ಬೆಂಗಳೂರು: ಕೋವಿಡ್-೧೯ ರ ಮೊದಲನೇ ಅಲೆಗಿಂತಲೂ ಎರಡನೇ ಅಲೆ ನಿರೀಕ್ಷೆಗೂ ಮೀರಿ ಎಲ್ಲೆಡೆ ಸಂದಿಗ್ದತೆಯನ್ನು ಹುಟ್ಟು ಹಾಕಿದೆ. ಅಲ್ಲದೆ, ವೈದ್ಯ, ಅರೆ ವೈದ್ಯಕೀಯ ಸಿಬ್ಬಂದಿ ಹಾಗೂ ಆರೋಗ್ಯ ಕಾರ್ಯಕರ್ತರ ಮೇಲೆ ಹೆಚ್ಚಿನ ಒತ್ತಡ ಹೇರಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಇಲ್ಲಿ ಅಭಿಪ್ರಾಯಪಟ್ಟರು.
ಕೋವಿಡ್ ಚಿಕಿತ್ಸಾ ಕಾರ್ಯದಲ್ಲಿ ತೊಡಗಿರುವ ರಾಜ್ಯದ ವಿವಿಧ ಜಿಲ್ಲಾ ಹಾಗೂ ತಾಲ್ಲೂಕು ವೈದ್ಯರೊಂದಿಗೆ ವೀಡಿಯೋ ಸಂವಾದ ನಡೆಸಿ ವೈದ್ಯರ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ಪಡೆದರಲ್ಲದೆ, ವೈದ್ಯರು ಸೇವೆಯಲ್ಲಿ ಎದುರಿಸುತ್ತಿರುವ ಸವಾಲುಗಳ ಬಗ್ಗೆಯೂ ಪ್ರಶ್ನಿಸಿ, ವೈದ್ಯರಲ್ಲಿ ಆತ್ಮ ವಿಶ್ವಾಸ ತುಂಬಿದರು.
ಕೋವಿಡ್ ಸಂದರ್ಭ ತಂದೊಡ್ಡಿರುವ ಸವಾಲುಗಳನ್ನು ಮಾನವೀಯ ನೆಲೆಗಟ್ಟಿನಲ್ಲಿ ಸಮರ್ಥವಾಗಿ ಎದುರಿಸಿ. ಲಭ್ಯವಿರುವ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಹಾಗೂ ಪಾರದರ್ಶಕತೆಯಿಂದ ಬಳಸಿ ಎಂದು ಹಿತ ನುಡಿದ ಅವರು ಇತರರ ಜೀವ ಉಳಿಸಲು ತಮಗೆ ಬಂದೊದಗಬಹುದಾದ ಅಪಾಯ ಲೆಕ್ಕಿಸದೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ವೈದ್ಯ, ಅರೆ ವೈದ್ಯಕೀಯ ಸಿಬ್ಬಂದಿ ಹಾಗೂ ಆರೋಗ್ಯ ಕಾರ್ಯಕರ್ತ ಸಮೂಹವನ್ನು ರಾಜ್ಯದ ಅಮೂಲ್ಯ ಆಸ್ತಿ ಎಂದು ಬಣ್ಣಿಸಿದರಲ್ಲದೆ, ತಮ್ಮ ಜೀವದ ಹಂಗು ತೊರೆದು ಕಾರ್ಯನಿರ್ವಹಿಸುತ್ತಿರುವ ಈ ವೃಂದಕ್ಕೆ ರಾಜ್ಯದ ಜನತೆಯ ಪರವಾಗಿ ಹಾಗೂ ವೈಯುಕ್ತಿಕವಾಗಿಯೂ ಕೃತಜ್ಞತೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಈಗಾಗಲೇ ಸ್ವತಃ ಕೋವಿಡ್ ಸೋಕಿಗೆ ತುತ್ತಾಗಿ, ಗುಣಮುಖರಾಗಿ ತಮ್ಮ ಸೇವೆಗೆ ಹಿಂದಿರುಗಿರುವ ವೈದ್ಯರ ಆರೋಗ್ಯ ಮತ್ತು ಅವರ ಮನೆಯವರ ಆರೋಗ್ಯವನ್ನು ವಿಚಾರಿಸಿದ ಮುಖ್ಯಮಂತ್ರಿಗಳ ನಡೆಗೆ ವೈದ್ಯರು ಸಹ ತಮ್ಮ ಕೃತಜ್ಞತೆಯನ್ನು ಸಲ್ಲಿಸಿದರು.

By admin