ಮಡಿಕೇರಿ: ಕಳೆದ ಮೂರು ವರ್ಷಗಳಿಂದ ಕೊಡಗು ಮಹಾಮಳೆ, ಪ್ರವಾಹ, ಜಲಪ್ರಳಯದಿಂದ ತತ್ತರಿಸಿಹೋಗಿದೆ. ಅದರ ನಡುವೆ ಕಳೆದೊಂದು ವರ್ಷದಿಂದ ಕೊರೋನಾ ಎಂಬ ತೂಗುಕತ್ತಿ ನೇತಾಡುತ್ತಿರುವುದರಿಂದ ಒಂದೆಡೆ ಜೀವ ಉಳಿಸಿಕೊಳ್ಳಲು ಇನ್ನೊಂದೆಡೆ ಜೀವನ ಮಾಡಲು ಹೆಣಗಾಡಬೇಕಾಗಿದೆ.
ಕೊಡಗಿನಲ್ಲಿ ಕೃಷಿ ಹೊರತು ಪಡಿಸಿದರೆ ಇತರೆ ಯಾವ ಉದ್ಯಮಗಳೂ ಇಲ್ಲ. ಕಳೆದ ಒಂದೆರಡು ದಶಕಗಳಿಂದ ಪ್ರವಾಸೋದ್ಯಮ ಅಭಿವೃದ್ಧಿಗೊಂಡಿದ್ದರಿಂದ ಹೋಂ ಸ್ಟೇ, ರೆಸಾರ್ಟ್ ಕಲ್ಪನೆಗಳು ಜಾರಿಗೆ ಬಂದು ಒಂದಷ್ಟು ಆದಾಯಗಳು ಬರುವಂತಾಯಿತು. ಹೀಗಾಗಿ ಪ್ರವಾಸೋದ್ಯಮವನ್ನು ನಂಬಿದ ಬಹಳಷ್ಟು ಮಂದಿ ಕೋಟ್ಯಂತರ ರೂ. ಖರ್ಚು ಮಾಡಿ ರೆಸಾರ್ಟ್, ಹೋಂಸ್ಟೇಗಳನ್ನು ನಿರ್ಮಿಸಿದ್ದಾರೆ. ಆದರೆ ಜಲಪ್ರಳಯದ ನಂತರ ಪ್ರವಾಸೋದ್ಯಮ ಮಗುಚಿ ಬಿದ್ದಿದೆ. ಇನ್ನೇನು ಸುಧಾರಿಸಿ ಕೊಳ್ಳುತ್ತಿದೆ ಎನ್ನುವಾಗಲೇ ಕೊರೋನಾ ಮಹಾಮಾರಿ ಬರಸಿಡಿಲಿನಿಂದ ಬಡಿಯುತ್ತಾ ಬಂದಿದೆ. ಪರಿಣಾಮ ಪ್ರತಿಯೊಬ್ಬರ ಬದುಕು ಮೂರಾಬಟ್ಟೆಯಾಗಿದೆ.
ಹಾಗೆನೋಡಿದರೆ ಕೊಡಗಿನಲ್ಲಿ ಸ್ಥಳೀಯವಾಗಿ ಮಾಡಲು ಯಾವುದೇ ಕೆಲಸವಿಲ್ಲ. ಹೀಗಾಗಿ ಉನ್ನತ ವ್ಯಾಸಂಗ ಮಾಡಿದವರೆಲ್ಲರೂ ಉದ್ಯೋಗ ಅರಸಿಕೊಂಡು ಬೆಂಗಳೂರು ಸೇರಿದಂತೆ ಬೇರೆ ಬೇರೆ ನಗರ ಸೇರುತ್ತಾರೆ. ಆದರೆ ಬೆಂಗಳೂರಿನಲ್ಲಿ ನೆಲೆಸಿರುವವರ ಸಂಖ್ಯೆ ದೊಡ್ಡಮಟ್ಟದಲ್ಲಿದೆ. ಕಳೆದ ಬಾರಿ ಲಾಕ್ ಡೌನ್ ಘೋಷಣೆ ದಿಢೀರ್ ಮಾಡಿದ್ದರಿಂದ ಒಂದಷ್ಟು ಮಂದಿ ಇದ್ದಲ್ಲೇ ಉಳಿದು ಹೋದರು. ಮತ್ತೊಂದಷ್ಟು ಮಂದಿ ಊರಿನತ್ತ ಮುಖ ಮಾಡಿದರೂ ಅವರನ್ನು ಕೋವಿಡ್ ತಪಾಸಣೆಗೆ ಒಳಪಡಿಸಿ ಒಂದಷ್ಟು ದಿನ ಐಸೋಲೇಷನ್ ಮಾಡಿಸಿ ಕೋವಿಡ್ ನೆಗೆಟಿವ್ ಎನ್ನುವುದನ್ನು ಖಾತರಿಪಡಿಸಿಕೊಂಡ ಬಳಿಕ ತಮ್ಮ ಊರುಗಳಿಗೆ, ಮನೆಗಳಿಗೆ ಕಳುಹಿಸಲಾಯಿತು.
ಈ ನಡುವೆ ಕೊರೋನಾ ಸೋಂಕು ಒಂದಷ್ಟು ಕಡಿಮೆ ಆಗುತ್ತಿದ್ದಂತೆಯೇ ಮತ್ತೆ ಕೊಡಗಿನಿಂದ ತಮ್ಮ ಕೆಲಸ ಕಾರ್ಯಗಳಿಗೆ ಹೊರ ಹೋದವರು ಅಲ್ಲಿಯೇ ಬದುಕು ಕಟ್ಟಿಕೊಂಡು ತಮ್ಮ ಕೆಲಸ ಮುಂದುವರೆಸಬೇಕು ಎನ್ನುವಷ್ಟರಲ್ಲಿ ಮತ್ತೆ ಎರಡನೇ ಅಲೆ ಇನ್ನಿಲ್ಲದಂತೆ ಕಾಡಲು ಆರಂಭಿಸಿದೆ. ಈ ವೇಳೆ ಇದನ್ನು ನಿಯಂತ್ರಣ ಮಾಡುವುದು ಲಾಕ್ ಡೌನ್ ಹೊರತುಪಡಿಸಿ ಬೇರೆ ಯಾವುದೇ ಮಾರ್ಗದಿಂದ ಸಾಧ್ಯವಿಲ್ಲ ಎಂಬ ಅರಿವು ಸರ್ಕಾರದ ಗಮನಕ್ಕೆ ಬರುವ ವೇಳೆಗೆ ಕೊರೋನಾ ನಿರೀಕ್ಷೆ ಮೀರಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿದೆ. ಲಾಕ್ ಡೌನ್ ಕಾರಣಕ್ಕೆ ಬೇರೆ ಬೇರೆ ಕಡೆ ಕೆಲಸ ಮಾಡುತ್ತಿದ್ದವರು ಮತ್ತೆ ತವರಿಗೆ ಮರಳಿದ್ದಾರೆ. ಅವರ ಜತೆಯಲ್ಲಿಯೇ ಸೋಂಕು  ಬಂದಿದೆ ಪರಿಣಾಮ ಪುಟ್ಟ ಜಿಲ್ಲೆ ಕೊಡಗು ಕೊರೋನಾದಿಂದ ನರಳುತ್ತಿದೆ.


ಪ್ರತಿದಿನವೂ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಜತೆಗೆ ಸಾವಿನ ಸಂಖ್ಯೆಯೂ ಏರುತ್ತಿದೆ. ಬಹುಶಃ ಹೊರಗಿನಿಂದ ಬಂದವರು ತಕ್ಷಣವೇ ಕೋವಿಡ್ ತಪಾಸಣೆ ಮಾಡಿಸಿಕೊಂಡು ಒಂದಷ್ಟು ದಿನಗಳ ಕಾಲ ಹೋಂ ಕ್ವಾರಂಟೈನ್ ಆಗಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ. ಆದರೆ ಕಾಲ ಮೀರಿ ಹೋಗಿದೆ. ಕೆಲವರು ಕೊರೋನಾ ಲಕ್ಷಣಗಳು ಇದ್ದರೂ ಆಸ್ಪತ್ರೆಗೆ ತೆರಳುತ್ತಿಲ್ಲ. ಅವರಿಂದ ಕುಟುಂಬದವರಿಗೆ ಸೋಂಕು ಹರಡುತ್ತಿದೆ. ಮುಂದಿನ ಎರಡು ವಾರಗಳ ಕಾಲ ಜಿಲ್ಲೆಯಲ್ಲಿ ಎಚ್ಚರಿಕೆ ವಹಿಸದೆ ಹೋದರೆ ಕೊರೋನಾ ಸ್ಪೋಟವಾಗುವ ಎಚ್ಚರಿಕೆಯನ್ನು ಇದೀಗ ಜಿಲ್ಲಾ ವೈದ್ಯಾಧಿಕಾರಿ ಮೋಹನ್ ಕುಮಾರ್ ನೀಡಿದ್ದಾರೆ. ಅವರ ಪ್ರಕಾರ ಕೊಡಗು ಜಿಲ್ಲೆಯಲ್ಲಿ ಕೋವಿಡ್-೧೯ ಸೋಂಕಿನ ಖಚಿತ ಪ್ರಮಾಣ ಹೆಚ್ಚಾಗುತ್ತಿದ್ದು, ಮುಂದಿನ ೧೫ ದಿನ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದ್ದಾರೆ.


ಜಿಲ್ಲೆಯಲ್ಲಿರುವ ಜನಸಂಖ್ಯೆ ಸುಮಾರು ಆರೂವರೆ ಲಕ್ಷವಾದರೂ ಹೊರಗಿನಿಂದ ಅದರಲ್ಲೂ ಬೆಂಗಳೂರಿನಿಂದ ಬಂದಿರುವ ಜನರು ಗ್ರಾಮೀಣ ಪ್ರದೇಶದಲ್ಲಿ ಇರುವುದರಿಂದ. ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇನ್ನು ವಾಸ್ತವ್ಯ ಹೂಡಿರುವ ಜನರಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡರೂ ತಕ್ಷಣವೇ ಆಸ್ಪತ್ರೆಗೆ ಬರುತ್ತಿಲ್ಲ. ತಮ್ಮ ಆರೋಗ್ಯ ಬಿಗಡಾಯಿಸಿದ ಬಳಿಕ ಆಸ್ಪತ್ರೆಗೆ ಬರುತ್ತಿದ್ದಾರೆ. ಅಷ್ಟರಲ್ಲಿ ಇಡೀ ಮನೆಯವರಿಗೆ ಅವರಿಂದ ಸೋಂಕು ಹರಡಿರುತ್ತದೆ. ಇವತ್ತು ಜಿಲ್ಲೆಯಲ್ಲಿ ಸೋಂಕಿನ ಸಂಖ್ಯೆ ಏರಿಕೆಯಾಗಲು ಇದು ಕೂಡ ಕಾರಣವಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಇಷ್ಟಕ್ಕೂ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊರೋನಾ ಪ್ರಕರಣವನ್ನು ನಿಯಂತ್ರಿಸುವ ಸಲುವಾಗಿ ಚಿಕಿತ್ಸೆ ನೀಡಲು ತಜ್ಞ ವೈದ್ಯರಿದ್ದಾರಾ ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೋದರೆ ಇಲ್ಲ ಎಂಬುದು ಎದ್ದು ಕಾಣಿಸುತ್ತಿದೆ. ಸಾಕಷ್ಟು ಪಿಜಿಷಿಯನ್, ಅನಸ್ತೆಷ್ಟಿಸ್ ಇಲ್ಲವೇ ಇಲ್ಲವಂತೆ. ಇಡೀ ಜಿಲ್ಲೆಗೆ ಒಬ್ಬರೇ ಪಿಜಿಷಿಯನ್ ಇರೋದು ಎಂದು ಹೇಳಲಾಗುತ್ತಿದೆ. ಹೀಗಾದರೆ ಹೇಗೆ? ಜನ ಎಚ್ಚರಿಕೆ ವಹಿಸಿ ಆದಷ್ಟು ಜಾಗ್ರತೆ ವಹಿಸದೆ ಹೋದರೆ ಉಳಿಗಾಲ ಇಲ್ಲ ಎಂಬುದಂತು ಸತ್ಯ.

By admin