೧೩ ಆಸುಪಾಸಿನಲ್ಲಿ ಕರ್ನಾಟಕ-ಆಂಧ್ರ ಗಡಿನಾಡಿನ ಮಧ್ಯಮ ವರ್ಗದ ಮಡಿವಂತ ಕುಟುಂಬದಲ್ಲಿ ಜನಿಸಿದ ಕಮಲಾಬಾಯಿ ತಮ್ಮ ೧೪ನೇ ವಯಸ್ಸಿಗೆ ನಾಟಕ ಮತ್ತು ಚಲನಚಿತ್ರ ಎರಡೂ ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಮಾಡಿದರು. ಕನ್ನಡದ ಪ್ರಪ್ರಥಮ ಹೀರೋಯಿನ್ ಆಗಬೇಕಾಗಿದ್ದ ಹಿರಿಯ ನಟಿ ಲಕ್ಷ್ಮೀಬಾಯಿಯವರ ಸ್ವಂತ ಸಹೋದರಿ ಕಮಲಾಬಾಯಿ! ಇವರು ರಂಗಭೂಮಿಗೆ ಎಂಟ್ರಿಕೊಟ್ಟ ಹೊಸತರಲ್ಲೆ ಕನ್ನಡದ ಚೊಚ್ಚಲ ಟಾಕೀ ಸಿನಿಮ ಸತಿ ಸುಲೋಚನ ಚಿತ್ರದ ಹೀರೋ ಆಗಬೇಕಿದ್ದು ನಂತರ ವಂಚಿತರಾದ ಖ್ಯಾತ ಹಿರಿಯ ನಟ ಆರ್.ನಾಗೇಂದ್ರರಾಯರ ಕೈ ಹಿಡಿದು ಹದಿವಯಸ್ಸಿನಲ್ಲೆ ಗೃಹಿಣಿಯಾದರು. ತಮ್ಮ ಸಹೋದರಿ ಹಾಗೂ ಸಹೋದ್ಯೋಗಿಯೂ ಆಗಿದ್ದ ಮತ್ತೊಬ್ಬ ಖ್ಯಾತ ಹಿರಿಯ ನಟಿ ಲಕ್ಷ್ಮೀಬಾಯಿ ಅವರಂತೆ ಇವರೂ ಸಹ ಕನ್ನಡ ಚಿತ್ರದ ಎರಡನೇ ಹೀರೋಯಿನ್ ಪಟ್ಟದಿಂದ ವಂಚಿತರಾದ ನತದೃಷ್ಟ ಕಲಾವಿದೆ! ಆದರೆ ತಾವು ಬಹಳವಾಗಿ ನಂಬಿದ್ದ ತಮ್ಮ ಪತಿ-ಸಹೋದ್ಯೋಗಿ ಹಾಗೂ ಗಾಡ್ ಫಾದರ್ ಆಗಿದ್ದ ಆರ್.ನಾಗೇಂದ್ರರಾವ್ ಬೆಂಬಲದಿಂದ ಬಹುಬೇಗ ಕೀರ್ತಿಶಿಖರ ಏರಿದರು. ತಮ್ಮ ಪತಿಯ ಬಳಿ ಸಾಕಷ್ಟು ಆರ್ಥಿಕ ಅನುಕೂಲ ಇಲ್ಲದೆ ಹೋದ್ದರಿಂದ ಕನ್ನಡದ ಚೊಚ್ಚಲ ವಾಕ್‌ಚಿತ್ರದ ಹೀರೋ-ಹೀರೋಯಿನ್ ಆಗುವ ಈ ಮೂವರ ಕನಸು ಅಂದು ನನಸಾಗಲೇ ಇಲ್ಲ.

ಭಾರತೀಯ ಸಂಪ್ರದಾಯ ಸಂಸ್ಕೃತಿ ಹಾಗೂ ಮಡಿವಂತಿಕೆ ಇವುಗಳಿಂದಲೆ ತುಂಬಿಹೋಗಿದ್ದ ಆ ಕಾಲದಲ್ಲಿ ಮಹಿಳಾ ಕಲಾವಿದೆ ದೊರಕದ ತೀವ್ರ ಬರಗಾಲದಲ್ಲೂ ಪ್ರಮುಖ ನಟಿಯಾಗಿ ಮೆರೆದರು. ಕಮಲಾಬಾಯಿ ಅನೇಕ ಸಾಮಾಜಿಕ ಪೌರಾಣಿಕ ಐತಿಹಾಸಿಕ ನಾಟಕ ಮತ್ತು ಸಿನಿಮ ಎರಡರಲ್ಲು ವಿಧವಿಧ ಪಾತ್ರಗಳಲ್ಲಿ ಕಾಣಿಸಿಕೊಂಡು ತಮ್ಮದೇ ವಿಶೇಷ ಛಾಪು ಮೂಡಿಸಿದ್ದರು. ಪ್ರತಿಯೊಂದು ಚಿತ್ರದಲ್ಲಿ ಏನಾದರೊಂದು ವಿಶಿಷ್ಟವಾದ ಅಭಿನಯ ಕೌಶಲ್ಯದ ಮೂಲಕ ಪ್ರೇಕ್ಷಕರನ್ನು ಹಿಡಿದಿಡುತ್ತಿದ್ದರು. ತತ್ಪರಿಣಾಮ ಎಲ್ಲ ವಯಸ್ಸಿನ ಕಲಾರಾಧಕರ ಮತ್ತು ಎಲ್ಲ ವರ್ಗದ ಕಲಾರಸಿಕರ ತನುಮನ ಗೆದ್ದಿದ್ದರು! ಅಷ್ಟೇ ಏಕೆ ಇವತ್ತಿನಂತೆ ಅಭಿಮಾನಿಗಳ ಸಂಘ ಸಂಸ್ಥೆ ಭರಾಟೆ ಇ[ಒ]ಲ್ಲದ ಆಕಾಲದಲ್ಲಿ ಕಂಡು ಕೇಳರಿಯದ ಇವರ ಅಭಿಮಾನಿಗಳ ಗುಂಪು ಅಲ್ಲಲ್ಲಿ ಹುಟ್ಟಿಕೊಂಡಿದ್ದು ಇತಿಹಾಸ!

ಕಮಲಾಬಾಯಿ ತಮಗೆ ದೊರಕಿದ ಪ್ರತಿಯೊಂದು ಪಾತ್ರವನ್ನು ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ನಿರ್ವಹಿಸಿ ಆಯಾಯ ಪಾತ್ರಕ್ಕೂ ನಿರ್ಮಾಪಕ-ನಿರ್ದೇಶಕ-ನಾಯಕನಟ-ಪ್ರೇಕ್ಷಕವರ್ಗಕ್ಕೂ ಅವರವರ ಹಣ ಮತ್ತು ಸಮಯದ ಮೌಲ್ಯಕ್ಕೆ ಸಂಪೂರ್ಣ ನ್ಯಾಯ ದೊರಕಿಸಿ ಕೊಡುತ್ತಿದ್ದ ಸಮರ್ಪಕ ನಟಿ. ಚಲನಚಿತ್ರ-ನಾಟಕ-ಪತ್ರಿಕಾ ರಂಗದವರಿಂದ ಮೊದಲ್ಗೊಂಡು ತಮ್ಮ ಅಭಿಮಾನಿ/ರಸಿಕ ಸಮುದಾಯದವರೆಗೆ ಪ್ರತಿಯೊಬ್ಬರಿಂದ ಸಾರ್ವತ್ರಿಕ ಬಹಿರಂಗ ಸಭೆ ಸಮಾರಂಭಗಳಲ್ಲೂ ಬಹಿರಂಗವಾಗಿ ಶಹಬ್ಬಾಸ್‌ಗಿರಿ ಪಡೆಯುತ್ತಿದ್ದ ಸರಳ ಸಜ್ಜನ ಸಹಜತೆಯ ತುಂಬಿದಕೊಡ ಕಮಲಾಬಾಯಿ ಓರ್ವ ಸಾರ್ಥಕ ನಟಿ ಎನಿಸಿದರು. ಅತ್ಯುತ್ತಮ ಅಭಿನಯಕ್ಕು ಸಹ ಪ್ರಶಸ್ತಿ ಎಂಬುದು ಕನಸಾಗಿದ್ದ ಆಗಿನ ಕಾಲದಲ್ಲಿ ಇಂಥ ಕಲಾವಿದರನ್ನು ಸರಿಯಾಗಿ ಸಮರ್ಪಕವಾಗಿ ಗುರುತಿಸುತ್ತಿದ್ದ ರಾಜ ಮಹಾರಾಜರಿಂದ ಕಲೆಕ್ಟರಿಂದ ಸಾಹುಕಾರ್‌ರಿಂದ ಹಲವಾರು ಬಾರಿ ಪ್ರಶಸ್ತಿ ಬಿರುದು ಬಹುಮಾನ ಪುರಸ್ಕಾರ ಪಡೆದ ಧೀಮಂತ ಕಲಾವಿದೆ. ಲಕ್ಷ್ಮೀಬಾಯಿ ಮತ್ತು ಕಮಲಾಬಾಯಿ ಜೋಡಿ ನಟಿಯರು ಒಟ್ಟು ಇಪ್ಪತ್ತಕ್ಕೂ ಹೆಚ್ಚು ಕನ್ನಡ ಮತ್ತು ತೆಲುಗು ಚಿತ್ರಗಳಲ್ಲಿ ನಟಿಸಿದ್ದರು. ಇವರು ಅಚ್ಚ ಕನ್ನಡತಿಯರು ಮಾತ್ರವಲ್ಲ ಚಂದನವನ ಕಂಡ ಬಲು ಅಪರೂಪದ ಒಡಹುಟ್ಟಿದ ಸಹೋದರಿಯರೂ ಹೌದು! ಇವರ ನಂತರದಲ್ಲಿ ಸ್ಯಾಂಡಲ್‌ವುಡ್ ಕಂಡಂಥ ಮತ್ತೊಂದು ಸಹೋದರಿ ಜೋಡಿ: ಪಂಡರಿಬಾಯಿ ಮತ್ತು ಮೈನಾವತಿ ನಟಿಮಣಿಯರು! ಬಹುಶಃ ಸೋದರಿ ಲಕ್ಷ್ಮೀಬಾಯಿ ನಿಧನರಾಗುವ ಆಸುಪಾಸು ಅವಧಿಯಲ್ಲಿ ತಮ್ಮ ೬೫ನೇ ವಯಸ್ಸಲ್ಲಿ ಅನಾರೋಗ್ಯದಿಂದ ೧೯೭೮ರಲ್ಲಿ ವಿಧಿವಶರಾದರು.
ಕಮಲಾಬಾಯಿ ನಟಿಸಿದ ಚಿತ್ರಗಳು:-
ಸುಭದ್ರಾ, ಸತ್ಯಹರಿಶ್ಛಂದ್ರ, ಹೇಮರೆಡ್ಡಿಮಲ್ಲಮ್ಮ, ಮಹಾತ್ಮಕಬೀರ್, ಭಕ್ತರಾಮದಾಸ, ಗೋರಾಕುಂಬಾರ, ಚಂಚಲಕುಮಾರಿ, ಶ್ರೀರಾಮಪೂಜಾ, ಶಿವಶರಣೆನಂಬೆಕ್ಕ, ಭಕ್ತಮಲ್ಲಿಕಾರ್ಜುನ, ಗಂಧರ್ವಕನ್ಯೆ, ಜಾತಕಫಲ, ಭಕ್ತಮಾರ್ಕಂಡೇಯ, ಜಗಜ್ಯೋತಿಬಸವೇಶ್ವರ, ಮುಂತಾದವು. ಕಮಲಾಬಾಯಿ ನಟಿಸಿದ ಮೊಟ್ಟಮೊದಲ ಚಿತ್ರ ೧೯೩೭ರಲ್ಲಿ ಬಿಡುಗಡೆಯಾದ ’ಪುರಂದರದಾಸರು’. ಇವರ ಕಟ್ಟಕಡೆಯ ಫ಼ಿಲಂ ೧೯೭೧ರಲ್ಲಿ ತೆರೆಕಂಡ ಪದ್ಮಿನಿ ಪಿಕ್ಛರ್ಸ್‌ರವರ ಕನ್ನಡದ ’ಅಳಿಯಗೆಳೆಯ’.

ಕುಮಾರಕವಿ ಬಿ.ಎನ್.ನಟರಾಜ್
೯೦೩೬೯೭೬೪೭೧
ಬೆಂಗಳೂರು ೫೬೦೦೭೨