ಮೈಸೂರು: ಕೆ.ಆರ್ ಕ್ಷೇತ್ರದಲ್ಲಿ ನಡೆಯುತ್ತಿರುವ ಕೋವಿಡ್ ಲಸಿಕಾ ಅಭಿಯಾನ – ನಿಮ್ಮ ಆರೋಗ್ಯದ ಕಡೆ ನಮ್ಮ ಹೆಜ್ಜೆ ಕಾರ್ಯಕ್ರಮದ ಮುಂದುವರೆದ ಭಾಗವಾಗಿ ಗುರುವಾರ ಬೆಳಗ್ಗೆ 9 ರಿಂದ ಸಂಜೆ 5 ರ ವರೆಗೆ ಕಾಮಾಕ್ಷಿ ಆಸ್ಪತ್ರೆ ಹಾಗೂ ಕಾವೇರಿ ಆಸ್ಪತ್ರೆಯ ಸಹಯೋಗದೊಂದಿಗೆ ನಡೆಯಿತು.
ಜೂನ್ 16 ಮತ್ತು 17 ರಂದು ನೋಂದಣಿ ಮಾಡಿಕೊಂಡವರಿಗೆ ಕುವೆಂಪುನಗರದ ವಾರ್ಡ್ ನಂ 47 – ಕರ್ನಾಟಕ ಪಬ್ಲಿಕ್ ಶಾಲೆ, ಕುವೆಂಪು ನಗರ , ವಾರ್ಡ್ 48 ರ ಬಾಲೋದ್ಯಾನ (ಜಯನಗರ), ವಾರ್ಡ್ 49 ರ ಜೆ.ಎಸ್.ಎಸ್ ಶಾಲೆ, ಲಕ್ಷ್ಮೀಪುರಂ ವಾರ್ಡ್ 63 ರ ಜೆ.ಎಸ್.ಎಸ್ ಪಬ್ಲಿಕ್ ಶಾಲೆಯಲ್ಲಿ (ಜೆ.ಪಿ.ನಗರ) ಲಸಿಕಾ ಅಭಿಯಾನ ನಡೆಸಲಾಯಿತು.
ಕುವೆಂಪುನಗರ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಹಾಗೂ ಲಕ್ಷ್ಮೀಪುರಂ ನ ಜೆ.ಎಸ್.ಎಸ್ ಶಾಲೆಯಲ್ಲಿ ಸಾಂಕೇತಿಕವಾಗಿ ನಡೆದ ಕಾರ್ಯಕ್ರಮವನ್ನು ಕಾಮಾಕ್ಷಿ ಆಸ್ಪತ್ರೆಯ ಟ್ರಸ್ಟಿಗಳಾದ ಮಹೇಶ್ ಶೆಣೈ ಹಾಗೂ ಜನರಲ್ ಮ್ಯಾನೇಜರ್ ಪ್ರಸನ್ನ ರವರು ನೆರವೇರಿಸಿದರು. ಇನ್ನು ಲಕ್ಷ್ಮೀಪುರಂ ನ ಜೆ.ಎಸ್.ಎಸ್ ಶಾಲೆಯಲ್ಲಿ ನಡೆದ ಕಾರ್ಯಕ್ರಮವನ್ನು ಕಾವೇರಿ ಆಸ್ಪತ್ರೆಯ ಡಾ. ಚಂದ್ರಶೇಖರ್ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಎಸ್.ಎ.ರಾಮದಾಸ್ ಅವರು ವಿಶೇಷವಾಗಿ ಕಾವೇರಿ ಹಾಗೂ ಕಾಮಾಕ್ಷಿ ಆಸ್ಪತ್ರೆಯವರು ಉತ್ತಮವಾದ ಸೇವೆಯನ್ನು ಜನತೆಗೆ ನೀಡುತ್ತಿದ್ದಾರೆ, ಜನರು ಲಸಿಕಾ ಅಭಿಯಾನಕ್ಕೆ ಸಾಗರೋಪಾದಿಯಲ್ಲಿ ಬರುತ್ತಿದ್ದಾರೆ. 53 ನೇ ವಾರ್ಡ್ ನಿಂದ ಕೆ.ಆರ್ ಕ್ಷೇತ್ರದಲ್ಲಿ ಲಸಿಕಾಭಿಯಾನ ಪ್ರಾರಂಭವಾಗಿದೆ. ಮುಂದಿನ ಜೂನ್ 30 ರ ಒಳಗೆ ಎಲ್ಲಾ ವಾರ್ಡ್ ಗಳಲ್ಲೂ ಲಸಿಕಾ ಅಭಿಯಾನ ನಡೆಸಲಿದ್ದೇವೆ, ಇದಕ್ಕೆ ಸಾರ್ವಜನಿಕರು ಲಸಿಕೆ ತೆಗೆದುಕೊಂಡು ಸಹಕರಿಸಬೇಕು ಎಂದರು.
ಮೂಡಾ ಅಧ್ಯಕ್ಷ ಹೆಚ್.ವಿ ರಾಜೀವ್ ಮಾತನಾಡಿ ಕೆ.ಆರ್ ಕ್ಷೇತ್ರದಲ್ಲಿ ಈ ಹಿಂದೆ ಮಾಸ್ ಟೆಸ್ಟ್ ಡ್ರೈವ್ ಅನ್ನು ಮಾಡಿದ್ದರು ಇದೀಗ 10 ಆಂದೋಲನದ ರೀತಿಯಲ್ಲಿ ಲಸಿಕಾ ಅಭಿಯಾನವನ್ನ ಹಮ್ಮಿಕೊಂಡಿದ್ದಕ್ಕೆ ಶಾಸಕರಿಗೆ ಧನ್ಯವಾದ ತಿಳಿಸಿದರು. ಕಾರ್ಯಕ್ರಮದಲ್ಲಿ ಕ್ಷೇತ್ರಾದ್ಯಂತ 7600 ಲಸಿಕಾ ಡೋಸ್ ಗಳನ್ನು ನೀಡಲಾಯಿತು. ಇದೇ ವೇಳೆ ಎಲ್ಲ 4 ವಾರ್ಡ್ ಗಳಲ್ಲಿ ವಿಶೇಷವಾಗಿ ಸೇವೆ ಒದಗಿಸಿದ ಆರೋಗ್ಯ ಸಿಬ್ಬಂದಿ, ವೈದ್ಯರು, ಪೊಲೀಸ್ ಸಿಬ್ಬಂದಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ನಗರಪಾಲಿಕಾ ಸದಸ್ಯರಾದ ಶಿವಕುಮಾರ್, ಸೌಮ್ಯ ಉಮೇಶ್, ನಗರಪಾಲಿಕಾ ಆರೋಗ್ಯ ಅಧಿಕಾರಿಗಳು, ವಲಯ ಆಯುಕ್ತರುಗಳು ಹಾಗೂ ಅಭಿವೃದ್ಧಿ ಅಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ಪೊಲೀಸ್ ಠಾಣೆಯ ನಿರೀಕ್ಷಕರು ಹಾಜರಿದ್ದರು.