ಗುಂಡ್ಲುಪೇಟೆ: ಹೈ ಕೋರ್ಟ್ ತೀರ್ಪು ಪ್ರಶ್ನಿಸಿ ಮುಸ್ಲಿಂ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್‍ಗೆ ತಾಲೂಕಿನಲ್ಲಿ ಎಸ್‍ಡಿಪಿಐ, ಪಿಎಫ್‍ಐ ಸೇರಿದಂತೆ ಮುಸ್ಲಿಂ ಸಂಘಟನೆಗಳು ಹಾಗೂ ಸಮುದಾಯದವರು ಅಂಗಡಿ, ಗ್ಯಾರೇಜ್ ಹಾಗೂ ಹೋಟೆಲ್‍ಗಳನ್ನು ಬಂದ್ ಮಾಡುವ ಮೂಲಕ ಬೆಂಬಲ ಸೂಚಿಸಿದರು.

ಪಟ್ಟಣದ ಚಾಮರಾಜನಗರ ರಸ್ತೆಯ ಟಿಪ್ಪು ಸರ್ಕಲ್‍ಗೆ ಹೊಂದಿಕೊಂಡಂತ್ತಿರುವ ಅನೇಕ ಗ್ಯಾರೇಜ್‍ಗಳು, ಮದೀನಾ-ಮುಕ್ತಾರ್ ಹಾಗೂ ಹಲವು ಹೋಟೆಲ್‍ಗಳು, ಮಾಂಸದಂಗಡಿ ಸೇರಿದಂತೆ ಇನ್ನಿತರ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮುಸ್ಲಿಂ ಮುಖಂಡರು ತಮ್ಮ ವಾಣಿಜ್ಯ ಚಟುವಟಿಕೆ ಸ್ಥಗಿತಗೊಳಿಸಿ ಬಂದ್ ಬೆಂಬಲಿಸಿದರು.

ಮುಸ್ಲಿಂ ಸಂಘಟನೆಗಳು ಕರ್ನಾಟಕ ಬಂದ್‍ಗೆ ಕರೆ ನೀಡಿದ್ದ ಕಾರಣ, ಟಿಪ್ಪು ಸರ್ಕಲ್, ಜಾಕೀರ್ ಹುಸೇನ್ ನಗರ ಸೇರಿದಂತೆ ಇತರೆ ಮುಸ್ಲಿಂ ಬಡಾವಣೆ, ರಾಷ್ಟ್ರೀಯ ಹೆದ್ದಾರಿಯಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಮಹದೇವ ಸ್ವಾಮಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.

ಎಸ್ಡಿಪಿಐ ತಾಲೂಕು ಅಧ್ಯಕ್ಷ ಇಮ್ರಾನ್ ಮಾತನಾಡಿ, ಶಾಲೆಗಳಲ್ಲಿ ಹಿಜಾಬ್ ಧರಿಸಬಾರದು ಎಂದು ಹೈ ಕೋರ್ಟ್ ನೀಡಿರುವ ತೀರ್ಪಿನಿಂದ ನಮಗೆ ನ್ಯಾಯ ದೊರಕಿಲ್ಲ. ಈ ಕಾರಣದಿಂದ ಸುಪ್ರೀಂ ಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಲಾಗಿದೆ. ಹಿಜಾಬ್ ಮುಸ್ಲಿಂ ಧರ್ಮದ ಸಂಕೇತವಾಗಿದ್ದು, ಇದನ್ನು ಧರಿಸಲು ಸರ್ಕಾರ ಹಾಗು ಕೋರ್ಟ್ ಆದೇಶ ನೀಡಬೇಕು ಎಂದು ಆಗ್ರಹಿಸಿದರು.

ವರದಿ: ಬಸವರಾಜು ಎಸ್.ಹಂಗಳ