ಮಡಿಕೇರಿ : ಕೊಡಗಿನಲ್ಲಿ ಮೊದಲೆಲ್ಲ ಮುಂಗಾರು ಮಳೆ ಆರಂಭವಾಗುತ್ತಿದ್ದಂತೆಯೇ ಜನ ಕೃಷಿ ಚಟುವಟಿಕೆಗಳಲ್ಲಿ ನಿರತರಾಗಿ ಬಿಡುತ್ತಿದ್ದರು. ಜತೆಗೆ ಮಳೆಗಾಲ ಎದುರಿಸಲು ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದರು. ಆದರೆ ಕಳೆದ ಮೂರು ವರ್ಷಗಳಿಂದ ಎಲ್ಲವೂ ಬದಲಾಗಿದೆ. ಮಹಾಮಳೆಗೆ ಯಾವ ಬೆಟ್ಟ ಕುಸಿದು ಬೀಳುತ್ತೋ ಎಂಬ ಭೀತಿ ಎಲ್ಲರನ್ನು ಕಾಡುತ್ತಿದೆ.

ಇದಕ್ಕೆ ಕಳೆದ ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಒಂದಲ್ಲ ಒಂದು ಬೆಟ್ಟಗಳು ಕುಸಿಯುತ್ತಿರುವುದೇ ಕಾರಣವಾಗಿದೆ. 2018, 19 ಮತ್ತು 20 ಹೀಗೆ ಈ ಮೂರು ವರ್ಷಗಳಲ್ಲಿ ಊಹಿಸಲು ಸಾಧ್ಯವಾಗದ ಸ್ಥಳಗಳಲ್ಲಿ ಬೆಟ್ಟ ಕುಸಿದು ಪ್ರಾಣ ಹಾನಿ ಸಂಭವಿಸಿದೆ. ಇದನ್ನು ಗಮನಿಸಿದರೆ ಮಳೆ ಬಂತೆಂದರೆ ಜನ ಭಯ ಪಡುವಂತಾಗಿದೆ.

2018ರಲ್ಲಿ ಮೊದಲ ಬಾರಿಗೆ ಮಡಿಕೇರಿ ಮತ್ತು ಸೋಮವಾರಪೇಟೆಗಳ ಗುಡ್ಡಗಳು ಕುಸಿದು ಹಲವು ಗ್ರಾಮಗಳು ನಾಶವಾದವು. ಅದಾದ ನಂತರ ವೀರಾಜಪೇಟೆ ತಾಲೂಕಿನ ತೋರಾ ಎಂಬಲ್ಲಿನ ಗುಡ್ಡ ಕುಸಿದ ಪರಿಣಾಮ 10 ಮಂದಿ ನಾಪತ್ತೆಯಾಗಿ ಆ ಪೈಕಿ ಆರು ಮಂದಿಯ ಶವ ದೊರೆತು ನಾಲ್ವರ ಶವ ಸಿಗಲೇ ಇಲ್ಲ. ಹಾಗೆಯೇ 2020ರಲ್ಲಿ ತಲಕಾವೇರಿಯಲ್ಲಿ ಗಜಗಿರಿ ಬೆಟ್ಟ ಕುಸಿದು ಐದು ಮಂದಿ ಭೂಸಮಾಧಿಯಾಗಿದ್ದರು. ಈ ಪೈಕಿ ಇಬ್ಬರ ಮೃತದೇಹ ಕೊನೆಗೂ ಪತ್ತೆಯಾಗಲೇ ಇಲ್ಲ. ಇದೆಲ್ಲವನ್ನು ಗಮನಿಸಿದರೆ ಈ ಬಾರಿ ಯಾವ ಬೆಟ್ಟ ಕುಸಿಯುತ್ತದೋ ಎಂಬ ಚಿಂತೆ ಕಾಡಲಾರಂಭಿಸಿದೆ.

ಜಿಲ್ಲೆಗೊಂದು ಸುತ್ತು ಹೊಡೆದರೆ ನಗರ ಪ್ರದೇಶಕ್ಕೆ ಹೊಂದಿಕೊಂಡಂತೆ ಇರುವ ಬೆಟ್ಟಗುಡ್ಡಗಳನ್ನು ಅಕ್ರಮಿಸಿಕೊಂಡು ಮನೆಗಳನ್ನು ನಿರ್ಮಿಸಿ ವಾಸ ಮಾಡುತ್ತಿದ್ದಾರೆ. ಇಂತಹ ಅಪಾಯಕಾರಿ ಪ್ರದೇಶಗಳನ್ನು ಗುರುತಿಸಿ ಅಲ್ಲಿಂದ ಜನರನ್ನು ಸ್ಥಳಾಂತರ ಮಾಡುವ ಪ್ರಕ್ರಿಯೆ ಈಗಾಗಲೇ ನಡೆದಿದೆ. ಆದರೂ ಬಹಳಷ್ಟು ಬೆಟ್ಟಗಳಲ್ಲಿ ಜನ ಇನ್ನೂ ಜನ ವಾಸ ಮಾಡುತ್ತಲೇ ಇದ್ದಾರೆ. ಅದರಲ್ಲೂ ವೀರಾಜಪೇಟೆ ಪಟ್ಟಣದ ಅಯ್ಯಪ್ಪ ಬೆಟ್ಟ ಮತ್ತು ನೆಹರು ನಗರದಲ್ಲಿನ ಕಡಿದಾದ ಪ್ರದೇಶದಲ್ಲಿ  ವಾಸ್ತವ್ಯ ಹೂಡಿರುವ ಕುಟುಂಬಗಳ ಬಗ್ಗೆ ಜಿಲ್ಲಾಡಳಿತಕ್ಕೆ ಇದೀಗ ಚಿಂತೆ ಶುರುವಾಗಿದೆ.

ಇಲ್ಲಿ ನೆಲೆ ಕಂಡು ಕೊಂಡಿರುವ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಲು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎನ್ನಲಾಗುತ್ತಿದ್ದು, ತಾತ್ಕಾಲಿಕವಾಗಿ ಮಳೆಗಾಲದ ಅವಧಿಯಲ್ಲಿ ಸ್ಥಳಾಂತರಿಸಲು ಅಗತ್ಯ ಕ್ರಮ ವಹಿಸುವಂತೆ ವೀರಾಜಪೇಟೆ ತಾಲೂಕು ತಹಶೀಲ್ದಾರರು ಮತ್ತು ಪಟ್ಟಣ ಪಂಚಾಯಿತಿ ಇಓ ಗಳಿಗೆ ಜಿಲ್ಲಾಧಿಕಾರಿ ಚಾರುಲತ ಸೋಮಲ್ ಅವರು ಈ ಹಿಂದೆಯೇ ನಿರ್ದೇಶನ ನೀಡಿದ್ದಾರೆ ಎನ್ನಲಾಗಿದೆ. ವಿರಾಜಪೇಟೆ ಪಟ್ಟಣ ಜೊತೆಗೆ ತಾಲ್ಲೂಕಿನ ಹಲವು ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಮಳೆಗಾಲದ ವೇಳೆ ತಾತ್ಕಾಲಿಕವಾಗಿ ಸ್ಥಳಾಂತರ ಮಾಡಲು ಕ್ರಮವಹಿಸಲು ಸೂಚಿಸಲಾಗಿದೆ.

ಮಳೆಗಾಲದ ವೇಳೆಯಲ್ಲಿ ಅಯ್ಯಪ್ಪ ಬೆಟ್ಟ ಹಾಗೂ ನೆಹರು ನಗರದ ಒಟ್ಟು 57 ಕುಟುಂಬಗಳನ್ನು ಸ್ಥಳಾಂತರಿಸುವ ಸಾಧ್ಯತೆಯಿದೆ. ವಿರಾಜಪೇಟೆ ಪಟ್ಟಣದ ವಿಜಯನಗರದಲ್ಲಿ ಸುಮಾರು 40 ಕುಟುಂಬಗಳಿಗೆ ಪ್ರವಾಹದಿಂದ ತೊಂದರೆಯಾಗುವ ಸಂಭವ ಇರುವುದರಿಂದ ಆ ಬಗ್ಗೆಯೂ  ಕ್ರಮ ಕೈಗೊಳ್ಳಲು ಚಿಂತನೆ ನಡೆಸಲಾಗಿದೆ. ತೋರ ಬೆಟ್ಟ ವ್ಯಾಪ್ತಿಯಲ್ಲಿ ಗಣಿಗಾರಿಕೆಯಿಂದಾಗಿ ಈ ಹಿಂದೆ ಬೆಟ್ಟ ಕುಸಿದಿದೆ ಎಂದು ಹೇಳಲಾಗುತ್ತಿದೆ. ಅದು ಏನೇ ಇರಲಿ ಬೆಟ್ಟ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರೇ ಮಳೆಗಾಲದಲ್ಲಿ ಎಚ್ಚರಿಕೆ ವಹಿಸಿ ಮುಂಜಾಗ್ರತಾ ಕ್ರಮಗಳನ್ನು ವಹಿಸುವುದು ಅಗತ್ಯವಿದೆ.

By admin