ಹಂಪಾಪುರ: ಪೊಲೀಸರೆಂದರೆ ಮಾನವೀಯತೆ ಮರೆತವರು, ಹಣಕ್ಕಾಗಿ ಆಸೆ ಪಡುತ್ತಾರೆ ಎಂಬ ಹೊತ್ತಲ್ಲಿ ಇದಕ್ಕೆ ವಿರುದ್ಧವಾಗಿ ಪೊಲೀಸ್ ಮುಖ್ಯ ಪೇದೆಯೊಬ್ಬರು ಕೂಡಿಟ್ಟ ತಮ್ಮ ಸ್ವಂತ ಹಣದಲ್ಲಿ ಕೊರೋನಾ ಸೋಂಕಿತರ ಕುಟುಂಬಗಳಿಗೆ ಉಚಿತವಾಗಿ ಆಹಾರದ ಕಿಟ್ ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಹೌದು.. ಎಚ್.ಡಿ.ಕೋಟೆ ತಾಲೂಕಿನ ಹಂಪಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕೊರೋನಾ ಸೋಂಕಿನಿಂದ ಐಸೋಲೇಷನ್, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಡ ಕುಟುಂಬಗಳಿಗೆ ಶನಿವಾರ ಎಚ್.ಡಿ.ಕೋಟೆ ತಾಲೂಕಿನ ಹಂಪಾಪುರ ಪೊಲೀಸ್ ಠಾಣೆ ಮುಖ್ಯ ಪೇದೆ ಎಸ್.ಸಿ.ಮಹದೇವ ಅವರು ವೈಯಕ್ತಿಕ ಖಚರ್ಿನಲ್ಲಿ ಆಹಾರ ಕಿಟ್ಗಳನ್ನು ಉಚಿತವಾಗಿ ವಿತರಿಸಿ, ಇತರರಿಗೆ ಮಾದರಿಯಾಗಿದ್ದಾರೆ.
ಹಂಪಾಪುರ ಹೋಬಳಿ ವ್ಯಾಪ್ತಿಯ ಶಂಕಹಳ್ಳಿ, ಚಿಕ್ಕನಂದಿ, ಹತ್ವಾಳ್, ಹೊಮ್ಮರಗಳ್ಳಿ, ಕಂಚಮ್ಮಳ್ಳಿ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿನ ವಾಸಿಗಳಿಗೆ ಕೊರೋನಾ ಸೋಂಕು ಹರಡಿದ್ದು, ಈಗಾಗಲೇ ಐಶೋಲೇಷನ್, ಕೋವಿಡ್ ಕೇರ್ ಸೆಂಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಡ ಕುಟುಂಬಗಳಿಗೆ ಜೀವನ ನಿರ್ವಹಣೆಗೆ ಅಗತ್ಯವಾಗಿ ಬೇಕಾದ ಆಹಾರ ಪದಾರ್ಥಗಳನ್ನು ಎಸ್.ಸಿ.ಮಹದೇವ ಅವರು ವೈಯಕ್ತಿಕವಾಗಿ ಉಚಿತವಾಗಿ ವಿತರಿಸಿದರು.
ನಂತರ ಮಾತನಾಡಿದ ಮಹದೇವ ಅವರು, ಕೊರೋನಾ ಸೋಂಕಿಗೆ ತುತ್ತಾದ ಬಡ ಕುಟುಂಬಗಳಿಗೆ 10 ಕೆ.ಜಿ. ಅಕ್ಕಿ, ಎಣ್ಣೆ, ಬೆಳೆಕಾಳು, ಟೀ ಪುಡಿ, ಸಕ್ಕರೆ, ಸೋಪು, ಸೋಪು ಪೌಡರ್, ತೆಂಗಿನ ಕಾಯಿ ಸೇರಿದಂತೆ ಇನ್ನಿತರ ಆಹಾರ ಪದಾರ್ಥಗಳನ್ನು ನೀಡಲಾಗಿದೆ. ಕೊರೋನಾ ಸೋಂಕಿತರ ಮನೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರ ಸ್ಥಿತಿಗತಿಗಳನ್ನು ನೋಡಿದರೆ ತುಂಬಾ ದುಃಖವಾಗಲಿದೆ ಎಂದು ಭಾವುಕರಾದರು.
ಕೊರೋನಾ ಸೋಂಕಿತರ ಮನೆಗಳಿಗೆ ಉಚಿತವಾಗಿ ಆಹಾರ ಪದಾರ್ಥಗಳನ್ನು ನೀಡಲಾಗಿದ್ದು, ಮುಂದುವರಿಸಲಾಗುವುದು. ಕೊರೋನಾದಂಥ ಸಂಕಷ್ಟದಲ್ಲಿ ಬಡ ಕುಟುಂಬಗಳ ಜೀವನ ನಿರ್ವಹಣೆ ತುಂಬಾ ಕಷ್ಟಕರವಾಗಿದೆ. ಜೀವನ ಹೇಗೆ ಸಾಗಿಸುತ್ತಾರೆ ಎಂಬುದೇ ಚಿಂತಾಜನಕವಾಗಿದೆ. ಇಂಥ ವೇಳೆ ನೆರವಾದರೆ ತುಂಬಾ ಅವರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ನೌಕರ ಅನಿಲ್, ನರಸಿಂಹ, ಪೊಲೀಸ್ ಠಾಣೆ ಸಿಬ್ಬಂದಿ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.