ಚಾಮರಾಜನಗರ: ಸಮಾಜದಲ್ಲಿ ಪ್ರತಿಯೊಬ್ಬರಿಗೂ ಗೌರವ ನೀಡಿ, ಸಮಾನವಕಾಶ ಕಲ್ಪಿಸುವುದರಲ್ಲಿ ಮಾನವ ಹಕ್ಕುಗಳ ಸಾರ್ಥಕತೆ ಅಡಗಿದೆ ಎಂದು ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಲೋಕಪ್ಪ ಅವರು ಅಭಿಪ್ರಾಯಪಟ್ಟರು.
ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾಮಾಜಿಕ ಅಸಮಾನತೆ, ಲಿಂಗತ್ವ ತಾರತಮ್ಯಗಳನ್ನು ಬದಿಗೊತ್ತಿ ಪ್ರತಿಯೊಬ್ಬರು ಸಾಮಾಜಿಕ ಮುಂಚೂಣಿಯಲ್ಲಿ ನಿಂತು ಇತರರಿಗೂ ಸಮಾನ ಅವಕಾಶಗಳನ್ನು ಒದಗಿಸುವುದು ಮಾನವ ಹಕ್ಕು ದಿನದ ಪ್ರಾಮುಖ್ಯತೆಯಾಗಿದೆ. ಮನುಷ್ಯ ಮನುಷ್ಯನನ್ನು ಗೌರವಿಸಬೇಕು. ಮಾನವ ಹಕ್ಕುಗಳು ಸಾಮಾಜಿಕ ಬದಲಾವಣೆಗೆ ಮುನ್ನುಡಿಯಾಗಬೇಕು. ಮಾನವ ಹಕ್ಕುಗಳಿಗೆ ಬಹಳ ಹಿಂದಿನಿಂದಲೂ ಪ್ರಾತಿನಿಧ್ಯವಿದೆ. ಬುದ್ಧ, ಬಸವ, ಅಂಬೇಡ್ಕರ್. ಕನಕದಾಸರು ಸೇರಿದಂತೆ ಎಲ್ಲಾ ಸಾಧು ಸಂತರು, ವಿಚಾರವಾಧಿಗಳು ಮಾನವ ಹಕ್ಕುಗಳನ್ನು ಪ್ರತಿಪಾದಿಸುತ್ತಲೇ ಬಂದಿದ್ದಾರೆ ಎಂದರು.
ಭಾರತಕ್ಕೆ ಪರಕೀಯರ ಆಗಮನ ಹಾಗೂ ವಿಶ್ವದಲ್ಲಿ ಸಂಭವಿಸಿದ ೨ ಮಹಾಯುದ್ಧಗಳಿಂದ ಶೋಷಣೆ ಮತ್ತು ದೌರ್ಜನ್ಯಗಳು ಮಿತಿಮೀರಿದ್ದ ಹಿನ್ನೆಲೆಯಲ್ಲಿ ನಾಗರಿಕರನ್ನು ಸಂಕಷ್ಟದಿಂದ ರಕ್ಷಿಸುವ ನಿಟ್ಟಿನಲ್ಲಿ ೧೯೪೮ರಲ್ಲಿ ಮಾನವ ಹಕ್ಕುಗಳ ಆಯೋಗ ರಚನೆಯಾಯಿತು. ಈ ಕಾಲಘಟ್ಟದಲ್ಲಿಯೇ ಸಂವಿಧಾನ ರಚನೆಗೂ ಅಡಿಪಾಯ ಹಾಕಲಾಯಿತು. ಮಾನವ ಹಕ್ಕುಗಳ ಹಿತರಕ್ಷಣೆಯ ಆಧಾರದಲ್ಲಿ ಸಂವಿಧಾನ ರಚಿತವಾಗಿದೆ ಎಂದು ಲೋಕಪ್ಪ ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಶಂಕರಾಚಾರ್ಯರು ಎಲ್ಲರೂ ಬ್ರಹ್ಮಸ್ವರೂಪಿಗಳು ಎಂದಿದ್ದಾರೆ. ಬಸವಣ್ಣನವರು ಇವನಾರವ ಎನ್ನದೇ ಇವ ನಮ್ಮವ ಎನ್ನುವಂತೆ, ಕನಕದಾಸರು ಕುಲ ಕುಲವೆಂದು ಹೊಡೆದಾಡದಿರಿ, ಈ ಸರಳ ತತ್ವಗಳನ್ನು ಸಮಾಜದ ಎಲ್ಲರೂ ಅರಿತು ಸಮಾಜಕ್ಕೆ ನಮ್ಮ ಕೊಡುಗೆ ಏನು? ಎಂಬುದನ್ನು ಮನಗಾಣಬೇಕು. ಮೇಲು-ಕೀಳು, ಕರಿಯ-ಬಿಳಿಯ ತಾರತಮ್ಯಗಳನ್ನು ಕಿತ್ತೊಗೆದು ಪ್ರತಿಯೊಬ್ಬರನ್ನು ಗೌರವ ಆದರಗಳಿಂದ ಕಾಣಬೇಕು. ಸಮಾನವಕಾಶಗಳಿಂದ ಇತರರ ನಿರೀಕ್ಷೆಗಳನ್ನು ತುಂಬಬೇಕು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ. ಶ್ರೀಧರ ಅವರು ಮಾತನಾಡಿ ಸಮಾಜದಲ್ಲಿ ಎಲ್ಲರಿಗೂ ಶಾಂತಿ, ನೆಮ್ಮದಿಯಿಂದ ಜೀವಿಸಲು ಮಾನವ ಹಕ್ಕುಗಳು ಅವಶ್ಯವಾಗಿವೆ. ಮಾನವ ಹಕ್ಕುಗಳ ಬಗ್ಗೆ ಜನರಿಗೆ ಅರಿವು ಕೂಡ ಅಷ್ಟೆ ಅಗತ್ಯವಾಗಿದೆ. ವಿಶ್ವಾದ್ಯಂತ ೫೦೦ಕ್ಕೂ ಹೆಚ್ಚು ಭಾಷೆಗಳಲ್ಲಿ ಮಾನವ ಹಕ್ಕುಗಳು ರಚಿತವಾಗಿದೆ. ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಸಂವಿಧಾನದ ಆಧಾರಸ್ಥಂಭವಾಗಿದ್ದರೆ ಅದರ ಮೂಲ ಮಾನವ ಹಕ್ಕುಗಳೇ ಆಗಿವೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯಿತ್ರಿ ಅವರು ಮಾತನಾಡಿ ಮನುಷ್ಯನಿಗೂ ಘನತೆ, ಗೌರವವಿದೆ. ಲಿಂಗಾಧಾರಿತ ಸಮಾಜದಲ್ಲಿ ಪುರುಷ, ಮಹಿಳೆಯರು, ಮಕ್ಕಳು ಹಾಗೂ ತೃತೀಯ ಲಿಂಗಿಗಳು ಸೇರಿದಂತೆ ಎಲ್ಲರನ್ನು ಸಾಮಾಜಿಕವಾಗಿ ಹಾಗೂ ವೈಯಕ್ತಿಕವಾಗಿ ಗೌರವಿಸುವುದನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಡಾ. ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾದ ಪಿ. ಮಾದೇಶ್ ಅವರು ಮಾತನಾಡಿ ಪ್ರಕೃತಿದತ್ತವಾದ ಸಂಪತ್ತು ಎಲ್ಲರಿಗೂ ಸಮಾನವಾಗಿ ದೊರೆಯಬೇಕು. ಮಾನವ ಹಕ್ಕುಗಳು ಉಲ್ಲಂಘನೆಯಾಗದಂತೆ ಜಾಗೃತಿ ಕಾರ್ಯಕ್ರಮಗಳನ್ನು ಏರ್ಪಡಿಸಿ ಎಲ್ಲರಲ್ಲಿಯೂ ಅರಿವು ಮೂಡಿಸಬೇಕು. ಬುದ್ಧ, ಬಸವ, ಅಂಬೇಡ್ಕರ್ ಅವರ ಹೋರಾಟದ ಫಲವಾಗಿ ಮಾನವ ಹಕ್ಕುಗಳು ರಚಿತವಾಗಿವೆ. ಈ ಬಗ್ಗೆ ವಿದ್ಯಾರ್ಥಿಗಳು ಹೆಚ್ಚಿನ ತಿಳಿವಳಿಕೆ ಹೊಂದಬೇಕು ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಉಮ್ಮತ್ತೂರು ಇಂದುಶೇಖರ್ ಅವರು ಮಾತನಾಡಿ ಪ್ರತಿಯೊಬ್ಬರಿಗೂ ಜೀವಿಸುವ ಹಕ್ಕಿದೆ. ಆದರೆ ಸಾಯುವ ಹಕ್ಕಿಲ್ಲ. ಆತ್ಮಹತ್ಯೆ ಮಾನವ ಹಕ್ಕು ಉಲ್ಲಂಘನೆಯಾಗಲಿದೆ. ಮಾನವ ಹಕ್ಕು ಉಲ್ಲಂಘನೆಯಿಂದ ಉಳ್ಳವರಿಗಿಂತ ಬಡವರಿಗೆ ತೊಂದರೆಯಾಗಲಿದೆ. ಅಧಿಕಾರಿಗಳು, ಸಿಬ್ಬಂದಿ ಮಾನವ ಹಕ್ಕುಗಳ ಬಗ್ಗೆ ಅರಿತು ನ್ಯಾಯಯುತವಾಗಿ ಕರ್ತವ್ಯಗಳನ್ನು ಪಾಲಿಸಬೇಕು ಎಂದರು.
ಇದೇ ವೇಳೆ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕುರಿತು ಜಿಲ್ಲೆಯ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಭಾಷಣ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಜಿಲ್ಲಾಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.