ಚಾಮರಾಜನಗರ: ಸಮಾಜದಲ್ಲಿ ಎಲ್ಲರೂ ಸಮಾನರು ಎಂಬ ಸಂದೇಶವನ್ನು ಸಾರಿದ ಕೈವಾರ ತಾತಯ್ಯ ಅವರು ಅಂದಿನ ಕಾಲದಲ್ಲೇ ಅನಿಷ್ಠ ಪದ್ಧತಿಗಳ ವಿರುದ್ಧ ಹೋರಾಡಿದವರು ಎಂದು ನಗರಸಭೆ ಅಧ್ಯಕ್ಷರಾದ ಸಿ.ಎಂ. ಆಶಾ ಅವರು ತಿಳಿಸಿದರು.
ನಗರದ ವರನಟ ಡಾ. ರಾಜ್‌ಕಮಾರ್ ಜಿಲ್ಲಾ ರಂಗಮಂದಿರದಲ್ಲಿರುವ ಕನ್ನಡ ಸಂಸ್ಕೃತಿ ಇಲಾಖೆಯ ಕಚೇರಿ ಸಭಾಂಗಣದಲ್ಲಿ ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಶ್ರೀ ಯೋಗಿನಾರೇಯಣ ಯತೀಂದ್ರರ ಜಯಂತಿ (ಕೈವಾರ ತಾತಯ್ಯ) ಆಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೈವಾರ ತಾತಯ್ಯ ಅವರು ಸಮಾಜದಲ್ಲಿ ಬೇರೂರಿದ್ದ ಹಲವು ಮೂಢನಂಬಿಕೆ ಅನಿಷ್ಟ ಪದ್ದತಿಗಳ ವಿರುದ್ದ ಹೋರಾಟ ಮಾಡಿದರು. ಅವರ ಸಂದೇಶ, ತತ್ವಗಳು ಸಮಾಜಕ್ಕೆ ಅತ್ಯಂತ ಅವಶ್ಯಕವಾಗಿವೆ ಎಂದು ಆಶಾ ಅವರು ತಿಳಿಸಿದರು.
ಮುಖ್ಯ ಭಾಷಣಕಾರರಾಗಿದ್ದ ಮೈಸೂರಿನ ಸೊಮಾನಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ. ರಮೇಶ್ ಅವರು ಮಾತನಾಡಿ ನಾಡು ಕಂಡ ಅಪೂರ್ವ ಸಂತರಲ್ಲಿ ಶ್ರೀ ಯೋಗಿನಾರೇಯಣ ಯತೀಂದ್ರರ ಕೂಡ ಒಬ್ಬರು. ಸಮ ಸಮಾಜಕ್ಕೆ ಹೊರಾಡಿದ ದೈವಭಕ್ತರು ಇವರು. ವರ್ಣ ಭೇಧ ನೀತಿಯನ್ನು ಕಟುವಾಗಿ ಟೀಕಿಸಿದರು. ಅಂದಿನ ಸಮಾಜವನ್ನು ತತ್ವಪದಗಳು, ಸಾಹಿತ್ಯ, ಪದ್ಯಗಳ ಮೂಲಕ ಎಚ್ಚರಿಸಿದರು ಎಂದರು.
ಆಡಂಬರದ ಪೂಜೆ ಪುರಸ್ಕಾರಗಳ ವಿರುದ್ಧ ಹೋರಾಡಿದರು. ಆತ್ಮಶುದ್ಧಿ, ತ್ಯಾಗದಿಂದ ಮಾತ್ರ ದೇವರನ್ನು ಒಲಿಸಲು ಸಾಧ್ಯ ಎಂದು ಕಾಲಜ್ಞಾನವನ್ನು ನುಡಿದವರು ದೈವಭಕ್ತರಾದ ಶ್ರೀ ಯೋಗಿನಾರೇಯಣ ಯತೀಂದ್ರ ಅವರು ಎಂದು ಪ್ರೊ. ಡಾ. ರಮೇಶ್ ಅವರು ತಿಳಿಸಿದರು.
ನಗರಸಭೆಯ ಸದಸ್ಯರಾದ ಹೆಚ್. ಎಸ್. ಮಮತ ಅವರು ಕಾರ್ಯಕ್ರಮ ಉದ್ಘಾಟಿಸಿದರು.
ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿಯವರಾದ ಧರಣೇಶ್, ದಾಸಬಣಜಿಗರ ಸಂಘದ ಜಿಲ್ಲಾ ಅಧ್ಯಕ್ಷರಾದ ಎನ್. ಶ್ರೀನಿವಾಸ್‌ಶೆಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಗುರುಲಿಂಗಯ್ಯ, ಸಮುದಾಯದ ಮುಖಂಡರಾದ ರಂಗರಾಮು, ಚಂದ್ರಶೇಖರ್ ಇತರರು ಹಾಜರಿದ್ದರು.
ವೇದಿಕೆ ಕಾರ್ಯಕ್ರಮಕ್ಕೂ ಮೊದಲು ನಡೆದ ಶ್ರೀ ಯೋಗಿನಾರೇಯಣ ಯತೀಂದ್ರರ (ಕೈವಾರ ತಾತಯ್ಯ) ಅವರ ಭಾವಚಿತ್ರದ ಮೆರವಣಿಗೆಗೆ ಚಾಮರಾಜೇಶ್ವರ ದೇವಾಲಯದ ಬಳಿ ನಗರಸಭೆ ಅಧ್ಯಕ್ಷರಾದ ಆಶಾ ನಟರಾಜು ಅವರು ಚಾಲನೆ ನೀಡಿದರು.
