ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಚಿಕ್ಕಾಟಿ ಗ್ರಾಮ ಪಂಚಾಯಿತಿ ಕಚೇರಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯಿತ್ರಿ ಅವರು ಗುರುವಾರ (ಡಿ.೨೨) ಅನಿರೀಕ್ಷಿತ ಭೇಟಿ ನೀಡಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ಜಲಜೀವನ್ ಮಿಷನ್, ಸ್ವಚ್ಛ ಭಾರತ್ ಮಿಷನ್, ಎನ್.ಆರ್.ಎಲ್.ಎಂ, ಅಮೃತ ಗ್ರಾಮ ಪಂಚಾಯಿತಿ ಹಂತ-೨, ತೆರಿಗೆ ವಸೂಲಾತಿ ಹಾಗೂ ಇತರೆ ಯೋಜನೆಗಳಡಿ ಅನುಷ್ಠಾನಗೊಳಿಸಲಾಗಿರುವ ವಿವಿಧ ಅಭಿವೃದ್ದಿ ಕಾಮಗಾರಿಗಳ ಪ್ರಗತಿ ಬಗ್ಗೆ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಹಾಗೂ ಸಿಬ್ಬಂದಿಗಳ ಜೊತೆ ಸಭೆ ನಡೆಸಿದರು.

ಸಭೆ ಬಳಿಕ ಚಿಕ್ಕಾಟಿ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿ, ಮಕ್ಕಳ ಹಾಜರಾತಿ, ಅಕ್ಷರ ದಾಸೋಹ ಕೇಂದ್ರದಲ್ಲಿನ ದಾಸ್ತಾನು ಕೊಠಡಿ ಮತ್ತು ಮಧ್ಯಾಹ್ನದ ಬಿಸಿಯೂಟ ತಯಾರಿಸುತ್ತಿರುವ ಬಗ್ಗೆ ಪರಿಶೀಲಿಸಿ, ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು. ಶಾಲೆಯಲ್ಲಿ ವಿಶೇಷವಾಗಿ ತೆರೆಯಲಾಗಿರುವ ಇಂಗ್ಲೀಷ್ ಕಲಿಕಾ ಕೇಂದ್ರಕ್ಕೂ ಭೇಟಿ ನೀಡಿದರು. ನಂತರ ರಾಘವಾಪುರ ಗ್ರಾಮ ಪಂಚಾಯಿತಿ ಕಚೇರಿಗೆ ಭೇಟಿ ನೀಡಿ, ಪಂಚಾಯತ್ ರಾಜ್ ಇಲಾಖಾ ವ್ಯಾಪ್ತಿಯ ವಿವಿಧ ಯೋಜನೆಗಳಡಿ ಅನುಷ್ಠಾನಗೊಳಿಸಲಾಗಿರುವ ಗ್ರಾಮೀಣ ಅಭಿವೃದ್ದಿ ಕಾಮಗಾರಿಗಳ ಪ್ರಗತಿ ಬಗ್ಗೆ ಪರಿಶೀಲಿಸಿ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಹಾಗೂ ಸಿಬ್ಬಂದಿಗಳ ಜೊತೆ ಸಭೆ ನಡೆಸಿದರು. ಗ್ರಾಮ ಪಂಚಾಯಿತಿಯ ಡಿಜಿಟಲ್ ಗ್ರಂಥಾಲಯವನ್ನು ಪರಿಶೀಲಿಸಿ, ಗ್ರಂಥಾಲಯದ ನಿರ್ವಹಣೆ ಮತ್ತು ಮೇಲ್ವಿಚಾರಣೆ ಕುರಿತು, ಗ್ರಂಥಾಲಯಕ್ಕೆ ಮೂಲ ಸೌಕರ್ಯಗಳನ್ನು ಒದಗಿಸುವುದರೊಂದಿಗೆ ಹೆಚ್ಚಿನ ಮಕ್ಕಳ ನೊಂದಣಿಗೆ ಕ್ರಮವಹಿಸುವಂತೆ ಗ್ರಂಥಾಲಯ ಮೇಲ್ವಿಚಾರಕರಿಗೆ ಸೂಚಿಸಿದರು. ಅಲ್ಲದೆ, ಬೇರಂಬಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದ್ದೂರು ಕಾಲೋನಿಯ ಸರ್ಕಾರಿ ಬುಡಕಟ್ಟು ಆಶ್ರಮ ಶಾಲೆಗೆ ಭೇಟಿ ನೀಡಿ, ವಿದ್ಯಾರ್ಥಿಗಳೊಂದಿಗೆ ಬಿಸಿಯೂಟ ಆಹಾರವನ್ನು ಸೇವಿಸುವ ಮೂಲಕ ಆಹಾರದ ಗುಣಮಟ್ಟವನ್ನು ಪರಿಶೀಲಿಸಿದರು. ವಿದ್ಯಾಭ್ಯಾಸ ಮತ್ತು ಕಲಿಕಾ ವಿಷಯಗಳ ಕುರಿತು ವಿದ್ಯಾರ್ಥಿಗಳೊಡನೆ ಸಂವಾದ ನಡೆಸಿದರು. ಬಳಿಕ ಮದ್ದೂರು ಕಾಲೋನಿ ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿಯ ಎನ್.ಆರ್.ಎಲ್.ಎಂ ಯೋಜನೆಯಡಿ ಸ್ಥಾಪಿಸಲಾಗಿರುವ ಶ್ರೀ ಐನೂರು ಮಾರಮ್ಮ ವನ-ಧನ್ ವಿಕಾಸ ಕೇಂದ್ರದಲ್ಲಿ ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರುಗಳಿಗೆ ತ್ರಿಫಲ ಚೂರ್ಣ ಉತ್ಪನ್ನ ತಯಾರಿಕೆ ಸಂಬಂಧ ತರಬೇತಿ ಕಾರ್ಯಕ್ರಮವನ್ನು ಪ್ರಾರಂಭಿಸುವ ಕುರಿತು ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರೊಂದಿಗೆ ಸಭೆ ನಡೆಸಿದರು. ಉತ್ಪನ್ನ ತಯಾರಿಕೆಯ ಮೂಲಕ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬನೆ ಹೊಂದುವ ಚಟುವಟಿಕೆಗಳತ್ತ ಹೆಚ್ಚು ಆಸಕ್ತಿ ಬೆಳೆಸಿಕೊಳ್ಳುವ ಕುರಿತು ಸ್ವ-ಸಹಾಯ ಸಂಘದ ಮಹಿಳೆಯರ ಜೊತೆ ಸಂವಾದ ನಡೆಸಿದರು. ಇದೇ ವೇಳೆ ಮದ್ದೂರು ಕಾಲೋನಿಗೆ ಭೇಟಿ ನೀಡಿ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ ವತಿಯಿಂದ ಜಲಜೀವನ್ ಮಿಷನ್ ಯೋಜನೆಯಡಿ ಗ್ರಾಮದಲ್ಲಿ ಕೈಗೊಂಡಿರುವ ನಳ ಸಂಪರ್ಕ ಕಾಮಗಾರಿ ಹಾಗೂ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಮಕ್ಕಳ ಹಾಜರಾತಿ ಮತ್ತು ಮಕ್ಕಳು, ಗರ್ಭಿಣಿ ಹಾಗೂ ಬಾಣಂತಿಯರಿಗೆ ನೀಡುತ್ತಿರುವ ಪೌಷ್ಠಿಕ ಆಹಾರಗಳನ್ನು ಪರಿಶೀಲಿಸಿದರು. ನಂತರ ಮದ್ದೂರು ಕಾಲೋನಿಯ ಜೇನುಕುರುಬ ಜನಾಂಗದ ಗ್ರಾಮಸ್ಥರ ಮನೆಗಳಿಗೆ ಭೇಟಿ ನೀಡಿ, ಮೂಲ ಸೌಲಭ್ಯಗಳು ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಸಮರ್ಪಕ ರೀತಿಯಲ್ಲಿ ಪೌಷ್ಠಿಕ ಆಹಾರ ಧಾನ್ಯಗಳನ್ನು ಸರಬರಾಜು ಮಾಡುತ್ತಿರುವ ಬಗ್ಗೆ ಪರಿಶೀಲಿಸಿದರು. ಲಸಿಕೆ ನೀಡುತ್ತಿರುವ ಬಗ್ಗೆ ಗ್ರಾಮಸ್ಥರಿಂದ ಮಾಹಿತಿ ಪಡೆದರು. ಅಲ್ಲದೆ ಬುಡಕಟ್ಟು ಜನಾಂಗದ ಮಕ್ಕಳಿಗೆ ಶೈಕ್ಷಣಿಕ ಮಹತ್ವದ ಬಗ್ಗೆ ಹೆಚ್ಚಿನ ಅರಿವು ಹಾಗೂ ಮುಂದಿನ ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಪೋಷಕರಿಗೆ ಅರಿವು ಮೂಡಿಸಲಾಯಿತು. ಸದರಿ ಜನಾಂಗದ ಗ್ರಾಮಸ್ಥರಿಗೆ ವಸತಿ ಸೌಕರ್ಯ ಕಲ್ಪಿಸುವ ಕುರಿತು ಪರಿಶೀಲಿಸಿ ಮನೆಗಳಿಗೆ ಪ್ರಸ್ತಾವನೆಯನ್ನು ಸಲ್ಲಿಸಲು ಅಗತ್ಯ ಕ್ರಮವಹಿಸುವಂತೆ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳಿಗೆ ಸೂಚಿಸಿದರು. ತದನಂತರ ಬೇರಂಬಾಡಿ ಗ್ರಾಮ ಪಂಚಾಯಿತಿ ಕಚೇರಿಗೆ ಭೇಟಿ ನೀಡಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ಜಲಜೀವನ್ ಮಿಷನ್, ಸ್ವಚ್ಛ ಭಾರತ್ ಮಿಷನ್ (ಗ್ರಾ), ಎನ್.ಆರ್.ಎಲ್.ಎಂ, ಅಮೃತ ಗ್ರಾಮ ಪಂಚಾಯಿತಿ ಹಂತ-೨, ತೆರಿಗೆ ವಸೂಲಾತಿ ಹಾಗೂ ಇತರೆ ಯೋಜನೆಗಳಡಿ ಅನುಷ್ಠಾನಗೊಳಿಸಲಾಗಿರುವ ವಿವಿಧ ಅಭಿವೃದ್ದಿ ಕಾಮಗಾರಿಗಳ ಪ್ರಗತಿ ಬಗ್ಗೆ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಹಾಗೂ ಸಿಬ್ಬಂದಿಗಳ ಜೊತೆ ಸಭೆ ನಡೆಸಿದರು. ಬೇರಂಬಾಡಿ ಗ್ರಾಮದ ಅಂಗನವಾಡಿ ಕೇಂದ್ರ ೧ ಮತ್ತು ೨ನೇ ಕೇಂದ್ರಗಳಿಗೆ ಭೇಟಿ ನೀಡಿ, ಮಕ್ಕಳ ಹಾಜರಾತಿ ಮತ್ತು ಮಕ್ಕಳು, ಗರ್ಭಿಣಿ ಹಾಗೂ ಬಾಣಂತಿಯರಿಗೆ ನೀಡುತ್ತಿರುವ ಪೌಷ್ಠಿಕ ಆಹಾರಗಳನ್ನು ಪರಿಶೀಲಿಸಿದ ನಂತರ ಎಲ್ಲಾ ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರು ಮತ್ತು ಸಹಾಯಕಿಯರೊಂದಿಗೆ ಗರ್ಭಿಣಿ ಹಾಗೂ ಬಾಣಂತಿಯರಿಗೆ ಸಮರ್ಪಕ ಪೌಷ್ಠಿಕ ಆಹಾರ ವಿತರಣೆ ಮಾಡುವ ಕುರಿತು ಸಭೆ ನಡೆಸಿದರು. ಬೇರಂಬಾಡಿ ಗ್ರಾಮ ಪಂಚಾಯಿತಿ ಡಿಜಿಟಲ್ ಗ್ರಂಥಾಲಯ ಮಾಹಿತಿ ಕೇಂದ್ರಕ್ಕೆ ಭೇಟಿ ನೀಡಿ, ಗ್ರಂಥಾಲಯಕ್ಕೆ ಸರ್ಕಾರೇತರ ಸಂಸ್ಥೆಯವರು ಒದಗಿಸಿರುವ ಪುಸ್ತಕಗಳ ಮಾಹಿತಿ ಪಡೆದರು ಹಾಗೂ ಗ್ರಂಥಾಲಯದ ನಿರ್ವಹಣೆ ಮತ್ತು ಮೇಲ್ವಿಚಾರಣೆ ಮತ್ತು ಹೆಚ್ಚಿನ ಮಕ್ಕಳ ನೋಂದಣಿಗೆ ಕ್ರಮವಹಿಸುವ ಕುರಿತು ಗ್ರಂಥಾಲಯ ಮೇಲ್ವಿಚಾರಕರೊಂದಿಗೆ ಸಂವಾದ ನಡೆಸಿದರು. ಬಳಿಕ ಬೇರಂಬಾಡಿ ಗ್ರಾಮದಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ಪಂಚಾಯತ್ ಎಂಜಿನಿಯರಿಂಗ್ ಇಲಾಖಾ ವತಿಯಿಂದ ಶಾಲೆಯಲ್ಲಿ ಹೆಚ್ಚುವರಿ ಕೊಠಡಿಗಳನ್ನು ನಿರ್ಮಾಣ ಮಾಡುವ ಸಂಬಂಧ ಅನುಷ್ಠಾನಗೊಳಿಸಲಾಗುತ್ತಿರುವ ಕಾಮಗಾರಿಗಳನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯಿತ್ರಿ ಅವರು ಪರಿಶೀಲಿಸಿದರು. ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಕಂಠೇರಾಜ್ ಅರಸ್, ಸಂಬಂಧಪಟ್ಟ ಅನುಷ್ಠಾನ ಅಧಿಕಾರಿಗಳು, ಇಲಾಖಾಧಿಕಾರಿಗಳು, ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು, ಗ್ರಂಥಾಲಯ ಮೇಲ್ವಿಚಾರಕರುಗಳು, ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರುಗಳು, ಶಾಲಾ ಮುಖ್ಯ ಶಿಕ್ಷಕರು, ಸಹಶಿಕ್ಷಕರು ಮತ್ತು ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಈ ಸಂದರ್ಭದಲ್ಲಿ ಹಾಜರಿದ್ದವರು.