ಚಾಮರಾಜನಗರ: ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಜಿಲ್ಲೆಯ ವಿದ್ಯಾರ್ಥಿಗಳ ಉತ್ತಮ ಸಾಧನೆಗಾಗಿ ಗುಣಾತ್ಮಕ ಶಿಕ್ಷಣದ ಜೊತೆಗೆ ಮಕ್ಕಳ ಭೌದ್ದಿಕ ಸಾಮರ್ಥ್ಯ ಹೆಚ್ಚಿಸಲು ಶಿಕ್ಷಕರು ನೂತನ ಕಲಿಕಾ ವಿಧಾನಗಳನ್ನು ಅಳವಡಿಸಿಕೊಳ್ಳುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯತ್ರಿ ಅವರು ಸಲಹೆ ಮಾಡಿದರು.
ನಗರದ ಜಿಲ್ಲಾಡಳಿತ ಭವನದ ಅವರಣದಲ್ಲಿರುವ ವರನಟ ಡಾ. ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿಂದು ಜಿಲ್ಲಾ ಪಂಚಾಯತ್ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಹಯೋಗದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷಾ ಸಿದ್ದತೆಗಳ ಕುರಿತು ಜಿಲ್ಲೆಯ ಪ್ರೌಢಶಾಲಾ ಮುಖ್ಯ ಶಿಕ್ಷಕರೊಂದಿಗೆ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಳೆದ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಚಾಮರಾಜನಗರ ಶೇ. ೮೭.೭೦, ಗುಂಡ್ಲುಪೇಟೆ ಶೇ. ೯೦.೬೨, ಹನೂರು ಶೇ. ೯೬.೮೯, ಕೊಳ್ಳೇಗಾಲ ಶೇ. ೯೫.೦೬ ಮತ್ತು ಯಳಂದೂರು ಶೇ. ೯೫.೭೫ ಸೇರಿದಂತೆ ಒಟ್ಟಾರೆ ಶೇ. ೯೨.೧೩ ರಷ್ಟು ಸಾಧನೆಗೈದು ಜಿಲ್ಲೆ ‘ಎ’ ಗ್ರೇಡ್ ಪಡೆದುಕೊಂಡಿತ್ತು. ಈ ಬಾರಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ. ೧೦೦ರಷ್ಟು ಪ್ರಗತಿ ಸಾಧನೆಗೆ ಶಿಕ್ಷಕರು ಮಕ್ಕಳ ಕಲಿಕಾ ಸಾಮರ್ಥ್ಯಕ್ಕೆ ಅನುಗುಣವಾಗಿ ವಿಶೇಷ ಪರಿಶ್ರಮ ಹಾಕಬೇಕು ಎಂದರು.
ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳ ಫಲಿತಾಂಶ ಶೇ. ೯೦, ಅನುದಾನ ರಹಿತ ಹಾಗೂ ಅನುದಾನ ಸಹಿತ ಶಾಲೆಗಳದ್ದು ಶೇ. ೯೬ ಆಗಿದೆ. ತಾಲೂಕುವಾರು ಅಂಕಿಅಂಶದಲ್ಲಿ ಹನೂರು ಪ್ರಥಮ ಸ್ಥಾನದಲ್ಲಿದ್ದರೆ ಚಾಮರಾಜನಗರ ಕೊನೆಯ ಸ್ಥಾನ ಪಡೆದಿದೆ. ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಶೇ. ೧೦೦ರಷ್ಟು ಪ್ರಗತಿ ಸಾಧಿಸಲು ಮುಂದಾಗಬೇಕು. ಗುಣಾತ್ಮಕ ಫಲಿತಾಂಶಕ್ಕೆ ಯಾವ ಮಾದರಿಯ ಬೋಧನೆ ಅನುಸರಿಸಬೇಕು ಎಂಬುದನ್ನು ಮೊದಲು ಅರಿಯಬೇಕು ಎಂದು ತಿಳಿಸಿದರು.
ಮಕ್ಕಳಲ್ಲಿಯೂ ಹಲವು ಭಿನ್ನತೆಗಳಿರುತ್ತವೆ. ಎಲ್ಲರೂ ಸಹ ಬುದ್ದಿವಂತರಾಗಿರುವುದಿಲ್ಲ, ಹಾಗೇಯೇ ಯಾರು ದಡ್ಡರೂ ಅಲ್ಲ. ಮನೆಯ ಪರಿಸರ, ಒತ್ತಡದ ಸಂದರ್ಭಗಳು ಎಲ್ಲರಿಗೂ ಇರುತ್ತವೆ. ಅಂಕಗಳಿಕೆ ಮಾತ್ರ ಪರೀಕ್ಷೆಯ ಉದ್ದೇಶವಲ್ಲ. ವಿಶೇಷ ತರಗತಿಗಳು, ಸಂಜೆ ತರಗತಿ ಅಭ್ಯಾಸ, ಗುಂಪು ಚರ್ಚೆ, ಪುನರ್ ಅವಲೋಕನ, ತೆರೆದ ಪುಸ್ತಕ ಪರೀಕ್ಷೆ, ಸ್ಡಡಿ ಸೆಂಟರ್, ರಸಪ್ರಶ್ನೆಗಳಂತಹ ಹೊಸಹೊಸ ಕ್ರೀಯಾಶೀಲ ಬೋಧನಾ ವಿಧಾನ ಕ್ರಮಗಳನ್ನು ಕಡ್ಡಾಯವಾಗಿ ಶಿಕ್ಷಕರು ಅಳವಡಿಸಿಕೊಂಡರೇ ಪೂರ್ಣ ಪ್ರಮಾಣದ ಯಶಸ್ಸು ಲಭ್ಯವಾಗಲಿದೆ ಎಂದು ಜಿ. ಪಂ. ಸಿ.ಇ.ಒ ಅವರು ತಿಳಿಸಿದರು.
ಮುಖ್ಯವಾಗಿ ಶಿಕ್ಷಕರು ಮಕ್ಕಳಲ್ಲಿ ಪರೀಕ್ಷಾ ಭಯವನ್ನು ಹೋಗಲಾಡಿಸಬೇಕು. ಅವರಲ್ಲಿ ಅತ್ಮವಿಶ್ವಾಸ ತುಂಬಬೇಕು. ವಿದ್ಯಾರ್ಥಿಗಳಲ್ಲಿರುವ ಕಲಿಕಾ ಕೊರತೆಗೆ ಕಾರಣಗಳನ್ನು ಗುರುತಿಸಿ ಅದನ್ನು ತಿದ್ದುವಂತಹ ಮೆಂಟರ್‌ಗಳಾಗಿ ಶಿಕ್ಷಕರು ಪರಿವರ್ತನೆಯಾಬೇಕು. ಕೆಲ ಇಲಾಖೆಗಳ ಅಧಿಕಾರಿಗಳು ಮೊದಲು ಉಪನ್ಯಾಸಕ ವೃತ್ತಿಯಲ್ಲಿರುತ್ತಾರೆ. ಅಲ್ಲದೆ ಹಲವು ಗ್ರಾಮಗಳಲ್ಲಿ ಉನ್ನತ ವ್ಯಾಸಂಗ ಮಾಡಿದ ನಿರುದ್ಯೋಗಿಗಳಿದ್ದು, ಅವರ ಸಹಕಾರ ಪಡೆದು ಉತ್ತಮ ಮಾರ್ಗದರ್ಶನ ಕೊಡಿಸಿ ಮಕ್ಕಳ ಜ್ಞಾನಮಟ್ಟವನ್ನು ಹೆಚ್ಚಿಸಬಹುದು ಎಂದು ತಿಳಿಸಿದರು.
ಮಕ್ಕಳು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಲು ಎಲ್ಲಿ ಎಡವುತ್ತಿದ್ದಾರೆ? ಎಂಬುದನ್ನು ಸಮಗ್ರವಾಗಿ ತಿಳಿಯಲು ಶಿಕ್ಷಕರು ಹಾಕುವ ಪರಿಶ್ರಮದ ವಿಧಾನಗಳನ್ನು ಡಾಕುಮೆಂಟರಿ ಮಾಡಬೇಕು. ಆಗಮಾತ್ರ ಮಕ್ಕಳ ಜ್ಞಾನದ ಮಟ್ಟ ಅರಿವಾಗಲಿದೆ. ಅದನ್ನು ಮುಂದಿನ ವರ್ಷದ ಆರಂಭದಿಂದಲೇ ಪರ್ಯಾಯ ವಿಧಾನಗಳ ಮೂಲಕ ಕಾರ್ಯರೂಪಕ್ಕೆ ತರಬಹುದು. ಈಗಾಗಲೇ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ತಯಾರಾಗಲು ಮಕ್ಕಳಿಗೆ ಅವಧಿ ಕಡಿಮೆ ಇದೆ. ಈ ನಿಟ್ಟಿನಲ್ಲಿ ಶಿಕ್ಷಕರು ನಿರೀಕ್ಷೆಗೂ ಮೀರಿ ಶ್ರಮ ಹಾಕಬೇಕು. ಮಕ್ಕಳನ್ನು ನೇರವಾಗಿ ತಲುಪಬೇಕು ಎಂದರು.
ಅನುದಾನ ರಹಿತ, ಅನುದಾನಸಹಿತ ಅಥವಾ ಸರ್ಕಾರಿ ಶಾಲೆಯೇ ಇರಲಿ, ಶಿಕ್ಷಕರ ಗಮನ ಮಕ್ಕಳ ಉತ್ತಮ ಭವಿಷ್ಯದತ್ತ ಇರಬೇಕು. ಮಕ್ಕಳು ಸಮಾಜದಲ್ಲಿ ಗೌರವಯುತವಾಗಿ ಬದುಕಲು ಅನುವು ಮಾಡಿಕೊಡಬೇಕು. ಒಟ್ಟಾರೆ ಶ್ರೈಕ್ಷಣಿಕವಾಗಿ ಆರೋಗ್ಯಕರ ಸ್ಪರ್ಧೆಯನ್ನು ಮಕ್ಕಳಲ್ಲಿ ಬೆಳೆಸಬೇಕು. ಆಶ್ರಮಶಾಲೆಗಳಲ್ಲಿ ಹೆಣ್ಣು ಮಕ್ಕಳನ್ನು ಕಲಿಕೆಗೆ ಪ್ರೇರೆಪಿಸಬೇಕು. ಬಾಲ್ಯವಿವಾಹದಿಂದ ದುಷ್ಪರಿಣಾಮಗಳ ಬಗ್ಗೆ ತಿಳಿಸಬೇಕು. ಶಾಲೆಬಿಟ್ಟ ಮಕ್ಕಳ ಅಭಿಯಾನದಡಿ ಎಲ್ಲಾ ಮಕ್ಕಳನ್ನು ಶಿಕ್ಷಣಕ್ಕೆ ತೊಡಗಿಸಬೇಕು. ಎಲ್ಲಾ ವಸತಿನಿಲಯಗಳಲ್ಲಿ ಸ್ಟಡಿ ಸೆಂಟರ್ ತೆರೆದು ಎಲ್ಲಾ ಮಕ್ಕಳು ಒಂದೆಡೆ ಕುಳಿತು ಓದಲು ಅನುಕೂಲ ಕಲ್ಪಿಸಲು ಮುಂದಾಗಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯತ್ರಿ ಅವರು ತಿಳಿಸಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕರಾದ ಎಸ್.ಎನ್. ಮಂಜುನಾಥ್, ಸಮಗ್ರ ಶಿಕ್ಷಣ ಕರ್ನಾಟಕದ ಜಿಲ್ಲಾ ಸಂಯೋಜಕರಾದ ಮಂಜುನಾಥ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸೋಮಣ್ಣೇಗೌಡ, ಚಂದ್ರಪಾಟೀಲ್, ಕಾಂತರಾಜು, ಎಸ್.ಎಸ್.ಎಲ್.ಸಿ ಪರೀಕ್ಷಾ ನೋಡೆಲ್ ಅಧಿಕಾರಿ ಮಲ್ಲಿಕಾರ್ಜುನ, ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರು, ಇತರರು ಸಭೆಯಲ್ಲಿ ಹಾಜರಿದ್ದರು.