ಗ್ರಾಪಂ ಸದಸ್ಯರ ಉತ್ತಮ ಸ್ಥಾನಮಾನಕ್ಕಾಗಿ ಮತ ನೀಡಿ: ವಾಟಾಳ್ ನಾಗರಾಜುಗ್ರಾಪಂ ಸದಸ್ಯರ ಉತ್ತಮ ಸ್ಥಾನಮಾನಕ್ಕಾಗಿ ಮತ ನೀಡಿ: ವಾಟಾಳ್ ನಾಗರಾಜು

ಗ್ರಾಪಂ ಸದಸ್ಯರ ಉತ್ತಮ ಸ್ಥಾನಮಾನಕ್ಕಾಗಿ ಮತ ನೀಡಿ: ವಾಟಾಳ್ ನಾಗರಾಜು

ಗುಂಡ್ಲುಪೇಟೆ: ಗ್ರಾಪಂಗೆ ಸಮರ್ಪಕ ಅನುದಾನ ಹಾಗೂ ಸದಸ್ಯರಿಗೆ ಉತ್ತಮ ಸ್ಥಾನಮಾನ ದೊರಕಬೇಕಾದರೆ ವಿಧಾನ ಪರಿಷತ್ ಚುನಾವಣೆಯಲ್ಲಿ ನನಗೆ ಮೊದಲ ಪ್ರಾಶಸ್ತ್ಯ ಮತ ನೀಡಬೇಕೆಂದು ವಾಟಾಳ್ ಪಕ್ಷದ ಅಧ್ಯಕ್ಷರಾದ ವಾಟಾಳ್ ನಾಗರಾಜು ಮನವಿ ಮಾಡಿದರು.

ಪಟ್ಟಣದ ರಾಮ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರವು ಗ್ರಾಪಂಗಳಿಗೆ ಸರಿಯಾದ ರೀತಿಯಲ್ಲಿ ಅನುದಾನ ನೀಡದ ಹಿನ್ನೆಲೆ ಇಂದು ಪಂಚಾಯಿತಿಗಳು ತೊಂದರೆ ಅನುಭವಿಸುತ್ತಿವೆ. ಬಂದಿರುವ ಅಲ್ಪಸ್ವಲ್ಪ ಹಣ ಖರ್ಚು ಮಾಡಲು ಸದಸ್ಯರು ಪಿಡಿಓಗಳನ್ನ ಕೇಳಬೇಕಿದೆ. ಆದ್ದರಿಂದ ಗ್ರಾಪಂ ಸದಸ್ಯರಿಗೆ ವಿವಿಧ ಕೆಲಸಗಳಿಗೆ ಕೊಡುವ ಹಣವು ನೇರವಾಗಿ ಅವರ ಕೈ ಸೇರುವಂತಾಗಬೇಕು. ಇದಕ್ಕೆ ಯಾರ ಒತ್ತಾಸೆಯೂ ಇರಬಾರದು. ಈ ನಿಟ್ಟಿನಲ್ಲಿ ಕೆಲಸ ನಿರ್ವಹಿಸಲು ವಾಟಾಳ್ ಪಕ್ಷ ಬೆಂಬಲಿಸಬೇಕೆಂದು ಕೋರಿದರು.

ಎಂಪಿ, ಎಎಲ್‍ಎಗಳು ಗ್ರಾಮಸ್ಥರ ಕೈಗೆ ಸದಾ ಕಾಲ ಸಿಕ್ಕುವುದಿಲ್ಲ. ಜನರ ಮಧ್ಯೆ ಇರುವವರು ಗ್ರಾಪಂ ಸದಸ್ಯರು. ಅವರ ಗೌರವ ಕಾಪಾಡುವ ಕೆಲಸವಾಗಬೇಕಾಗಿದೆ. ನಾನು ಗೆದ್ದ ಮರುದಿನವೇ ಭಾರಿ ಹೋರಾಟ ಮಾಡಿ ಗ್ರಾಪಂ ಮತ್ತು ಸದಸ್ಯರ ಪರ ನಿಲ್ಲಲಾಗುವುದು. ವಾಟಾಳ್ ಒಬ್ಬ ಆಯ್ಕೆಯಾದರೆ 200 ಶಾಸಕರಿಗೆ ಸಮ. ನಿಮ್ಮ ಕೆಲಸಗಳಿಗೆ ಸದಾ ಸ್ಪಂದಿಸಲು ಸಿದ್ದವಿದ್ದು, ಎಲ್ಲರ ಧ್ವನಿಯಾಗಿ ಮೇಲ್ಮನೆಯಲ್ಲಿ ನಿಲ್ಲುತ್ತೇನೆ. ಆದ್ದರಿಂದ ಯಾವ ಒತ್ತಡಕ್ಕು ಮಣಿಯದೆ ಮತ ನೀಡಬೇಕು ಎಂದು ತಿಳಿಸಿದರು.

ಇತರೆ ಪಕ್ಷದವರು ಹಣ ನೀಡಿ ಚುನಾವಣೆ ಗೆಲ್ಲಲು ಹೋಗುತ್ತಿದ್ದಾರೆ. ಆದರೆ ನಾನು ಯಾವುದೇ ಅನ್ಯ ಮಾರ್ಗದಲ್ಲಿ ಹಣ ಸಂಪಾದಿಸಿಲ್ಲ. ಆದ್ದರಿಂದ ಯಾರಿಗೂ ಹಣ ಕೊಟ್ಟು ಮತ ಕೇಳುವುದಿಲ್ಲ. ಇದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ಮೈಸೂರು-ಚಾಮರಾಜನಗರದಿಂದ ಗೆಲ್ಲುವ ಯಾವುದೇ ಅಭ್ಯರ್ಥಿಗೂ ಸರ್ಕಾರವನ್ನು ಪ್ರಶ್ನಿಸಿ ಅನುದಾನ ತರುವ ಮತ್ತು ಜನರ ಪರ ಕೆಲಸ ಮಾಡುವ ವ್ಯವದಾನವಿಲ್ಲ ಎಂದು ಟೀಕಿಸಿದರು.

ಈ ಸಂದರ್ಭದಲ್ಲಿ ವಾಟಾಳ್ ಪಕ್ಷದ ಮುಖಂಡರಾದ ಪಾರ್ಥಸಾರಥಿ, ಶಿವಲಿಂಗಮೂರ್ತಿ, ಅಜಯ್, ಬಸವಣ್ಣ ಸೇರಿದಂತೆ ಗ್ರಾಪಂ ಹಾಗೂ ಪುರಸಭೆ ಸದಸ್ಯರು ಇದ್ದರು.