ಕೆ.ಆರ್.ನಗರ: ದೇಶದಾದ್ಯಂತ ಕೊರೋನಾ ಸೋಂಕಿನ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವುದನ್ನು ತಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದ್ದರೂ ಇದಕ್ಕೆ ಸಹಕಾರ ನೀಡದ ಕಾಂಗ್ರೆಸ್ ಪಕ್ಷದ ಮುಖಂಡರು ಕೆಟ್ಟ ರಾಜಕಾರಣ ಮಾಡಿ ಜನರಲ್ಲಿ ಭಯದ ವಾತಾವರಣವನ್ನುಂಟು ಮಾಡುತ್ತಿದ್ದಾರೆ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಕೆ.ವೈ.ಮಂಜು ಆರೋಪಿಸಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಜನರ ಆರೋಗ್ಯದ ದೃಷ್ಠಿಯಿಂದ ವ್ಯಾಕ್ಸಿನ್ ಹಾಕಲು ಆರಂಭಿಸಿದಾಗ ಕಾಂಗ್ರೆಸ್ ಪಕ್ಷ ಇಲ್ಲಸಲ್ಲದ ಅಪಪ್ರಚಾರ ಮಾಡಿ ಸುಳ್ಳು ಸುದ್ದಿಗಳನ್ನು ಹರಡಿಸಿ ಅಭಿಯಾನ ವಿಳಂಬವಾಗುವಂತೆ ಮಾಡಿ ಈಗ ಸರ್ಕಾರಗಳು ಸಕಾಲದಲ್ಲಿ ವ್ಯಾಕ್ಸಿನ್ ನೀಡುತ್ತಿಲ್ಲವೆಂದು ಬೊಬ್ಬೆ ಹೊಡೆಯುತ್ತ ಅಪ ಪ್ರಚಾರದಲ್ಲಿ ತೊಡಗಿದೆ ಎಂದು ದೂರಿದರು.
ವಿರೋಧ ಪಕ್ಷವಾಗಿ ಜವಬ್ದಾರಿಯುತವಾಗಿ ನಡೆದುಕೊಳ್ಳದ ರಾಜ್ಯ ಕಾಂಗ್ರೆಸ್ ನಾಯಕರು ಕಳೆದ ವರ್ಷ ಸರ್ಕಾರಕ್ಕೆ ನೀಡಿದ್ದ ೧ ಕೋಟಿ ರೂಪಾಯಿಗಳ ಚೆಕ್ ಬೌನ್ಸ್ ಆಗಿದ್ದನ್ನು ಮರೆತು ಈಗ ಕಾಂಗ್ರೆಸ್ ಪಕ್ಷದ ಶಾಸಕರ ನಿಧಿಯಿಂದ ನೀಡಲು ಮುಂದಾಗಿರುವ ೧೦೦ ಕೋಟಿ ಹಣವನ್ನು ಸ್ವಂತದ್ದು ಎಂದು ಬಿಂಬಿಸಿಕೊಳ್ಳಲು ಹೊರಟಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದರು.
ವೆಂಟಿಲೇಟರ್‌ಗಳ ಸಂಖ್ಯೆ ಹೆಚ್ಚಳ, ಆಕ್ಷಿಜನ್ ಸರಬರಾಜು ಮತ್ತು ಉತ್ಪಾದನಾ ಘಟಕಗಳ ಆರಂಭ, ಸೋಂಕಿಗೆ ಎರಡು ಲಸಿಕೆ ಕಂಡು ಹಿಡಿದಿರುವುದು, ಅಗತ್ಯ ವೈದ್ಯರು ಮತ್ತು ದಾದಿಯರ ನೇಮಕ, ಕಿಸಾನ್ ಸಮ್ಮಾನ್ ಯೋಜನೆಯ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಖಾತೆಗಳಿಗೆ ೧೯ ಸಾವಿರ ಕೋಟಿ ಜಮಾ ಸೇರಿದಂತೆ ಹತ್ತಾರು ಜನಪರವಾದ ಕೆಲಸ ಮಾಡಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸೇವೆ ಅನನ್ಯವಾಗಿದೆ ಎಂದು ಪ್ರಶಂಸಿಸಿದರು.
ಇದರ ಜತೆಗೆ ರಾಜ್ಯ ಸರ್ಕಾರ ಇಂದಿರಾ ಕ್ಯಾಂಟೀನ್‌ಗಳ ಮೂಲಕ ನಿರಾಶ್ರಿತರಿಗೆ, ವಲಸೆ ಕಾರ್ಮಿಕರಿಗೆ ಮತ್ತು ಬಡವರಿಗೆ ಉಚಿತ ಆಹಾರ ನೀಡುತ್ತಿರುವುದು ದೇಶದ ಇತರ ರಾಜ್ಯ ಸರ್ಕಾರಗಳಿಗೆ ಮಾದರಿಯಾಗಿದೆ. ಇನ್ನು ಮುಂದೆಯಾದರೂ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಚುನಾಯಿತ ಜನ ಪ್ರತಿನಿಧಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಅನಗತ್ಯವಾದ ಸುಳ್ಳು ಆರೋಪಗಳನ್ನು ಮಾಡುವುದನ್ನು ಬಿಟ್ಟು ಕನಿಷ್ಠ ತಾವು ಆಯ್ಕೆಯಾಗಿರುವ ಕ್ಷೇತ್ರಗಳ ಜನರಿಗೆ ಸರ್ಕಾರದ ಸವಲತ್ತುಗಳನ್ನು ತಲುಪಿಸುವ ಕೆಲಸ ಮಾಡಬೇಕೆಂದು ಸಲಹೆ ನೀಡಿದರು.
ತಾಲೂಕು ಬಿಜೆಪಿ ಮಾಧ್ಯಮ ಸಂಚಾಲಕ ಎಂ.ಎನ್.ನಾಗೇಶ್ ಮಾತನಾಡಿ ಕೆ.ಆರ್.ನಗರ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬಿಜೆಪಿ ಪಕ್ಷವೂ ಸಹ ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿದ್ದು, ಈಗಾಗಲೇ ಬಡವರಿಗೆ ಆಹಾರದ ಕಿಟ್‌ಗಳು ಮತ್ತು ಮಾಸ್ಕ್‌ಗಳನ್ನು ವಿತರಿಸಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ತಾಲೂಕು ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ದಾಕ್ಷಾಯಿಣಿ, ಕಾರ್ಯದರ್ಶಿ ರಂಗಸ್ವಾಮಿ, ನಗರ ಯೋಜನಾ ಪ್ರಾಧಿಕಾರದ ಸದಸ್ಯ ಗೋಪಾಲರಾಜು ಇದ್ದರು.

By admin