ಚಾಮರಾಜನಗರ: ಘನತ್ಯಾಜ್ಯ ನಿರ್ವಹಣೆಗಾಗಿ ಗ್ರಾಮ ಪಂಚಾಯಿತಿಗಳೊಂದಿಗೆ ಒಪ್ಪಂದ ಮಾಡಿಕೊಂಡಿರುವ ಸಂಜೀವಿನಿ ಮಹಿಳಾ ಸ್ವ-ಸಹಾಯ ಸಂಘಗಳ ಮಹಿಳೆಯರಿಗೆ ಸಾಮರ್ಥ್ಯಾಭಿವೃದ್ದಿ ತರಬೇತಿ ಕಾರ್ಯಾಗಾರ ನಡೆಯಿತು.
ನಗರದ ಜಿಲ್ಲಾ ಆರೋಗ್ಯ ಇಲಾಖೆ ಸಭಾಂಗಣದಲ್ಲಿ ಗುರುವಾರ (ಜ.೧೯) ಜಿಲ್ಲಾ ಪಂಚಾಯತ್, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಹಸಿರು ದಳ ಸಂಸ್ಥೆ, ಸ್ವಚ್ಛ ಭಾರತ್ ಮಿ?ನ್ (ಗ್ರಾ) ಯೋಜನೆ ಹಾಗೂ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಎನ್.ಆರ್.ಎಲ್.ಎಂ) ವತಿಯಿಂದ ಆಯೋಜಿಸಿದ್ದ ಕಾರ್ಯಗಾರವನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯಿತ್ರಿ ಅವರು ಗಿಡಕ್ಕೆ ನೀರೆಯುವ ಮೂಲಕ ಉದ್ಘಾಟಿಸಿದರು.
ಇದೇ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರು ಗ್ರಾಮ ಪಂಚಾಯಿತಿಯಲ್ಲಿ ಘನತ್ಯಾಜ್ಯ ನಿರ್ವಹಣೆ ಘಟಕದ ಕೆಲಸವನ್ನು ನಿರ್ವಹಿಸುವುದರ ಕುರಿತು ಸಲಹೆಗಳನ್ನು ನೀಡಿದರು.
ಜಿಲ್ಲೆಯ ಆಯ್ದ ಗ್ರಾಮ ಪಂಚಾಯಿತಿಗಳಲ್ಲಿ ಹಸಿ ಮತ್ತು ಒಣ ತ್ಯಾಜ್ಯಗಳನ್ನು ಮನೆ ಮನೆಗಳಿಂದ ಸಂಗ್ರಹಿಸಿ, ವಿಂಗಡಿಸಿ ಹೇಗೆ ಸೂಕ್ತವಾಗಿ ವಿಲೇವಾರಿ ಮಾಡುವುದು ಎಂಬ ಬಗ್ಗೆ ಗ್ರಾಮ ಪಂಚಾಯಿತಿಗಳಲ್ಲಿನ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಒಕ್ಕೂಟಗಳ ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರಿಗೆ ತಮ್ಮ ಗ್ರಾಮ ಪಂಚಾಯಿತಿಗಳಲ್ಲಿ ಘನ ತ್ಯಾಜ್ಯಗಳನ್ನು ಸಂಗ್ರಹಿಸುವ ಕುರಿತು ಮೈಸೂರಿನ ಹಸಿರುದಳ ಸಂಸ್ಥೆ, ಸ್ವಚ್ಛ ಭಾರತ್ ಮಿಷನ್ ವತಿಯಿಂದ ತರಬೇತಿ ನೀಡಲಾಯಿತು.
ಗ್ರಾಮ ಪಂಚಾಯಿತಿಗಳಲ್ಲಿ ಘನ ತ್ಯಾಜ್ಯಗಳನ್ನು ಸಂಗ್ರಹಿಸಲು, ವಿಂಗಡಿಸಲು ಈಗಾಗಲೇ ಗ್ರಾಮ ಪಂಚಾಯಿತಿಗಳೊಡನೆ ಒಕ್ಕೂಟದ ಸದಸ್ಯರು ಒಡಂಬಡಿಕೆ ಮಾಡಿಕೊಂಡಿದ್ದು, ಘನ ತ್ಯಾಜ್ಯ ನಿರ್ವಹಣೆಯಲ್ಲಿ ಉಂಟಾಗಬಹುದಾದ ಸಮಸ್ಯೆಗಳನ್ನು ತಮ್ಮ ಹಂತದಲ್ಲಿ ಹೇಗೆ ಬಗೆಹರಿಸಿಕೊಂಡು ಮುನ್ನಡೆಯಬೇಕು ಎಂಬುದರ ಬಗ್ಗೆ ಗ್ರಾಮದ ಅಭಿವೃದ್ದಿಗೆ ಸಹಕಾರ ನೀಡುವ ಬಗ್ಗೆ ಹಾಗೂ ತಮ್ಮ ವೈಯಕ್ತಿಕ ಆರ್ಥಿಕ ಅಭಿವೃದ್ದಿಗೆ ಸಕ್ರಿಯವಾಗಿ ಭಾಗವಹಿಸುವ ಕುರಿತು ಪ್ರಮುಖ ಅಂಶಗಳನ್ನು ವಿವರಿಸುವುದರ ಮೂಲಕ ಹಸಿರು ದಳದ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳು ಸಂರ್ಪೂಣವಾಗಿ ಅರಿವು ಮೂಡಿಸಿದರು.
ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರು ಹಾಗೂ ಸ್ವಚ್ಛ ಭಾರತ್ ಮಿಷನ್ ಯೋಜನೆಯ ಜಿಲ್ಲಾ ನೋಡಲ್ ಅಧಿಕಾರಿ ಕೆ.ಬಿ. ಪ್ರಭುಸ್ವಾಮಿ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.
