ಚಾಮರಾಜನಗರ:ಚಾಮರಾಜನಗರ ತಾಲೂಕಿನ ಕೊತ್ತಲವಾಡಿ ಗ್ರಾಮದಲ್ಲಿ ಇಂದು ನಡೆದ ಜಿಲ್ಲಾಧಿಕಾರಿಗಳ ನಡೆ ಗ್ರಾಮದ ಕಡೆ ಕಾರ್ಯಕ್ರಮದಲ್ಲಿ ಜನರ ಅಹವಾಲುಗಳನ್ನು ಆಲಿಸಿ ಪರಿಹಾರ ಸೂಚಿಸಲಾಯಿತು.
ಕೊತ್ತಲವಾಡಿ ಗ್ರಾಮದ ಗಂಗಾಧರೇಶ್ವರ ಶಾಲೆ ಆವರಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಉದ್ಘಾಟಿಸಿದರು.
ಆರಂಭದಲ್ಲಿಯೇ ಗ್ರಾಮಸ್ಥರು ಮಾತನಾಡಿ ಗ್ರಾಮದ ಕೆರೆಗೆ ಚರಂಡಿ ನೀರು ಹರಿದು ಹೋಗುತ್ತಿದೆ. ಊರಿನಲ್ಲಿರುವ ಶತಮಾನ ಕಂಡ ಶಾಲೆ ಕೊಠಡಿಗಳ ದುರಸ್ತಿಯಾಗಬೇಕಿದೆ. ಜಾನುವಾರುಗಳ ಸಂಖ್ಯೆಯ ಹೆಚ್ಚಿದ್ದು ಪ್ರತ್ಯೇಕ ಪಶು ವೈದ್ಯರ ನಿಯೋಜನೆ ಮಾಡಬೇಕಿದೆ. ೨೪*೭ ಆಸ್ಪತ್ರೆಗೆ ಸಿಬ್ಬಂದಿ ನೇಮಕವಾಗಬೇಕಿದೆ. ಶುದ್ದ ಕುಡಿಯುವ ನೀರಿನ ಘಟಕ, ಕೆ.ಎಸ್.ಆರ್.ಟಿಸಿ ಬಸ್ ಸೌಲಭ್ಯ, ಕೆರೆಗಳಿಗೆ ತಡೆಗೋಡೆ, ವಿದ್ಯುತ್ ಕಂಬಗಳು ಬೇಕಿದೆ. ಊರಿನ ರಸ್ತೆಗಳನ್ನು ಹೆಚ್ಚಿನ ಗುಣಮಟ್ಟದಲ್ಲಿ ಮಾಡಲು ಅಗತ್ಯ ಅನುದಾನ ಬಿಡುಗಡೆ ಮಾಡಬೇಕಿದೆ ಎಂದು ಗಮನಕ್ಕೆ ತಂದರು.
ಸ್ಮಶಾನ, ಬಕರ್ ಹುಕುಂ ಸಾಗುವಳಿ, ಇ-ಸ್ವತ್ತು, ಅಂಗನವಾಡಿ, ಖಾಯಂ ಗ್ರಾಮ ಲೆಕ್ಕಿಗರ ನೇಮಕ ಸೇರಿದಂತೆ ಇತರೆ ಅಗತ್ಯ ಸೌಲಭ್ಯಗಳನ್ನು ಒದಗಿಸಿಕೊಡಲು ಗ್ರಾಮಸ್ಥರು ಮನವಿ ಮಾಡಿದರು.
ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಮಾತನಾಡಿ ಗ್ರಾಮಕ್ಕೆ ಜಿಲ್ಲಾ ಖನಿಜ ಪ್ರತಿಷ್ಠಾನ ಅನುದಾನದಿಂದ ಶಾಲೆಗಳ ಅಭಿವೃದ್ದಿ ಮಾಡಲು ಸೂಚಿಸಲಾಗಿದೆ. ಶುದ್ದ ಕುಡಿಯುವ ನೀರಿನ ಘಟಕ ಸೌಲಭ್ಯಕ್ಕೆ ಶಾಸಕರ ಅನುದಾನದಲ್ಲಿ ನೆರವು ನೀಡಲಾಗುವುದು. ಸ್ಮಶಾನಕ್ಕಾಗಿ ಸರ್ಕಾರದ ನಿಯಮಾವಳಿ ಅನುಸಾರ ಭೂಮಿ ನೀಡಲಾಗುತ್ತದೆ ಎಂದರು.
ಸರಿಯಾದ ದಾಖಲೆಗಳನ್ನು ನೀಡಿದ್ದಲ್ಲಿ ಇ-ಸ್ವತ್ತು ನೀಡುವಲ್ಲಿ ಅಧಿಕಾರಿಗಳು ವಿಳಂಬ ಮಾಡಬಾರದು. ನಿಗದಿತ ವೇಳೆಗೆ ಇ-ಸ್ವತ್ತು ನೀಡುವ ಕಾರ್ಯವನ್ನು ನಿರ್ವಹಿಸಬೇಕು. ಜಿಲ್ಲಾ ಮಟ್ಟದ ಅಧಿಕಾರಿಗಳು ಜಿಲ್ಲಾಧಿಕಾರಿಗಳ ನಡೆ ಗ್ರಾಮದ ಕಡೆ ಕಾರ್ಯಕ್ರಮದಲ್ಲಿ ನೇರವಾಗಿ ಭಾಗವಹಿಸಲಿದ್ದಾರೆ. ಇಂತಹ ಸಂದರ್ಭಗಳಲ್ಲಿ ಸಮಸ್ಯೆಗಳನ್ನು ಪ್ರಸ್ತಾಪ ಮಾಡಿ ಪರಿಹಾರ ಪಡೆದುಕೊಳ್ಳಲು ಅವಕಾಶವಾಗುತ್ತದೆ. ಹೀಗಾಗಿ ಈ ಕಾರ್ಯಕ್ರಮವನ್ನು ಸದುಪಯೋಗ ಮಾಡಿಕೊಳ್ಳಬೇಕೆಂದು ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.
ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಮಾತನಾಡಿ ಸ್ಮಶಾನಕ್ಕಾಗಿ ಈಗಾಗಲೇ ಒಂದು ಎಕರೆ ಜಾಗ ಗುರುತಿಸಲಾಗಿದೆ. ಗ್ರಾಮದಲ್ಲಿ ಹೆಚ್ಚಿನ ಜನಸಂಖ್ಯೆ ಇರುವ ಹಿನ್ನೆಲೆಯಲ್ಲಿ ಎರಡು ಎಕರೆ ಜಾಗ ನೀಡಲು ಕ್ರಮ ತೆಗೆದುಕೊಳ್ಳಲಾಗುವುದು. ಬಸ್ ವ್ಯವಸ್ಥೆಯನ್ನು ಅಗತ್ಯಕ್ಕೆ ತಕ್ಕಂತೆ ಮಾಡಲು ಸೂಚಿಸಲಾಗಿದೆ ಎಂದರು.
ಊರಿನ ಶತಮಾನ ಕಂಡ ಸರ್ಕಾರಿ ಶಾಲೆ ಅಭಿವೃದ್ದಿಗೆ ಕ್ರಿಯಾ ಯೋಜನೆಯಲ್ಲಿ ಅನುಮೋದನೆ ನೀಡಲಾಗುತ್ತದೆ. ಪಶು ವೈದ್ಯರ ಖಾಯಂ ನಿಯೋಜನೆಗೂ ತಿಳಿಸಲಾಗಿದೆ. ಕೆರೆಗೆ ಕಲುಷಿತ ನೀರು ಸೇರದಂತೆ ಅಗತ್ಯವಿರುವ ಕೆಲಸ ನಿರ್ವಹಿಸಲು ಪರಿಶೀಲಿಸಲು ಸೂಚಿಸಲಾಗಿದೆ. ಇತರೆ ಎರಡು ಕೆರೆಗಳ ಸಂರಕ್ಷಣೆಗೆ ತಡೆಗೋಡೆ ನಿರ್ಮಿಸುವ ಸಂಬಂಧ ಪರಿಶೀಲಿಸಿ ಪ್ರಸ್ತಾವನೆ ಸಲ್ಲಿಸಲು ತಿಳಿಸಲಾಗಿದೆ. ಇಂದಿನ ಕಾರ್ಯಕ್ರಮದಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಸಂಬಂಧಪಟ್ಟ ಇಲಾಖೆಗಳಿಗೆ ಕಳುಹಿಸಿ ಶೀಘ್ರ ಪರಿಹರಿಸಲು ನಿರ್ದೇಶನ ನೀಡಲಾಗುವುದೆಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ತಿಳಿಸಿದರು.
ಇದೇ ವೇಳೆ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗೀತಾ, ಉಪಾಧ್ಯಕ್ಷರಾದ ಸತ್ಯಾನಂದ, ಉಪವಿಭಾಗಾಧಿಕಾರಿ ಗೀತಾ ಹುಡೇದ, ತಹಶೀಲ್ದಾರರಾದ ಬಸವರಾಜು, ಭೂ ದಾಖಲೆಗಳ ಉಪನಿರ್ದೇಶಕರಾದ ವಿದ್ಯಾಯಿನಿ, ಸಹಾಯಕ ಅರಣ್ಯ ಸಂರಕ್ಷಾಣಧಿಕಾರಿ ಸುರೇಶ್, ಇತರರು ಉಪಸ್ಥಿತರಿದ್ದರು.
ಗ್ರಾಮಕ್ಕೆ ಆಗಮಿಸಿದ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರನ್ನು ಗ್ರಾಮದ ಮುಖಂಡರು, ಶಾಲಾ ಮಕ್ಕಳು ಸಂಭ್ರಮದಿಂದ ಬರಮಾಡಿಕೊಂಡರು. ಎತ್ತಿನಗಾಡಿ ಮೆರವಣಿಗೆ ಮೂಲಕ ಕರೆತಂದರು. ಶಾಸಕರು, ಜಿಲ್ಲಾಧಿಕಾರಿಯವರು ಗ್ರಾಮ ಪಂಚಾಯತ್ ನ ಗ್ರಂಥಾಲಯ, ಶತಮಾನದ ಸರ್ಕಾರಿ ಶಾಲೆಗೆ ಭೇಟಿ ನೀಡಿದರು. ಕಾರ್ಯಕ್ರಮದಲ್ಲಿ ಏರ್ಪಡಿಸಲಾಗಿದ್ದ ಕೃಷಿ ಪ್ರಾತ್ಯಕ್ಷಿಕೆ ಪ್ರದರ್ಶನವನ್ನು ವೀಕ್ಷಿಸಿದರು.