ಚಾಮರಾಜನಗರ: ಕುಟುಂಬ ಭದ್ರತೆ, ಜೀವನ ನಿರ್ವಹಣೆಗೆ ಅತ್ಯಗತ್ಯವಾಗಿರುವುದರಿಂದ ಪ್ರತಿಯೊಬ್ಬರು ಉದ್ಯೋಗ ಮೇಳಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಅಭಿಪ್ರಾಯಪಟ್ಟರು.
ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಇವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಕಾರ್ಯಕ್ರಮ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇಡೀ ಕುಟುಂಬ ನಿರ್ವಹಣೆಗೆ ಉದ್ಯೋಗ ಅವಶ್ಯವಾಗಿದೆ. ಇಂದಿನ ಸ್ಪರ್ಧಾತ್ಮಕ ಸನ್ನಿವೇಶದಲ್ಲಿ ಜೀವನ ನಿರ್ವಹಣೆಗೆ ಸರ್ಕಾರಿ ಅಥವಾ ಖಾಸಗಿ ಕ್ಷೇತ್ರ ಯಾವುದಾದರೂ ಸರಿಯೇ ನಿರುದ್ಯೋಗಿಗಳು ಕೆಲಸ ನಿರ್ವಹಿಸಲು ಸಿದ್ದರಾಗಿರಬೇಕು. ವಿದ್ಯೆಯ ಜೊತೆಗೆ ತಮ್ಮಲ್ಲಿರುವ ಪ್ರತಿಭೆ, ನೈಪುಣ್ಯತೆ, ಕೌಶಲ್ಯವನ್ನು ಉದ್ಯೋಗದಾತ ಕಂಪನಿಗಳ ಸಮ್ಮುಖದಲ್ಲಿ ಪ್ರಸ್ತುತಪಡಿಸಬೇಕು. ಈ ನಿಟ್ಟಿನಲ್ಲಿ ನಿರುದ್ಯೋಗಿ ಯುವಕ, ಯುವತಿಯರು ಭೌತಿಕವಾಗಿ ಮಾತ್ರವಲ್ಲ ಮಾನಸಿಕವಾಗಿ ಸದೃಢರಾಗಿರಬೇಕು ಎಂದು ಜಿಲ್ಲಾಧಿಕಾರಿಯವರು ಕಿವಿಮಾತು ಹೇಳಿದರು.
ಜಿಲ್ಲೆಯಲ್ಲಿ ಕಳೆದ ಬಾರಿ ನಡೆದ ಉದ್ಯೋಗ ಮೇಳದಲ್ಲಿ ನೊಂದಾಯಿತರಾಗಿದ್ದವರ ಪೈಕಿ ೯೫ ಯುವಜನರಿಗೆ ಕೆಲಸ ದೊರೆತಿದೆ. ಈ ಬಾರಿಯೂ ಸಹ ಸಾಕಷ್ಟು ನಿರುದ್ಯೋಗಿಗಳು ಉದ್ಯೋಗ ಅರಸಿ ಮೇಳಕ್ಕೆ ಹಾಜರಾಗಿದ್ದಾರೆ. ಸಂಬಂಧಪಟ್ಟ ಇಲಾಖೆಗಳು ಸಂದರ್ಶನಕ್ಕೂ ಮೊದಲು ಕಾರ್ಯಾಗಾರಗಳನ್ನು ಆಯೋಜಿಸಿ ತರಬೇತಿ ನೀಡಿ ನಿರುದ್ಯೋಗಿಗಳು ಹೆಚ್ಚಿನ ಕೌಶಲ್ಯತೆ ಹೊಂದುವಂತೆ ಪರಿಪೂರ್ಣಗೊಳಿಸುವ ಕಾರ್ಯ ಮಾಡಬೇಕಿದೆ ಎಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ತಿಳಿಸಿದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕರಾದ ರಾಜೇಂದ್ರಪ್ರಸಾದ್ ಅವರು ಮಾತನಾಡಿ ಈ ಹಿಂದೆ ಉದ್ಯೋಗಮೇಳಗಳಿಗೆ ಜಿಲ್ಲೆಯ ನಿರುದ್ಯೋಗಿಗಳನ್ನು ಮೈಸೂರು, ಬೆಂಗಳೂರು, ಇತರೆ ಸ್ಥಳಗಳಿಗೆ ಕಳುಹಿಸಲಾಗುತ್ತಿತ್ತು. ಪ್ರಸ್ತುತ ಜಿಲ್ಲೆಯಲ್ಲಿಯೇ ಉದ್ಯೋಗಮೇಳಗಳು ನಡೆಯುತ್ತಿವೆ. ಜಿಲ್ಲೆಯಲ್ಲಿ ಕೈಗಾರಿಕೆಗಳ ಬೆಳವಣಿಗೆ ಹೆಚ್ಚು ಒತ್ತು ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯ ನಿರುದ್ಯೋಗಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಮಹಮ್ಮದ್ ಅಕ್ಬರ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಎಂ.ವಿ. ಸುಧಾ, ಜಿಲ್ಲಾ ಕಾರ್ಮಿಕ ಅಧಿಕಾರಿ ಎಂ. ಮಹದೇವಸ್ವಾಮಿ, ಕೈಮಗ್ಗ, ಜವಳಿ ಇಲಾಖೆಯ ಸಹಾಯಕ ನಿರ್ದೇಶಕರಾದ ಯೋಗೀಶ್, ಇತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ನಂಜನಗೂಡು, ಮೈಸೂರು ಹಾಗೂ ಬೆಂಗಳೂರಿನ ಖಾಸಗಿ ಕಂಪನಿಗಳಲ್ಲಿ ಮಾರುಕಟ್ಟೆ ಸೇವೆಗಳು, ಹಣಕಾಸು, ಇನ್ಸೂರೆನ್ಸ್, ಕೈಗಾರಿಕಾ, ಬ್ಯಾಂಕಿಂಗ್ ಮತ್ತು ಆಸ್ಪತ್ರೆ ಸೇವೆಗಳು ಹಾಗೂ ಇತರೆ ಎಲ್ಲಾ ರೀತಿಯ ಸೇವೆ ನೀಡುವ ೩೨ ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದವು.
ಉದ್ಯೋಗಮೇಳದಲ್ಲಿ ನೊಂದಣಿಯಾದ ಒಟ್ಟು ೫೫೬ ಯುವಕ, ಯುವತಿಯರ ಪೈಕಿ ಉದ್ಯೋಗಕ್ಕೆ ಆಯ್ಕೆಗೊಂಡ ೧೦೭ ಮಂದಿಗೆ ಪ್ರಮಾಣಪತ್ರ ವಿತರಿಸಲಾಯಿತು. ೧೨೦ ಮಂದಿಯನ್ನು ಮುಂದಿನ ಹಂತಕ್ಕೆ ಆಯ್ಕೆ ಮಾಡಲಾಯಿತು.